ಎಚ್‌.ಡಿ.ದೇವೇಗೌಡ ಕುಟುಂಬ ವಿರುದ್ಧ ತೇಜೋವಧೆ ಖಂಡಿಸಿ ಹಾಸನದಲ್ಲಿ ಜೆಡಿಎಸ್‌ ಆಕ್ರೋಶ

| Published : Jun 27 2024, 01:16 AM IST / Updated: Jun 27 2024, 01:02 PM IST

ಎಚ್‌.ಡಿ.ದೇವೇಗೌಡ ಕುಟುಂಬ ವಿರುದ್ಧ ತೇಜೋವಧೆ ಖಂಡಿಸಿ ಹಾಸನದಲ್ಲಿ ಜೆಡಿಎಸ್‌ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಅಶ್ಲೀಲ ದೃಶ್ಯವುಳ್ಳ ಪೆನ್‌ಡ್ರೈವ್ ಹಂಚಿದ ಆರೋಪಿಗಳನ್ನು ಇನ್ನೂ ಬಂಧನ ಮಾಡಡಿಲ್ಲ ಎಂದು ಆರೋಪಿಸಿ ಜೆಡಿಎಸ್ ಪಕ್ಷದಿಂದ ಹಾಸನದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಜೆಡಿಎಸ್‌ ನಾಯಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

 ಹಾಸನ :  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬವನ್ನು ರಾಜಕೀಯ ದುರುದ್ದೇಶದಿಂದ ತೇಜೋವಧೆ ಮಾಡಲಾಗುತ್ತಿದೆ. ಅಶ್ಲೀಲ ದೃಶ್ಯವುಳ್ಳ ಪೆನ್‌ಡ್ರೈವ್ ಹಂಚಿದ ಆರೋಪಿಗಳನ್ನು ಇನ್ನೂ ಬಂಧನ ಮಾಡಡಿಲ್ಲ ಎಂದು ಆರೋಪಿಸಿ ಜೆಡಿಎಸ್ ಪಕ್ಷದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಜೆಡಿಎಸ್‌ ನಾಯಕರ ಪ್ರತಿಭಟನಾ ಮೆರವಣಿಗೆಯು ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಕೆಲಕಾಲ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆರು ದಶಕಗಳಿಗೂ ಹೆಚ್ಚು ಕಾಲ ಜಿಲ್ಲೆ, ರಾಜ್ಯ, ದೇಶದಲ್ಲಿ ಸಕ್ರಿಯ ರಾಜಕೀಯ ಮಾಡಿದ್ದಾರೆ. ಜತೆಗೆ ಎಲ್ಲಾ ಸಂದರ್ಭದಲ್ಲೂ ಈ ನೆಲದ, ದೇಶದ ಕಾನೂನುಗಳಿಗೆ ಗೌರವ ಕೊಡುತ್ತ ಬಂದಿದ್ದಾರೆ. ಹಾಗೆಯೇ ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರ ಶಿಕ್ಷೆಯಾಗಲಿ ಎಂದು ಪ್ರತಿಪಾದಿಸಿದ್ದಾರೆ’ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರೂ ಸಹ ಕಾನೂನು ಪಾಲನೆಗೆ ಗೌರವ ಕೊಡುತ್ತ ಬಂದಿದ್ದಾರೆ. ತನಿಖೆಯನ್ನೂ ಸ್ವಾಗತ ಮಾಡಿದ್ದಾರೆ. ಆದರೂ ಕಾಂಗ್ರೆಸ್‌ನವರು ರಾಜಕೀಯ ದುರುದ್ದೇಶ ಹಾಗೂ ತಮಗೆ ಎದುರಾಳಿಯಾಗಿರುವ ದೇವೇಗೌಡರ ಕುಟುಂಬವನ್ನು ಹಣಿಯಬೇಕು ಎಂಬ ಒಂದೇ ದುರುದ್ದೇಶದಿಂದ ತೇಜೋವಧೆ ಮಾಡುವ ಕೆಲಸದಲ್ಲಿ ನಿರತರಾಗಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಶ್ಲೀಲ ದೃಶ್ಯಾವಳಿಯುಳ್ಳ ಪೆನ್‌ಡ್ರೈವ್ ಹಂಚಿಕೆ ಮಾಡಿರುವ ಪ್ರಮುಖ ಆರೋಪಿಗಳ ವಿರುದ್ಧ ದೂರು ದಾಖಲಾಗಿ, ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ಜಾಮೀನು ಅರ್ಜಿ ತಿರಸ್ಕಾರ ಮಾಡಿದ್ದರೂ ಆರೋಪಿಗಳನ್ನು ಈವರೆಗೂ ಬಂಧಿಸಿಲ್ಲ. ಇಷ್ಟೂ ಮಂದಿ ಹಾಸನ ಜಿಲ್ಲೆ ಮಾತ್ರವಲ್ಲದೆ ಎಲ್ಲಾ ಕಡೆ ರಾಜಾರೋಷವಾಗಿ ಕಾಂಗ್ರೆಸ್ ಜನಪ್ರತಿನಿಧಿಗಳು, ಮುಖಂಡರ ಜತೆ ಓಡಾಡುತ್ತ, ಕಾಂಗ್ರೆಸ್ ಸಭೆ, ಸಮಾರಂಭ ಹಾಗೂ ವಿಜಯೋತ್ಸವಗಳಲ್ಲೂ ಭಾಗಿಯಾಗುತ್ತಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಮತ್ತು ಪೊಲೀಸರು ಪಕ್ಷಪಾತ ಧೋರಣೆ ಅನುಸುತ್ತಿದ್ದಾರೆ ಎಂಬ ಮಾತು ಜನಸಾಮಾನ್ಯರಿಂದ ಕೇಳಿ ಬರುತ್ತಿದೆ. ಸರ್ಕಾರ ಈ ನೆಲದ ಕಾನೂನಿಗೆ ಗೌರವ ಕೊಡದೆ, ಪಾಲನೆ ಮಾಡದೆ ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಯಾವುದೇ ಪಕ್ಷದವರಿರಲಿ, ಮುಖಂಡರಿರಲಿ ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕ್ಷೇತ್ರದ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ಮಾಜಿ ಸಚಿವ ಎಚ್‌.ಕೆ.ಕುಮಾರಸ್ವಾಮಿ, ಡಿಸಿಸಿ ಬ್ಯಾಂಕ್ ಅದ್ಯಕ್ಷ ಸೋಮನಹಳ್ಳಿ ನಾಗರಾಜ್, ಜೆಡಿಎಸ್ ವಕ್ತಾರ ರಘು ಹೊಂಗೆರೆ, ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್.ದ್ಯಾವೇಗೌಡ, ಆಲೂರು ತಾಲೂಕು ಅಧ್ಯಕ್ಷ ಮಂಜೇಗೌಡ, ಅರಸೀಕೆರೆ ತಾಲೂಕಿನ ಚಂದ್ರಶೇಖರ್, ಅರಕಲಗೂಡು ಅಧ್ಯಕ್ಷ ಸತೀಶ್, ಮುಖಂಡರಾದ ಅರಸೀಕೆರೆ ಗಂಗಾಧರ್, ಬಾಣಾವರ ಅಶೋಕ್, ಹೊನ್ನಶೆಟ್ಟಿಹಳ್ಳಿ ಪುಟ್ಟಸ್ವಾಮಿ ನವೀನ್, ಗ್ಯಾರಹಳ್ಳಿ ರವೀಶ್, ಮಾಜಿ ಜಿಲ್ಲಾ ಪಂಚಾಯತ್ ಉಪಾದ್ಯಕ್ಷ ರಾಜಣ್ಣ. ಲಕ್ಷ್ಮಣಗೌಡ, ಸ್ವಾಮಿಗೌಡ, ನೌಕರರ ಸಂಘದ ಮಾಜಿ ಗೌರವ ಅದ್ಯಕ್ಷ ರುದ್ರಪ್ಪ, ನಗರಸಭೆ ಸದಸ್ಯ ವಾಸು, ಮಂಜಣ್ಣ, ಚಂದ್ರೇಗೌಡ, ರಫೀಕ್, ವಕೀಲರಾದ ಲಿಂಗರಾಜು, ಸುದೀಪ್ ಲೋಕೇಶ್, ವಾಸು ಇತರರು ಇದ್ದರು.