ಸಾರಾಂಶ
ಎಮ್ಮಿಗನೂರ ಗ್ರಾಮದ ಬ್ರಾಹ್ಮಣರ ಕ್ಯಾಂಪಿನ ನಿವಾಸಿ, ಈಚೆಗೆ ಬಿಮ್ಸ್‌ನಲ್ಲಿ ಸಾವನ್ನಪ್ಪಿದ ಬಾಣಂತಿ ರೋಜಾ ಮನೆಗೆ ಜೆಡಿಎಸ್ ನಿಯೋಗ ಭೇಟಿ ಮಾಡಿ 35 ಸಾವಿರ ನಗದು ನೆರವು ನೀಡಿ ಸಾಂತ್ವನ ಹೇಳಿತು.
ಕಂಪ್ಲಿ: ತಾಲೂಕಿನ ಎಮ್ಮಿಗನೂರ ಗ್ರಾಮದ ಬ್ರಾಹ್ಮಣರ ಕ್ಯಾಂಪಿನ ನಿವಾಸಿ, ಈಚೆಗೆ ಬಿಮ್ಸ್‌ನಲ್ಲಿ ಸಾವನ್ನಪ್ಪಿದ ಬಾಣಂತಿ ರೋಜಾ ಮನೆಗೆ ಜೆಡಿಎಸ್ ನಿಯೋಗ ಭೇಟಿ ಮಾಡಿ 35 ಸಾವಿರ ನಗದು ನೆರವು ನೀಡಿ ಸಾಂತ್ವನ ಹೇಳಿತು.
ಬಳ್ಳಾರಿ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಮಾತನಾಡಿ, ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ವಹಿಸಿದೆ. ಜಿಲ್ಲೆಯ ಬಿಮ್ಸ್ ಹಾಗೂ ಜಿಲ್ಲಾಸ್ಪತ್ರೆಯಲ್ಲಿನ ಬಾಣಂತಿಯರ ಸರಣಿ ಸಾವು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಬಳ್ಳಾರಿ ಜಿಲ್ಲಾಸ್ಪತ್ರೆ ಅನ್ನೊದು ಸಾವಿನ ಮನೆಯಂತಾಗಿದೆ. ಇಲ್ಲಿ ಬಡವರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕು. ಸಾವಿನ ಪ್ರಮಾಣ ದಿನೇ ದಿನೇ ಏರಿಕೆ ಆದರೂ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವ ದಿನೇಶ ಗುಂಡೂರಾವ್, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ ಖಾನ್ ಈ ವರೆಗೂ ಆಸ್ಪತ್ರೆಗೆ ಭೇಟಿ ನೀಡಿಲ್ಲ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬೆಂಗಳೂರಿನಲ್ಲೆ ಕುಳಿತುಕೊಂಡು ಆಟವಾಡುತ್ತಿದ್ದಾರೆ. ಅವರಿಗೆ ಬಡವರ ಆರೋಗ್ಯ ಮುಖ್ಯವಲ್ಲ. ಜಮೀರ್ ಆಹ್ಮದ್ ಖಾನ್ ಆಸ್ಪತ್ರೆಗೆ ಬಂದು ಬಾಣಂತಿಯರ ಯೋಗಕ್ಷೇಮ ವಿಚಾರಿಸುವಷ್ಟು ಸಮಯವಿಲ್ಲವೆಂದರೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಏನು ಪ್ರಯೋಜನ? ವ್ಯರ್ಥವೇ ಎಂದು ಸಚಿವರು ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೇ ಸರ್ಕಾರ ಮೃತ ಬಾಣಂತಿಯರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು. ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಶಾಸಕಾಂಗ ಪಕ್ಷದ ನಾಯಕರಾದ ಸುರೇಶಬಾಬು ಅವರ ಜೆಡಿಎಸ್ ಪಕ್ಷದ ನಿಯೋಗ ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯಲ್ಲಿನ ಬಾಣಂತಿಯರ ಸಾವಿನ ಘಟನೆ ಕುರಿತು ಮಾಹಿತಿ ಸಂಗ್ರಹಿಸಿದ್ದು, ಈ ಕುರಿತು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತಲಿದ್ದಾರೆ ಎಂದು ತಿಳಿಸಿದರು.ಬಳಿಕ ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ರಾಜು ನಾಯಕ ಮಾತನಾಡಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಮ್ಮಿಗನೂರು ಗ್ರಾಮ ಮೂಲದ ರೋಜಾ ಎಂಬ ಬಾಣಂತಿ ಸಾವನಪ್ಪಿದ್ದು, ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲು ಮುಂದಾಗದ ಶಾಸಕ ಜೆ.ಎನ್. ಗಣೇಶ್ ನಡೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಕಂಪ್ಲಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮೇಘರಾಜ, ಬಳ್ಳಾರಿ ನಗರ ಘಟಕ ಅಧ್ಯಕ್ಷ ವಂಡ್ರಿ ಹೊನ್ನುರಸ್ವಾಮಿ, ಯುವಘಟಕದ ಅಧ್ಯಕ್ಷ ಮುತ್ತುರಾಜ, ಪಕ್ಷದ ಮುಖಂಡರಾದ ಜೆ.ವೀರಭದ್ರ ಸೇರಿದಂತೆ ಆಶಾ ಕಾರ್ಯಕರ್ತೆಯರಿದ್ದರು.