ಸಾರಾಂಶ
ಅರಸೀಕೆರೆಯಲ್ಲಿ ಪ್ರತಿಭಟನೆ । ಎಡಿಜಿಪಿ ಚಂದ್ರಶೇಖರ್ ಬಹಿರಂಗವಾಗಿ ಕುಮಾರಸ್ವಾಮಿಯವರ ಕ್ಷಮೆ ಕೋರಬೇಕು: ಹೊಸೂರು ಗಂಗಾಧರ್ಕನ್ನಡಪ್ರಭ ವಾರ್ತೆ ಅರಸೀಕೆರೆ
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿರುವ ಕರ್ನಾಟಕ ಲೋಕಾಯುಕ್ತ ಎಡಿಜಿಪಿ ಎಂ ಚಂದ್ರಶೇಖರ್ ಮೇಲೆ ಕಾನೂನು ಕ್ರಮ ಕೈಗೊಂಡು ಅವರನ್ನು ಕೆಲಸದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರಸೀಕೆರೆ ಜೆಡಿಎಸ್ ಕಾರ್ಯಕರ್ತರು ಹಾಗೂ ಕುಮಾರಸ್ವಾಮಿ ಅಭಿಮಾನಿಗಳು ನಗರದ ಪಿಪಿ ವೃತ್ತದಲ್ಲಿ ರಸ್ತೆ ತಡೆ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾಜಿ ಶಾಸಕ ಜಿ ಎಸ್ ಪರಮೇಶ್ವರಪ್ಪ ಮಾತನಾಡಿ, ಭಾರತ ದೇಶದ ಸಂವಿಧಾನದಲ್ಲಿ ಮೂರು ಮಹತ್ತರ ವ್ಯವಸ್ಥೆಗಳಿದ್ದು ಅದರಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ತನ್ನದೇ ಆದ ಕಾನೂನನ್ನು ರಚಿಸುವ ಹಾಗೂ ಕಾನೂನನ್ನು ಪಾಲಿಸುವ ಕಾರ್ಯವನ್ನು ನಮ್ಮ ದೇಶ ಒಪ್ಪಿಕೊಂಡು ಸಾಗುತ್ತಿದೆ. ಆದರೆ ನಮ್ಮ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರ ಬಗ್ಗೆ ತಮ್ಮ ವ್ಯಾಪ್ತಿಯನ್ನು ಮೀರಿ ಮಾತನಾಡಿ, ರಾಜಭವನದ ಸಚಿವಾಲಯದ ಪತ್ರದ ಕುರಿತು ತನಿಖೆ ನಡೆಸಲು ಅನುಮತಿ ನೀಡಿ ಎಂದು ತನ್ನ ವ್ಯಾಪ್ತಿ ಅಲ್ಲದ ಕಾರ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿಯವರನ್ನ ಲೋಕಾಯುಕ್ತ ಎಡಿಜಿಪಿ ಎಂ ಚಂದ್ರಶೇಖರ್ ಅವರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಪ್ರಜಾಪ್ರಭುತ್ವಕ್ಕೆ ಮಾರಕವಾಗುವಂತೆ ಅತ್ಯಂತ ಕೀಳು ಭಾಷೆ ಹಾಗೂ ಪ್ರಾಣಿಯ ಹೆಸರಿನಿ೦ದ ಟೀಕಿಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಹಾಗೂ ಶಾಸಕಾಂಗದ ವ್ಯಕ್ತಿಯನ್ನು ಅಪಮಾನಿಸಿದ್ದಾರೆ. ಇವರನ್ನು ಕೂಡಲೇ ಕೆಲಸದಿಂದ ವಜಾ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಜೆಡಿಎಸ್ ಮುಖಂಡ ಹೊಸೂರು ಗಂಗಾಧರ್ ಮಾತನಾಡಿ, ಎರಡು ಬಾರಿ ಮುಖ್ಯಮಂತ್ರಿಗಳಾಗಿ ಜನಪ್ರಿಯ ಕಾರ್ಯಕ್ರಮಗಳನ್ನು ರೂಪಿಸಿರುವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಇಲ್ಲಸಲ್ಲದ ಮಾತನಾಡಿರುವ ಎಡಿಜಿಪಿ ಚಂದ್ರಶೇಖರ್ ಬಹಿರಂಗವಾಗಿ ಕ್ಷಮೆ ಕೋರಬೇಕು. ಮುಂದಿನ ದಿನಗಳಲ್ಲಿ ಈತನ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು. ತಾಲೂಕು ಅಧ್ಯಕ್ಷ ಚಂದ್ರಶೇಖರ್ ಓರ್ವ ಕರ್ನಾಟಕದ ನಿಷ್ಠಾವಂತ ರಾಜಕಾರಣಿಯಾಗಿ ಬಡವರ ಪರ ಹಲವಾರು ಕಾರ್ಯಕ್ರಮವನ್ನು ಜಾರಿಗೆ ತಂದು ಇಂದಿಗೂ ಕರ್ನಾಟಕದ ಆಶಾಕಿರಣವಾಗಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿರವರನ್ನು ಅವಮಾನಿಸಿರುವುದನ್ನ ಯಾವುದೇ ಕಾರಣಕ್ಕೆ ರಾಜ್ಯದ ಜನ ಸಹಿಸುವುದಿಲ್ಲ ರಾಜ್ಯ ಸರ್ಕಾರ ಇಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.ಎಡಿಜಿಪಿ ಚ೦ದ್ರಶೇಖರ್ ರವರು ಸುಮಾರು ಕರ್ನಾಟಕಕ್ಕೆ 12 ವರ್ಷಗಳ ಹಿಂದೆ ಬಂದು, ಇಲ್ಲೇ ಇದ್ದು ರಾಜಕೀಯ ಪ್ರಭಾವದಿಂದ ಕೇಂದ್ರ ಸಚಿವ ಕುಮಾರಸ್ವಾಮಿಯವರನ್ನ ಅವಮಾನಿಸುವ ಕಾರ್ಯ ಇವರಿಂದ ಸಾಗುತ್ತಿದೆ. ಇವರು ಹಿಮಾಚಲ ಪ್ರದೇಶದ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದು, ಕರ್ನಾಟಕದಲ್ಲಿ ಕೇವಲ ಐದು ವರ್ಷ ತಮ್ಮ ಸೇವೆ ಸಲ್ಲಿಸಲು ಅವಕಾಶವಿದ್ದು, ಆದರೆ ಅವರು ರಾಜಕೀಯ ಪ್ರಭಾವ ಬೀರಿ ಸ್ವಜನ ಪಕ್ಷಪಾತ ಹಲವಾರು ಹಗರಣಗಳಲ್ಲಿ ಭಾಗಿಯಾಗಿ ಕರ್ನಾಟಕ ರಾಜ್ಯಕ್ಕೆ ಕಳಂಕ ತಂದಿದ್ದಾರೆ. ತಮ್ಮ ಅಧೀನ ಅಧಿಕಾರಿಗಳನ್ನೇ ಹೆದರಿಸಿ ಕೋಟ್ಯಂತರ ರು. ಹಣವನ್ನು ಬೇಡಿಕೆ ಇಟ್ಟಿರುವುದು ಈಗಾಗಲೇ ತಿಳಿದು ಬಂದಿರುತ್ತದೆ. ಸುಳ್ಳು ಬೆದರಿಕೆ ಮಾಡುವ ಈ ವ್ಯಕ್ತಿಯನ್ನು ಕೂಡಲೇ ಕಾನೂನು ಕ್ರಮ ಕೈಗೊಂಡು ಕರ್ನಾಟಕ ರಾಜ್ಯದಿಂದ ವರ್ಗಾವಣೆ ಮಾಡಿ ಸೂಕ್ತವಾದ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಜೆಡಿಎಸ್ ಮುಖಂಡರಾದ ಬಾಣಾವರ ಅಶೋಕ್, ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷ ಬಿ ಜಿ. ನಿರಂಜನ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಂಡಿಗೌಡರ ರಾಜಣ್ಣ, ಲಾಳನಕೆರೆ ಯೋಗೀಶ್ ನಗರಸಭಾ ಮಾಜಿ ಸದಸ್ಯ ಹರ್ಷವರ್ಧನ್, ಸಿಕಂದರ್, ಮಲ್ಲೇಶ್ವರ ಮಂಜು ಜೆಡಿಎಸ್ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಗ್ರೇಡ್-2 ತಹಸೀಲ್ದಾರ್ ಪಾಲಾಕ್ಷರವರಿಗೆ ಮನವಿ ಪತ್ರ ಸಲ್ಲಿಸಿದರು.