ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸನಾತನ ಧರ್ಮ ಹಿಂದುಗಳ ಸ್ವಾಭಿಮಾನ ರಕ್ಷಣೆ ಮಾಡುವವರು ಮುಖ್ಯಮಂತ್ರಿ ಆಗಬೇಕಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.ಶಿವಮೊಗ್ಗ ವಿದ್ಯಾನಗರದ ವೀರಕೇಸರಿ ಯುವಕರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಗಣಪತಿ ರಾಜಬೀದಿ ಉತ್ಸವದಲ್ಲಿ ಅವರು ಪಾಲ್ಗೊಂಡು ಮಾತನಾಡಿ, 2028ರಿಂದ ಜೆಸಿಬಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಹಿಂದುಗಳ ಮೇಲೆ ದಬ್ಬಾಳಿಕೆ ಮಾಡುವವರನ್ನು ಜೆಸಿಬಿಗಳ ಮೂಲಕ ನಿರ್ನಾಮ ಮಾಡಲಾಗುವುದು ಎಂದು ಹರಿಹಾಯ್ದರು.
ರಾಜ್ಯದಲ್ಲಿ ಜೆಸಿಬಿ ಸರ್ಕಾರ ಬಂದರೆ ಮೊದಲು ಪೊಲೀಸರಿಗೆ ಎಕೆ 47 ಗನ್ ನೀಡಲಾಗುವುದು. ನಮ್ಮ ಸರ್ಕಾರ ಬಂದರೆ ಡಿಜೆಗೆ ಹಣ ಕೊಡಬೇಕಿಲ್ಲ. ಮಸೀದಿ ಮುಂದೆ ಕುಣಿಯುವುದಕ್ಕೆ ನಿರ್ಬಂಧ ಇಲ್ಲ ಎಂದ ಅವರು, ಯತ್ನಾಳ್‌ಗಾಗಿ ಜನ ಸೇರುತ್ತಿಲ್ಲ ಬದಲಾಗಿ ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ ಜನ ಸೇರುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ 108, 110 ಸೀಟು ಅಲ್ಲ 150 ಸೀಟು ಗೆದ್ದು ಸರ್ಕಾರ ರಚನೆ ಮಾಡುತ್ತೇವೆ. ಕರ್ನಾಟಕದಲ್ಲಿ ಇನ್ಮುಂದೆ ನಾಟಕ ಮಾಡುವ ಕಂಪನಿಗಳು ಬಂದ್ ಆಗುತ್ತವೆ ಎಂದು ಕಿಡಿಕಾರಿದರು.ಕರ್ನಾಟಕದಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ. ಆದರೆ, ಜೆಸಿಬಿ ಸರ್ಕಾರದಲ್ಲಿ ಹೊಂದಾಣಿಕೆ ರಾಜಕಾರಣ ಮಾಡುವವರ ಆಟ ನಡೆಯುವುದಕ್ಕೆ ಬಿಡುವುದಿಲ್ಲ. ಔರಂಗಜೇಬನ ಕಟೌಟ್ ಹಾಕುವವರ ಆಟ 2028 ರಿಂದ ನಡೆಯುವುದಿಲ್ಲ.
ಔರಂಗಜೇಬನ ಕಟೌಟ್ ಹಾಕಿದವರ ಮನೆಗಳ ಮೇಲೆ ಕೇಸರಿ ಧ್ವಜ ಹಾರುತ್ತದೆ. ಗಣಪತಿ ಮೆರವಣಿಗೆ ಮೇಲೆ ಕಲ್ಲು ಎಸೆದರೆ ಜೆಸಿಬಿ ಗರ್ಜನೆ ಮಾಡುತ್ತದೆ ಎಂದು ಹೇಳಿದರು.ಕಾಂಗ್ರೆಸ್ ಸರ್ಕಾರದಲ್ಲಿ ಡಿಜೆ ಹಾಕುವುದಕ್ಕೆ ಅವಕಾಶ ಇಲ್ಲ. ಆದರೆ, ದಿನಕ್ಕೆ ಐದು ಬಾರಿ ನಮಾಜು ಮಾಡುವುದಕ್ಕೆ ಸಂಪೂರ್ಣ ಅನುಮತಿ ಇದೆ. ಶಿವಮೊಗ್ಗದಲ್ಲಿ ಡಿಜೆಗೆ ಪೊಲೀಸರು ಒಂದು ಲಕ್ಷ ರು. ಠೇವಣಿ ಪಡೆದಿದ್ದಾರೆ. ಹಾಗಿದ್ದರೆ 5 ಬಾರಿ ನಮಾಜು ಮಾಡುವವರಿಂದ ಇವರು ಎಷ್ಟು ಠೇವಣಿ ಪಡೆದಿದ್ದಾರೆ ಎಂದು ಪ್ರಶ್ನಿಸಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಹಿಂದುತ್ವ ಎಂಬುದೇ ಇರಲಿಲ್ಲ ಕೇಸರಿ ಶಾಲು ಹಾಕುವವರು ಇರಲಿಲ್ಲ. ನಾನು ಹೋದಾಗ 15 ರಿಂದ 20 ಸಾವಿರ ಯುವಕರು ಕೇಸರಿ ಶಾಲು ಹಾಕಿಕೊಂಡು ಬಂದಿದ್ದರು, ಅದು ಹಿಂದುತ್ವದ ಶಕ್ತಿ ಎಂದು ಹೇಳಿದರು.
ರಾಜಬೀದಿ ಉತ್ಸವದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಜಿಪಂ ಸದಸ್ಯ ಮಾಜಿ ಕೆ.ಇ.ಕಾಂತೇಶ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.