ಕನಕಪುರ: ತಾಲೂಕಿನ ಕಸಬಾ ಹೋಬಳಿ ಚಿಕ್ಕಮುದುವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು
ಕನಕಪುರ: ತಾಲೂಕಿನ ಕಸಬಾ ಹೋಬಳಿ ಚಿಕ್ಕಮುದುವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಅಣಜವಾಡಿ ಸಮೀಪದ ತೋಟದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ, ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಾಯಕತ್ವವನ್ನು ನಂಬಿ ಪಕ್ಷಕ್ಕೆ ಸೇರ್ಪಡೆಯಾಗಿರುವ ಎಲ್ಲರಿಗೂ ಸ್ವಾಗತ ಕೋರಿದರು.ಡಿ.ಕೆ.ಶಿವಕುಮಾರ್ ಅವರು 4 ದಶಕಗಳ ರಾಜಕೀಯ ಜೀವನದಲ್ಲಿ ಯಾರನ್ನೂ ದ್ವೇಷಿಸುವ ಮನೋಭಾವ ಹೊಂದಿಲ್ಲ. ಕನಕಪುರ ತಾಲೂಕಿನ ಸರ್ವತೋಮುಖ ಅಭಿವೃದ್ಧಿ ಉದ್ದೇಶದಿಂದ ನೀವು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೀರಿ. ಈ ಹಿಂದೆ ಕೂಡ ತಾಲೂಕಿನ ಹಲವು ಜೆಡಿಎಸ್ ಪ್ರಮುಖ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುತ್ತಿದ್ದೇವೆ. ಪಕ್ಷಕ್ಕೆ ಸೇರ್ಪಡೆಯಾದ ಕಾರ್ಯಕರ್ತರನ್ನು ಒಗ್ಗಟ್ಟಿನಿಂದ ಮುನ್ನಡೆಸುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಡಿ.ಕೆ.ಸುರೇಶ್ ಕರೆ ನೀಡಿದರು.
ಜೆಡಿಎಸ್ ಪಕ್ಷದ ರೈತ ಸ್ವಾಭಿಮಾನ ಯಾತ್ರೆ ರೈತರ ಹಿತದೃಷ್ಟಿಯಿಂದ ನಡೆಯುತ್ತಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿರುವುದನ್ನು ಸಹಿಸಲಾಗದೆ ಹೊಟ್ಟೆಕಿಚ್ಚಿನಿಂದ ಈ ಯಾತ್ರೆ ನಡೆಸಲಾಗುತ್ತಿದೆ. ಇದು ರೈತ ಸ್ವಾಭಿಮಾನದ ಯಾತ್ರೆಯಲ್ಲ, ಹೊಟ್ಟೆಕಿಚ್ಚಿನ ಹೋರಾಟದ ಯಾತ್ರೆಯಾಗಿದೆ. ರಾಜ್ಯದಲ್ಲಿ ಭೀಕರ ಬರಗಾಲದಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಒಂದು ಕಡೆ ಅತಿವೃಷ್ಟಿ, ಮತ್ತೊಂದು ಕಡೆ ಅನಾವೃಷ್ಟಿಯಿಂದ ಕೃಷಿ ಕ್ಷೇತ್ರ ತತ್ತರಿಸುತ್ತಿದೆ. ಇಂತಹ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸಿ ರೈತರಿಗೆ ನೆರವಾಗಬೇಕಾದ ವಿರೋಧ ಪಕ್ಷಗಳು ನಿತ್ಯ ರಾಜಕೀಯ ನಾಟಕ ಮಾಡುತ್ತಾ ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಆರೋಪಿಸಿದರು.ಜೆಡಿಎಸ್‌ಗೆ ಸುಳ್ಳೇ ಮನೆದೇವರು. ಕನಕಪುರದ ಇತಿಹಾಸವೇ ತಿಳಿಯದ ಕೆಲವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕನಕಪುರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ ಎಂದು ಪ್ರಚಾರ ಮಾಡುತ್ತಿದ್ದಾರೆ. ರಾಜಮಹಾರಾಜರ ಕಾಲದಲ್ಲಿಯೇ ಇಲ್ಲಿ ವಿದ್ಯುತ್ ಸಂಪರ್ಕವಿತ್ತು ಎಂಬ ಇತಿಹಾಸ ಅವರು ಅರಿತುಕೊಳ್ಳಬೇಕು. ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸುತ್ತಿದ್ದವರೇ ಇಂದು ಬಹುತೇಕ ಪರಿಹಾರ ಪಡೆಯುತ್ತಿದ್ದಾರೆ. ಹಾಗಾದರೆ ಅವರ ಹೋರಾಟದ ಉದ್ದೇಶವೇನು? ಹೋರಾಟ ಎಲ್ಲಿಗೆ ಬಂತು ಎಂದು ಪ್ರಶ್ನಿಸುವ ಮೂಲಕ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ದಿನದಿಂದಲೂ ಒಂದಲ್ಲೊಂದು ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ವಿರೋಧಿ ಹೋರಾಟಗಳೇ ನಮಗೆ ಮತ್ತಷ್ಟು ಸ್ಪೂರ್ತಿ ನೀಡುತ್ತವೆ. ರಾಜಕಾರಣದಲ್ಲಿ ಎದುರಾಳಿಗಳು ಬಲಿಷ್ಠರಾಗಿದ್ದರೆ ನಾವು ಇನ್ನಷ್ಟು ಜಾಗೃತರಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸವಾಲು ಎದುರಾದಂತಾಗುತ್ತದೆ ಎಂದು ಹೇಳಿದರು.ಚಿಕ್ಕಮುದುವಾಡಿ ಗುರುಕಾರ್ ಮಧು ನೇತೃತ್ವದಲ್ಲಿ ನಂದೀಶ್, ಸಂಜಯ್, ಪ್ರಜ್ವಲ್, ರಘು, ಶಿವಕುಮಾರ್, ಪ್ರಸನ್ನ, ರಾಜೇಂದ್ರ, ಪುನೀತ್, ರಾಜು, ಚಂದ್ರ, ತಿಮ್ಮಪ್ಪ, ವೆಂಕಟೇಶ್ ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಹಲವು ಕಾರ್ಯಕರ್ತರು ಈ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್. ರವಿ, ಮುಖಂಡರಾದ ಡಿ.ಎಂ.ವಿಶ್ವನಾಥ್, ಕೆ.ಎನ್.ದಿಲೀಪ್, ಕಾಳಪ್ಪ, ಹೊರಳಗಲ್ಲು ರಮೇಶ್, ರಾಜಶೇಖರ್, ಚಿಕ್ಕೇನಹಳ್ಳಿ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುತ್ತುರಾಜು ಇತರರು ಉಪಸ್ಥಿತರಿದ್ದರು.ಕೆಕೆಪಿ ಸುದ್ದಿ 02 :
ಕನಕಪುರ ಚಿಕ್ಕಮುದುವಾಡಿ ಗ್ರಾಪಂ ವ್ಯಾಪ್ತಿಯ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿ.ಕೆ.ಸುರೇಶ್, ಎಸ್.ರವಿ, ಡಿ.ಎಂ.ವಿಶ್ವನಾಥ್, ದಿಲೀಪ್, ಮುತ್ತುರಾಜು ಉಪಸ್ಥಿತರಿದ್ದರು.