ಪಡಿತರ ಚೀಟಿ ‍ವಿಳಂಬಕ್ಕೆ ಜೆಡಿಎಸ್‌ ಖಂಡನೆ

| Published : Oct 08 2024, 01:15 AM IST

ಸಾರಾಂಶ

ಹುಬ್ಬಳ್ಳಿ ನಗರದಲ್ಲಿಯೇ 2400 ಪಡಿತರ ಅರ್ಜಿಗಳು ವಿಲೇವಾರಿಯಾಗದೇ ಉಳಿದುಕೊಂಡಿದ್ದು, ಆದಷ್ಟು ಬೇಗನೆ ಅರ್ಜಿ ವಿಲೇವಾರಿ ಮಾಡಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.

ಹುಬ್ಬಳ್ಳಿ:

ಕಳೆದ 3-4 ವರ್ಷಗಳಿಂದ ಅರ್ಜಿ ಸಲ್ಲಿಸಲಾದ ಪಡಿತರ ಚೀಟಿ ವಿತರಣೆಯಾಗಿಲ್ಲ. ಇದರಿಂದ ತೀವ್ರ ಸಮಸ್ಯೆಯಾಗುತ್ತಿದ್ದು, ಆದಷ್ಟು ಬೇಗನೆ ಪಡಿತರ ಚೀಟಿ ವಿತರಣೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸೋಮವಾರ ಜೆಡಿಎಸ್‌ ಕಾರ್ಯಕರ್ತರು ನಗರದ ಆಹಾರ ನಾಗರಿಕ ಪೂರೈಕೆ ಸರಬರಾಜು ಇಲಾಖೆ ಎದುರು ಪ್ರತಿಭಟನೆ ನಡೆಸಿದರು.

2021, 22, 23 ಮತ್ತು 24ನೇ ಸಾಲಿನಲ್ಲಿ ಪಡಿತರ ಚೀಟಿಗಾಗಿ ಸಾರ್ವಜನಿಕರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಇದರಲ್ಲಿ ಕೆಲವೇ ಕೆಲವು ಜನರಿಗೆ ಪಡಿತರ ಚೀಟಿ ವಿತರಿಸಲಾಗಿದೆ. ಇನ್ನುಳಿದ ಅರ್ಹರಿಗೆ ಪಡಿತರ ಚೀಟಿ ವಿತರಿಸದೇ ವಿನಾಕಾರಣ ವಿಳಂಬ ಮಾಡಲಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಹುಬ್ಬಳ್ಳಿ ನಗರದಲ್ಲಿಯೇ 2400 ಪಡಿತರ ಅರ್ಜಿಗಳು ವಿಲೇವಾರಿಯಾಗದೇ ಉಳಿದುಕೊಂಡಿದ್ದು, ಈ ಕೂಡಲೇ ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕರು, ಸಹಾಯಕ ನಿರ್ದೇಶಕರು ಸಾರ್ವಜನಿಕರಿಗೆ ಸ್ಪಂದಿಸದೇ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಆದಷ್ಟು ಬೇಗನೆ ಅರ್ಜಿ ವಿಲೇವಾರಿ ಮಾಡಬೇಕು. ಇಲ್ಲದೇ ಹೋದಲ್ಲಿ ಪಕ್ಷದಿಂದ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಹ್ಮದ್ ಅರಸೀಕೆರೆ, ಮುಖಂಡರಾದ ಶ್ರೀಕಾಂತ ತೆಲಗರ, ಶಂಕರ ಪವಾರ, ಇನಾಯತ ಹೆಬ್ಬಳ್ಳಿ, ಮಕ್ತುಮಹುಸೇನ ಮಸ್ತಾನವಾಲೆ, ಭೀಮರಾಯ ಗುಡೆನಕಟ್ಟಿ, ಬಾಷಾ ಮುದಗಲ್ಲ ಸೇರಿದಂತೆ ಹಲವರಿದ್ದರು.