ಸಾರಾಂಶ
ಧರ್ಮಸ್ಥಳ ಕೇವಲ ಜೆಡಿಎಸ್ ಮತ್ತು ಬಿಜೆಪಿಗೆ ಸೀಮಿತವಾಗಿಲ್ಲ. ಎಲ್ಲಾ ಹಿಂದೂ ಧರ್ಮದವರೂ ಕ್ಷೇತ್ರದ ಬಗ್ಗೆ ಭಕ್ತಿ ಮತ್ತು ನಂಬಿಕೆ ಇಟ್ಟುಕೊಂಡು ಶ್ರೀ ಮಂಜುನಾಥ ಸ್ವಾಮಿ ದರ್ಶನ ಮಾಡಿಕೊಂಡು ಬರುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆ ಅವರಿಗೆ ನೈತಿಕ ಬೆಂಬಲ ನೀಡಲು ಜೆಡಿಎಸ್ ಹಮ್ಮಿಕೊಂಡಿರುವ ಧರ್ಮಸ್ಥಳ ಸತ್ಯ ಯಾತ್ರೆ ರಾಜಕೀಯ ಪ್ರೇರಿತವಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಭಾನುವಾರ ಹೇಳಿದರು.ತಾಲೂಕಿನ ಬೆಸಗರಹಳ್ಳಿ, ಸೊಳ್ಳೆಪುರ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಜೆಡಿಎಸ್ ನಾಯಕರು ತಮ್ಮ ಜೀವಮಾನದುದ್ದಕ್ಕೂ ಬರೀ ಸುಳ್ಳಿನ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಇಂತವರಿಂದ ಸತ್ಯ ಎಲ್ಲಿಂದ ಬರುತ್ತದೆ ಎಂದು ಎಚ್.ಡಿ.ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.
ಧರ್ಮಸ್ಥಳ ಕೇವಲ ಜೆಡಿಎಸ್ ಮತ್ತು ಬಿಜೆಪಿಗೆ ಸೀಮಿತವಾಗಿಲ್ಲ. ಎಲ್ಲಾ ಹಿಂದೂ ಧರ್ಮದವರೂ ಕ್ಷೇತ್ರದ ಬಗ್ಗೆ ಭಕ್ತಿ ಮತ್ತು ನಂಬಿಕೆ ಇಟ್ಟುಕೊಂಡು ಶ್ರೀ ಮಂಜುನಾಥ ಸ್ವಾಮಿ ದರ್ಶನ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಈ ಎರಡು ಪಕ್ಷದ ನಾಯಕರು ರಾಜಕಾರಣದ ಉದ್ದೇಶವಿಟ್ಟುಕೊಂಡು ಧರ್ಮಸ್ಥಳ ಚಲೋ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ಮದ್ದೂರು ವಿಧಾನಸಭಾ ಕ್ಷೇತ್ರವು ನೀರಾವರಿ, ರಸ್ತೆ ಸೇರಿ ಮೂಲ ಸೌಲಭ್ಯಗಳ ಬರ ಎದುರಿಸುತ್ತಿದೆ, ಇದಕ್ಕೆ ಕ್ಷೇತ್ರವನ್ನಾಳಿದ ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಾರಣವಾಗಿದೆ. ನನ್ನ ಅಧಿಕಾರದ ಅವಧಿಯಲ್ಲಿ ಕ್ಷೇತ್ರವನ್ನು ಹೊಸ ಯೋಜನೆಗಳಿಂದ ಅಭಿವೃದ್ಧಿಪಡಿಸುವ ಉದ್ದೇಶದಿಂದ ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ. ಅಭಿವೃದ್ಧಿ ಕಾರ್ಯಗಳನ್ನು ಪರಾಮರ್ಶೆ ಮಾಡಲು ಕ್ಷೇತ್ರದ ಜನರ ವಿವೇಚನೆಗೆ ಬಿಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಗ್ರಾಪಂ ಸದಸ್ಯರಾದ ಬಾಬು, ಸುನೀಲ್, ಸೊಳ್ಳೆಪುರ ಡೈರಿ ಅಧ್ಯಕ್ಷ ಪ್ರಕಾಶ್, ಮುಖಂಡರಾದ ಗೋಪಿ ಮತ್ತಿತರರು ಇದ್ದರು.