ಹಾಲು ಸೇರಿದಂತೆ ದಿನ ಬಳಕೆ ವಸ್ತುಗಳು ಹಾಗೂ ಸರ್ಕಾರಿ ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಜೆಡಿಎಸ್ ಗ್ರೇಟರ್ ಬೆಂಗಳೂರು ಘಟಕದ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ನಗರದ ಫ್ರೀಡಂ ಪಾರ್ಕಿನಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಾಲು ಸೇರಿದಂತೆ ದಿನ ಬಳಕೆ ವಸ್ತುಗಳು ಹಾಗೂ ಸರ್ಕಾರಿ ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಜೆಡಿಎಸ್ ಗ್ರೇಟರ್ ಬೆಂಗಳೂರು ಘಟಕದ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ನಗರದ ಫ್ರೀಡಂ ಪಾರ್ಕಿನಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.ಕರ್ನಾಟಕ ಹಾಲು ಒಕ್ಕೂಟಗಳ ಮಹಾಮಂಡಳಿ (ಕೆಎಂಎಫ್) ವತಿಯಿಂದ ಸಾರ್ವಜನಿಕರಿಗೆ ವಿತರಿಸುವ ಹಾಲು, ಮೊಸರು, ತುಪ್ಪ, ಬೆಣ್ಣೆ, ಪನೀರ್ ಸೇರಿದಂತೆ ಇತರೆ ಹಾಲಿನ ಉತ್ಪನ್ನಗಳ ಬೆಲೆಗಳನ್ನು ಏರಿಕೆ ಮಾಡಲಾಗಿದೆ. ಈಗಾಗಲೇ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಬಡ, ಕೆಳ ಮಧ್ಯಮ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮೇಲೆ ಈ ಏರಿಕೆ ಮತ್ತಷ್ಟು ಆರ್ಥಿಕ ಹೊರೆ ಹೊರಿಸಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ರಾಜ್ಯದ ಬಹುತೇಕ ಭಾಗಗಳಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿದ್ದು, ರೈತರು ಹಾಗೂ ಗ್ರಾಮೀಣ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಡಿಯುವ ನೀರಿನ ಅಭಾವ, ಜಾನುವಾರುಗಳಿಗೆ ಮೇವು ಹಾಗೂ ನೀರಿನ ಕೊರತೆ, ಕೃಷಿ ಉತ್ಪಾದನೆಯಲ್ಲಿ ಕುಸಿತ ಉಂಟಾಗಿದೆ. ಇದರ ಪರಿಣಾಮವಾಗಿ ಅಕ್ಕಿ, ಸಕ್ಕರೆ, ಬೇಳೆಕಾಳುಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿವೆ ಎಂದು ಆಕ್ರೋಶ ವ್ಯಕ್ತಡಿಸಿದರು.ಸರ್ಕಾರಿ ಬಸ್ಗಳ ಪ್ರಯಾಣ ದರ ಏರಿಕೆಯಿಂದ ದಿನನಿತ್ಯ ಪ್ರಯಾಣಿಸುವ ಕಾರ್ಮಿಕರು, ವಿದ್ಯಾರ್ಥಿಗಳು, ನೌಕರರು, ಹಿರಿಯ ನಾಗರಿಕರು ಹಾಗೂ ಸಾಮಾನ್ಯ ಜನರ ಮೇಲೆ ಭಾರೀ ಹೊರೆ ಹಾಕಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆ, ಹಾಲಿನ ಉತ್ಪನ್ನಗಳ ಬೆಲೆ ಏರಿಕೆ, ಬಸ್ ಪ್ರಯಾಣ ದರ ಹೆಚ್ಚಳ ಹಾಗೂ ಬರ ಪರಿಸ್ಥಿತಿಯಿಂದ ಜನಸಾಮಾನ್ಯರ ಖರೀದಿ ಸಾಮರ್ಥ್ಯವನ್ನು ಕುಗ್ಗಿಸಿವೆ ಎಂದು ಕಿಡಿಕಾರಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡಲೇ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ, ಸರ್ಕಾರಿ ಬಸ್ಗಳ ಪ್ರಯಾಣ ದರ ಏರಿಕೆ ಹಿಂಪಡೆಯಬೇಕು. ಬರಪೀಡಿತ ರೈತರು, ಗ್ರಾಮೀಣ ಕುಟುಂಬಗಳು ಹಾಗೂ ಜಾನುವಾರು ಸಾಕಾಣಿಕೆದಾರರಿಗೆ ವಿಶೇಷ ಪರಿಹಾರ ಕ್ರಮಗಳನ್ನು ಘೋಷಿಸಬೇಕು. ಅಕ್ಕಿ, ಸಕ್ಕರೆ, ಬೇಳೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿಂಪಡೆಯದಿದ್ದರೆ ಜೆಡಿಎಸ್ನಿಂದ ರಾಜ್ಯಾದ್ಯಂತ ಪ್ರತಿಭಟನೆ ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.-ಬಾಕ್ಸ್-ಪ್ರಿಯಾಂಕ್ ಖರ್ಗೆ ಪ್ರತಿಕೃತಿ ದಹನ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಅವಿವೇಕಿ, ಹಳ್ಳಿಗುಗ್ಗು ಪದ ಬಳಕೆ ಮಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಇದೇ ವೇಳೆ ಪ್ರತಿಭಟನಾಕಾರರು ಕಿಡಿಕಾರಿದರು. ಪ್ರಿಯಾಂಕ್ ಖರ್ಗೆ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ಗ್ರೇಟರ್ ಬೆಂಗಳೂರು ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಜವರಾಯಿ ಗೌಡ, ಮಾಜಿ ಎಂಎಲ್ಸಿಗಳಾದ ಕೆ.ಎ.ತಿಪ್ಪೇಸ್ವಾಮಿ, ಈ. ಕೃಷ್ಣಪ್ಪ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಫೋಟೋ ಕ್ಯಾಪ್ಷನ್
ಹಾಲು ಸೇರಿ ದಿನ ಬಳಕೆ ವಸ್ತುಗಳು ಹಾಗೂ ಸರ್ಕಾರಿ ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಜೆಡಿಎಸ್ ಗ್ರೇಟರ್ ಬೆಂಗಳೂರು ಘಟಕದಿಂದ ಶುಕ್ರವಾರ ನಗರದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಲಾಯಿತು.