೯೩ರ ಇಳಿ ವಯಸ್ಸಿನಲ್ಲೂ ದೇವೇಗೌಡರ ಹೋರಾಟದ ಕಿಚ್ಚು ಕಡಿಮೆಯಾಗಿಲ್ಲ. ನೀರಾವರಿ ಯೋಜನೆಗಳ ಬಗ್ಗೆ ಅವರಿಗಿರುವ ತಿಳಿವಳಿಕೆ, ರಾಜ್ಯದ ಪರ ನಿಲುವು ಇಂದಿನ ಯುವಕರಿಗೆ ಸ್ಫೂರ್ತಿಯಾಗಿದೆ. ಜೆಡಿಎಸ್ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿ ಗಟ್ಟಿಯಾಗಿದೆ. ಕಾರ್ಯಕರ್ತರು ಪಕ್ಷದ ದೊಡ್ಡ ಶಕ್ತಿಯಾಗಿದ್ದಾರೆ ಎಂದು ವಿಶ್ವಾಸದಿಂದ ಹೇಳಿದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಜೆಡಿಎಸ್ ಹಳೇ ಮೈಸೂರಿಗೆ ಸೀಮಿತವಾದ ಪಕ್ಷ ಎಂಬ ಭಾವನೆ ಇದೆ. ಅದನ್ನು ದೂರ ಮಾಡುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿಯಾದ್ಯಂತ ಸಂಚರಿಸಿ ಪಕ್ಷಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ಗುರುವಾರ ಪಟ್ಟಣದ ಪಾಂಡವ ಕ್ರೀಡಾಂಗಣದ ಬಳಿ ಜನರೊಂದಿಗೆ ಜನತಾದಳ ಹಾಗೂ ಜೆಡಿಎಸ್ ಪಕ್ಷದ ೨೫ನೇ ವರ್ಷದ ಬೆಳ್ಳಿಹಬ್ಬದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನತಾದಳವನ್ನು ಅನೇಕ ಹಿರಿಯರು ಯಾವುದೇ ಸ್ವಾರ್ಥವಿಲ್ಲದೆ ನಿಸ್ವಾರ್ಥ ಭಾವನೆಯಿಂದ ಕಟ್ಟಿದ್ದಾರೆ. ಕನ್ನಡ ನಾಡಿನ ಅಸ್ಮಿತೆಯ ಉಳಿವಿಗಾಗಿ ಹುಟ್ಟಿದ ಪಕ್ಷ. ನಾಡಿನ ನೆಲ- ಜಲ, ಭಾಷೆ ಮತ್ತು ಜನಪರ ಚಳವಳಿ ಮತ್ತು ಹೋರಾಟದಿಂದಲೇ ಜನತಾದಳ ಪ್ರಾದೇಶಿಕ ಪಕ್ಷವಾಗಿ ಬೆಳೆದುಬಂದಿರುವುದು ಇತಿಹಾಸವಾಗಿದೆ ಎಂದು ನುಡಿದರು.ದೇವೇಗೌಡರ ಹೋರಾಟ ಕಿಚ್ಚು ನಮಗೆ ಸ್ಫೂರ್ತಿ:
೯೩ರ ಇಳಿ ವಯಸ್ಸಿನಲ್ಲೂ ದೇವೇಗೌಡರ ಹೋರಾಟದ ಕಿಚ್ಚು ಕಡಿಮೆಯಾಗಿಲ್ಲ. ನೀರಾವರಿ ಯೋಜನೆಗಳ ಬಗ್ಗೆ ಅವರಿಗಿರುವ ತಿಳಿವಳಿಕೆ, ರಾಜ್ಯದ ಪರ ನಿಲುವು ಇಂದಿನ ಯುವಕರಿಗೆ ಸ್ಫೂರ್ತಿಯಾಗಿದೆ. ಜೆಡಿಎಸ್ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿ ಗಟ್ಟಿಯಾಗಿದೆ. ಕಾರ್ಯಕರ್ತರು ಪಕ್ಷದ ದೊಡ್ಡ ಶಕ್ತಿಯಾಗಿದ್ದಾರೆ ಎಂದು ವಿಶ್ವಾಸದಿಂದ ಹೇಳಿದರು.೨೦೧೮ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ನಾಟಕ ರಾಮರಾಜ್ಯವಾಗಿತ್ತು. ಆ ಸಮಯದಲ್ಲಿ ರೈತರ ₹೨,೬೦೦ ಕೋಟಿ ಸಾಲ ಮನ್ನಾ ಮಾಡಿ ರೈತರ ಮೇಲಿನ ಆರ್ಥಿಕ ಹೊರೆ ಇಳಿಸಿದ್ದರು. ರೈತರ ಆತ್ಮಹತ್ಯೆಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದರು ಎಂದು ಬಣ್ಣಿಸಿದರು.
ನನ್ನ ರಾಜಕಾರಣ ಮಂಡ್ಯದಿಂದಲೇ ಆರಂಭಗೊಂಡಿತು. ಅಂದಿನ ನಿಖಿಲ್‌ಗೂ ಇಂದಿನ ನಿಖಿಲ್‌ಗೂ ವ್ಯತ್ಯಾಸಗಳಿವೆ. ಚುನಾವಣೆಯಲ್ಲಿ ಏಳು- ಬೀಳುಗಳು ಸಹಜ. ಸೋಲುಗಳಿಂದ ನನಗೆ ರಾಜಕೀಯ ಪಕ್ವತೆ ಬಂದಿದೆ. ಜನರು ನನ್ನನ್ನು ಚುನಾವಣೆಯಲ್ಲಿ ಸೋಲಿಸಿದರೂ ನಾನು ಹೋದಲ್ಲೆಲ್ಲಾ ಅಕ್ಕರೆ, ಪ್ರೀತಿ, ವಿಶ್ವಾಸವನ್ನು ತೋರಿಸುತ್ತಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಅವರು ಈ ಜಿಲ್ಲೆಯವರಾಗದಿದ್ದರೂ ಹಲವು ರೈತಪರ- ಜನಪರ ಹೋರಾಟಗಳಿಂದಲೇ ಜಿಲ್ಲೆಯ ಜನರ ಮನಸ್ಸನ್ನು ಗೆದ್ದಿದ್ದಾರೆ. ಅದನ್ನು ಉಳಿಸಿಕೊಂಡು ಹೋಗಬೇಕಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.ಒಗ್ಗಟ್ಟಾಗಿ ಪಕ್ಷವನ್ನು ಮುನ್ನಡೆಸಿ:
ಜೆಡಿಎಸ್‌ಗೆ ಈಗ ೨೫ ವರ್ಷವಾಗಿದೆ. ಪಕ್ಷ ಸುವರ್ಣ ಮಹೋತ್ಸವ ಆಚರಿಸಬೇಕಾದರೆ ಜನಪರವಾದ ಹೋರಾಟ ಮತ್ತು ಬದ್ಧತೆಯಿಂದ ಎಲ್ಲರೂ ಮುನ್ನಡೆಯಬೇಕಿದೆ. ರಾಜ್ಯದಲ್ಲಿ ಪಕ್ಷ ಯಶಸ್ಸು ಕಾಣುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಬಲ ಪಡಿಸುವ ಕೆಲಸ ಮಾಡಬೇಕಿದೆ. ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಹೆಗಲುಕೊಟ್ಟು ನಿಲ್ಲಬೇಕಿದೆ. ಅದಕ್ಕಾಗಿ ಜೆಡಿಎಸ್‌ನ ಮಾಜಿ ಶಾಸಕರಿಗೆ ಜನರು ಆಶೀರ್ವಾದ ಮಾಡಬೇಕು ಎಂದು ಜನರಲ್ಲಿ ಮನವಿ ಮಾಡಿದರು.೨೦೨೪ರಲ್ಲಿ ಜಿಲ್ಲೆಯ ಜನರು ನೀಡಿದ ಅಭೂತಪೂರ್ವ ಬೆಂಬಲದಿಂದ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾದರು. ಜನರ ಋಣ ತೀರಿಸುವ ಹಂಬಲದೊಂದಿಗೆ ಕೈಗಾರಿಕೆ ಸ್ಥಾಪನೆಗೆ ರಾಜ್ಯಸರ್ಕಾರದ ಬಳಿ ೫೦೦ ಎಕರೆ ಜಾಗ ಕೋರಿದ್ದಾರೆ, ಜಿಲ್ಲೆಯಲ್ಲಿ ಬಡವರು ಹಾಗೂ ಮಧ್ಯಮ ವರ್ಗಕ್ಕೆ ಸೇರಿದ ಪ್ರತಿಭಾವಂತ ವಿದ್ಯಾಥಿಗಳಿದ್ದಾರೆ. ಅವರೆಲ್ಲರೂ ಉದ್ಯೋಗವಿಲ್ಲದೆ ಅಲೆದಾಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರ ೫೦೦ ಎಕರೆ ಭೂಮಿಯನ್ನು ದೊರಕಿಸಿಕೊಡುವುದಕ್ಕೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ರೈತರ ಬಗ್ಗೆ ಚಿಂತೆಯಿಲ್ಲ:ರಾಜ್ಯದಲ್ಲಿ ೩ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ೯೭ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೂ ಈ ಸರ್ಕಾರಕ್ಕೆ ರೈತರ ಬಗ್ಗೆ ಚಿಂತೆಯಿಲ್ಲ. ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕಾಂಗ್ರೆಸ್‌ನವರು ಹೋಗಲೂ ಇಲ್ಲ, ಸಾಂತ್ವನವನ್ನೂ ಹೇಳಲಿಲ್ಲ ಎಂದು ಟೀಕಿಸಿದರು.
೨೦೨೮ಕ್ಕೆ ರಾಜ್ಯದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿಕೂಟ ರಚನೆಯಾಗಬೇಕು. ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎನ್ನುವುದು ರಾಜ್ಯದ ಆರೂವರೆ ಕೋಟಿ ಕನ್ನಡಿಗರ ಭಾವನೆಯಾಗಿದೆ. ಅದಕ್ಕಾಗಿ ಈಗಿನಿಂದಲೇ ಮುಖಂಡರು- ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಬೇಕು. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷವನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರ ಹಿಡಿಯುವಂತೆ ಮಾಡಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಸಾ.ರಾ.ಮಹೇಶ್, ರಾಜ್ಯ ಎಸ್ಸಿ- ಎಸ್ಟಿ ವಿಭಾಗದ ಅಧ್ಯಕ್ಷ ಡಾ.ಕೆ.ಅನ್ನದಾನಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ವಿಧಾನಪರಿಷತ್ ಸದಸ್ಯ ಮಂಜೇಗೌಡ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡರಾದ ಬಿ.ಆರ್.ರಾಮಚಂದ್ರ, ಯುವ ಜನತಾದಳದ ಜಿಲ್ಲಾಧ್ಯಕ್ಷ ಕಂಸಾಗರ ರವಿ, ಜೆಡಿಎಸ್ ಜಿಲ್ಲಾ ಮಹಿಳಾಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಅನುಪಮಾ, ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಅಧ್ಯಕ್ಷ ಮಲ್ಲೇಶ್, ಎಚ್.ಮಂಜುನಾಥ, ಇಮ್ರಾನ್, ಅಣ್ಣೇಗೌಡ ಅಶ್ವತ್ಥ್, ಪೈಲ್ವಾನ್ ಮುಕುಂದ, ಚಂದ್ರಶೇಖರ್ ಇತರರಿದ್ದರು.