ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಕಾಂಗ್ರೆಸ್ ಸೇರ್ಪಡೆ
KannadaprabhaNewsNetwork | Published : Oct 26 2023, 01:00 AM IST
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಕಾಂಗ್ರೆಸ್ ಸೇರ್ಪಡೆ
ಸಾರಾಂಶ
ಪಾಲಿಕೆ ಸದಸ್ಯ ನಾಗರಾಜ್ ಕಂಕಾರಿ, ಮಾಜಿ ಉಪಮೇಯರ್ ಪಾಲಾಕ್ಷಿ, ಹಲವು ಮುಖಂಡರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಪ್ತ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಬೆಂಬಲಿಗರೊಂದಿಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಎಂ.ಶ್ರೀಕಾಂತ್ ಜೊತೆ ಪಾಲಿಕೆ ಸದಸ್ಯ ನಾಗರಾಜ್ ಕಂಕಾರಿ, ಮಾಜಿ ಉಪಮೇಯರ್ ಪಾಲಾಕ್ಷಿ, ಹಲವು ಮುಖಂಡರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡರು. ಕಳೆದೊಂದು ತಿಂಗಳ ಹಿಂದೆಯಷ್ಟೇ ಜೆಡಿಎಸ್ ತೊರೆಯುವ ಬಗ್ಗೆ ಘೋಷಣೆ ಮಾಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಇದೊಂದು ವಿಶೇಷವಾದ ಸಂದರ್ಭ. ವಿಜಯದಶಮಿ ಮರುದಿನವೇ ಜನತಾದಳದಿಂದ ಸಾವಿರಾರು ಕಾರ್ಯಕರ್ತರು ಹಾಗೂ ನಾಯಕರು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು. ಎಂ.ಶ್ರೀಕಾಂತ್ ನನ್ನ ಒಳ್ಳೆಯ ಗೆಳೆಯ ಹಾಗೂ ಒಳ್ಳೆಯ ಸಂಘಟನಾಗಾರ. ನಾಯಕರನ್ನು ಸೃಷ್ಟಿ ಮಾಡುವಂತಹ ಶಕ್ತಿ ಅವರಲ್ಲಿದೆ. ಕಾಂಗ್ರೆಸ್ ಪಕ್ಷಕ್ಕೆ ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಅವರಂಥ ನಾಯಕ ನಮ್ಮ ಪಕ್ಷದಲ್ಲಿರಬೇಕು ಎನ್ನುವುದು ನನ್ನ ಆಶಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ, ಮಾಜಿ ಸಂಸದ ಆಯನೂರು ಮಂಜುನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಆಹಮದ್, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಪ್ರಮುಖರಾದ ಗೀತಾ ಶಿವರಾಜ್ ಕುಮಾರ್, ಕಲಗೋಡು ರತ್ನಾಕರ್, ಜಿ.ಡಿ. ಮಂಜುನಾಥ್, ಹಲವರಿದ್ದರು. - - - ಬಾಕ್ಸ್ ಅಧಿಕಾರಕ್ಕಾಗಿ ಕಾಂಗ್ರೆಸ್ ಸೇರುತ್ತಿಲ್ಲ: ಶ್ರೀಕಾಂತ್ ಜೆಡಿಎಸ್ ಪಕ್ಷದಲ್ಲಿದ್ದಾಗಲೂ ಶಿವಮೊಗ್ಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೆವು. ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸಿದ್ದೆವು. ಜೆಡಿಎಸ್ ಜಿಲ್ಲಾಧ್ಯಕ್ಷನಾಗಿ ಪಕ್ಷದ ಏಳಿಗೆಗೆ ಸಾಕಷ್ಟು ಶ್ರಮ ಹಾಕಿದ್ದೆವು. ಆ ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ ಎಂದು ಎಂ.ಶ್ರೀಕಾಂತ್ ಹೇಳಿದರು. ಅಧಿಕಾರದ ಆಸೆಗೆ ನಾನು ಕಾಂಗ್ರೆಸ್ ಸೇರ್ಪಡೆಗೊಂಡಿಲ್ಲ. ಆ ರೀತಿ ಅಧಿಕಾರಕ್ಕೆ ಆಸೆ ಪಟ್ಟಿದ್ದರೆ 2013ರಲ್ಲಿ ನಮ್ಮ ಪಕ್ಷದವರೇ 10 ಮಂದಿ ಪಾಲಿಕೆ ಸದಸ್ಯರಿದ್ದರು, ಅವರನ್ನು ಕರೆದುಕೊಂಡು ಹೋಗಿದ್ದರೆ ಕಾಂಗ್ರೆಸ್‌ನಲ್ಲಿ ನನಗೆ ಒಳ್ಳೆಯ ಸ್ಥಾನವೇ ಸಿಗುತ್ತಿತ್ತು. ಆದರೆ, ನಾನೆಂದು ಅಧಿಕಾರಕ್ಕೆ ಪಟ್ಟವನ್ನಲ್ಲ ಎಂದು ಪುನರುಚ್ಚರಿಸಿದರು. - - - -25ಎಸ್‌ಎಂಜಿಕೆಪಿ04: ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಶ್ರೀಕಾಂತ್ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಗೊಂಡರು.