ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂಧನೂರು
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಬಾದಿತವಾಗಿ ಮುಂದುವರೆಯಲಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ಅವರು ಭಾನುವಾರ ಸಿಂಧನೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಕ್ಷದ ಹಿರಿಯ ಮುಖಂಡರು ಹಾಗೂ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡರ 68ನೇ ಹುಟ್ಟುಹಬ್ಬದ ಪ್ರಯುಕ್ತ ಹಾಗೂ ಜಿಲ್ಲಾಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲು ಆಗಮಿಸಿದ್ದಾಗಿ ಹೇಳಿದ ಅವರು, ಜೆಡಿಎಸ್ ಜಾತ್ಯಾತೀತ ಸಿದ್ಧಾಂತಗಳಿಗೆ ಈಗಲೂ ಬದ್ಧವಾಗಿದೆ. ಬಿಜೆಪಿಯೊಂದಿಗಿನ ಮೈತ್ರಿ ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನು ಚಾಚೂ ತಪ್ಪದೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಹಾಗೂ ಪಕ್ಷದ ಎಲ್ಲ ಹಿರಿಯ ಮುಖಂಡರ ಸಹಕಾರದೊಂದಿಗೆ ಬರುವ ತಾಲೂಕು ಪಂಚಾಯತಿ ಜಿಲ್ಲಾ ಪಂಚಾಯಿತಿ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ಗೆಲ್ಲುತ್ತಾರೆ. ಕಾಂಗ್ರೆಸ್ ಪಕ್ಷ ಧೂಳಿಪಟವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.ವಕ್ಫ್ ವಿರುದ್ಧ ಹಾಗೂ ಪ್ರಿಯಾಂಕ ಖರ್ಗೆ ವಿರುದ್ಧ ಬಿಜೆಪಿಯವರು ನಡೆಸುತ್ತಿರುವ ಹೋರಾಟಗಳಲ್ಲಿ ಜೆಡಿಎಸ್ ಪಾಲ್ಗೊಂಡಿಲ್ಲ. ಇದು ಮೈತ್ರಿಯಲ್ಲಿ ಹೊಂದಾಣಿಕೆ ತಪ್ಪಿದೆ ಎಂಬ ಭಾವನೆ ಸರಿಯಲ್ಲ. ರಾಜ್ಯ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲಗೊಂಡಿದೆ. ಹಾಲಿನ ದರ ಬಸ್ ದರ ಗಗನಕ್ಕೇರಿವೆ. ಗೃಹಲಕ್ಷ್ಮಿ ಯೋಜನೆ ಗಗನ ಕುಸುಮವಾಗಿದೆ. ರಾಜ್ಯದಲ್ಲಿ ಅಧಿಕಾರಿಗಳು ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಹ ಆಗಿದೆ ಎಂದು ನಿಖಿಲ್ ಆರೋಪಿಸಿದರು. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ, ಹಗರಣಗಳ ಸರಮಾಲೆಗಳು ಹೆಚ್ಚಾಗಿವೆ. ಮುಡಾ, ವಾಲ್ಮೀಕಿ ನಿಗಮ, ಭೋವಿ ನಿಗಮದ ಹಗರಣಗಳು ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿವೆ. ರಾಜ್ಯದ ತನಿಖ ಸಂಸ್ಥೆಗಳು ಸರಿಯಾದ ರೀತಿಯಲ್ಲಿ ತನಿಖೆಯನ್ನು ನಡೆಸುತ್ತಿಲ್ಲ ಎಂದು ಆಪಾದಿಸಿದರು.
ಕಳೆದ ಮೂರು ತಿಂಗಳ ಹಿಂದೆ ನಡೆದ ಶಿಗ್ಗಾವಿ ,ಸಂಡೂರು ಹಾಗೂ ಚೆನ್ನಪಟ್ಟಣ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಗೃಹಲಕ್ಷ್ಮಿ ಯೋಜನೆಯ ಮೂರು ತಿಂಗಳ ಬಾಕಿ ಹಣವನ್ನು ಏಕಾಏಕಿ ಮಹಿಳೆಯರ ಖಾತೆಗಳಿಗೆ ಹಣ ಜಮಾ ಮಾಡಿ ಮತಗಳನ್ನು ಪಡೆದುಕೊಂಡಿದೆ. ಈ ರೀತಿಯಾಗಿ ಸರ್ಕಾರ ತನ್ನ ಅಧಿಕಾರ ವನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.ರಾಜ್ಯದಲ್ಲಿ ಎರಡನೇ ಬಾರಿ ಕುಮಾರಣ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಯಾವುದೇ ಜಾತಿ ಧರ್ಮ ಮತಗಳನ್ನು ನೋಡದೆ ರೈತರ ಸಾಲ ಮನ್ನಾ ಮಾಡಿದರು. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಯೋಜನೆಗಳಿಗೆ ಸಾಕಷ್ಟು ಹಣ ನೀಡಿದರು. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ದೇವೇಗೌಡ್ರು ಹಾಗೂ ಕುಮಾರಸ್ವಾಮಿ ತಮ್ಮ ಅವಧಿಯಲ್ಲಿ ಸಾಕಷ್ಟು ಅನುದಾನಗಳು ನೀಡಿ ಈ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆದ್ದರಿಂದ ಬರುವ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯತ್ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಶಕ್ತಿ ಕಾರ್ಯಕರ್ತರು, ಪದಾಧಿಕಾರಿಗಳು ಪಕ್ಷಕ್ಕೆ ಶಕ್ತಿ ತುಂಬಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸದಸ್ಯತ್ವ ಅಭಿಯಾನವನ್ನು ಚುರುಕುಗೊಳಿಸಲಾಗುತ್ತದೆ. ಇದಕ್ಕೆ ಎಲ್ಲಾ ನಾಯಕರು ಮುಖಂಡರು ಮುತುವರ್ಜಿ ವಹಿಸಬೇಕು ಎಂದು ಮನವಿ ಮಾಡಿದರು.ಪಕ್ಷದ ರಾಜ್ಯಾಧ್ಯಕ್ಷರ ನೇಮಕ: ವರಿಷ್ಠರ ನಿರ್ಧಾರವೇ ಅಂತಿಮಪಕ್ಷದ ರಾಜ್ಯಾಧ್ಯಕ್ಷರಾಗಿ ತಾವು ಮತ್ತೆ ಮುಂದುವರಿಯುವ ವದಂತಿಗಳು ಹಬ್ಬಿರುವ ಬಗ್ಗೆ ಸುದ್ದಿಗಾರರು ಕೇಳಿದಾಗ, ಈ ಬಗ್ಗೆ ಪಕ್ಷದಲ್ಲಿ ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ. ಮಾಧ್ಯಮದ ಗೆಳೆಯರು ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ಪಕ್ಷದಲ್ಲಿ ಅನೇಕ ಹಿರಿಯ ಮುಖಂಡರು, ಅನುಭವಿಗಳು ಇರುವರು. ಎಲ್ಲರ ಅಭಿಪ್ರಾಯಗಳನ್ನು ಪಕ್ಷದ ವರಿಷ್ಠರು, ನಾಯಕರು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ದೇವದುರ್ಗ ಶಾಸಕಿ ಕರೆಮ್ಮ ಜಿ. ನಾಯಕ್ ,ಮಾಜಿ ಶಾಸಕರಾದ ವೆಂಕಟರಾವ್ ನಾಡಗೌಡ, ವೆಂಕಟಪ್ಪ ನಾಯಕ್, ಮುಖಂಡರು, ಕಾರ್ಯಕರ್ತರು ಇದ್ದರು.