ಜೆಡಿಎಸ್‌ನ ಮಾಜಿ ಶಾಸಕರು ನಿರುದ್ಯೋಗಿ ಶಾಸಕರು. ಅವರಿಗೆ ಬೇರೆ ಯಾವುದೇ ಕೆಲಸವಿಲ್ಲ. ಸುಳ್ಳು ಹೇಳುವುದರಲ್ಲಿ ಮಾತ್ರ ನಿಸ್ಸೀಮರು. ವಾಸ್ತವವನ್ನು ಮರೆಮಾಚಿ ಜನರನ್ನು ದಾರಿ ತಪ್ಪಿಸುವ ಕಲೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜೆಡಿಎಸ್‌ನ ಮಾಜಿ ಶಾಸಕರು ನಿರುದ್ಯೋಗಿ ಶಾಸಕರು. ಅವರಿಗೆ ಬೇರೆ ಯಾವುದೇ ಕೆಲಸವಿಲ್ಲ. ಸುಳ್ಳು ಹೇಳುವುದರಲ್ಲಿ ಮಾತ್ರ ನಿಸ್ಸೀಮರು. ವಾಸ್ತವವನ್ನು ಮರೆಮಾಚಿ ಜನರನ್ನು ದಾರಿ ತಪ್ಪಿಸುವ ಕಲೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಛೇಡಿಸಿದರು.

ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವ ಕಂಪನಿಯೊಂದು ಸರ್ಕಾರದೆದುರು ಅರ್ಜಿ ಹಾಕುವುದು ನಿಯಮ. ಅದನ್ನು ಆಧರಿಸಿ ಭೂಮಿಯನ್ನು ಕೊಡುವುದು ಸರ್ಕಾರದ ಕರ್ತವ್ಯ. ಅಧಿಕೃತ ಕಂಪನಿಯೊಂದರಿಂದ ಯಾವುದೇ ಅರ್ಜಿ ಬಾರದೆ ಕೈಗಾರಿಕೆ ಸ್ಥಾಪನೆಗೆ ಭೂಮಿ ಕೊಡಿ ಎಂದರೆ ಯಾರಿಗೇಂತ ಭೂಮಿ ಕೊಡೋಣ. ಈ ಸಾಮಾನ್ಯ ಜ್ಞಾನ ಜೆಡಿಎಸ್ ಶಾಸಕರಿಗಿಲ್ಲವೇ. ಅದರಲ್ಲೂ ಕೆಐಎಡಿಬಿ ಅಧ್ಯಕ್ಷರಾಗಿದ್ದ ಡಿ.ಸಿ.ತಮ್ಮಣ್ಣನವರಿಗಿಲ್ಲವೇ ಅಥವಾ ಎಲ್ಲಾ ಗೊತ್ತಿದ್ದು ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿದ್ದಾರೆಯೇ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ನಾವು ಕೈಗಾರಿಕೆ ಸ್ಥಾಫನೆಗೆ ಭೂಮಿ ಇಲ್ಲವೆಂದು ಎಲ್ಲಿಯೂ ಹೇಳಿಲ್ಲ. ಈಗಲೂ ಕಾಡಾ ಇಲಾಖೆ ವ್ಯಾಪ್ತಿಯಲ್ಲಿರುವ ೮೨ ಎಕರೆ ಜಾಗ ನಮ್ಮ ಬಳಿ ಇದೆ. ಯಾವುದೇ ಕ್ಷಣದಲ್ಲೂ ನಾವು ಹಸ್ತಾಂತರ ಮಾಡಲು ಸಿದ್ಧರಿದ್ದೇವೆ. ಅಮೆರಿಕ ಮೂಲದ ಕಂಪನಿ ಕೈಗಾರಿಕೆ ಸ್ಥಾಪನೆ ಸಂಬಂಧ ಇದುವರೆಗೆ ಸರ್ಕಾರಕ್ಕೆ ಏಕೆ ಪ್ರಸ್ತಾವನೆಯನ್ನು ಸಲ್ಲಿಸಿಲ್ಲ ಎಂದು ಮತ್ತೊಮ್ಮೆ ಪ್ರಶ್ನಿಸಿದರು.

ಜೆಡಿಎಸ್‌ನ ಮಾಜಿ ಶಾಸಕರು ಕಪೋಲಕಲ್ಪಿತ ಅಭಿಪ್ರಾಯಗಳನ್ನು ಜನರ ಮುಂದಿಡುತ್ತಿದ್ದಾರೆ. ಸತ್ಯಕ್ಕೆ ದೂರವಾದ ಮಾಹಿತಿಗಳನ್ನು ಕೊಡುತ್ತಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ರಾಮನಗರದಲ್ಲಿ ಯಾವುದೇ ಕೈಗಾರಿಕೆಗಳಿಗೆ ಜಾಗ ಕೊಡದೆ ರೈತರ ಪರವಾಗಿ ಹೋರಾಟ ಮಾಡುತ್ತಾರೆ. ಮಂಡ್ಯದಲ್ಲಿ ಜಾಗಕ್ಕಾಗಿ ಒತ್ತಾಯಿಸುತ್ತಾರೆ. ತಮ್ಮ ಸ್ವಂತ ಆಸ್ತಿ ಇರುವ ಕಡೆ ಹೋರಾಟ. ಭೂಮಿ ಇಲ್ಲದಿದ್ದ ಕಡೆ ಕೈಗಾರಿಕೆ ಸ್ಥಾಪನೆಗೆ ದನಿ ಎತ್ತುವುದು. ಈ ಇಬ್ಬಗೆ ನೀತಿಯನ್ನು ಕೈಬಿಟ್ಟು ಅಭಿವೃದ್ಧಿ ಪರವಾಗಿ ಚಿಂತಿಸುವಂತೆ ಒತ್ತಾಯಿಸಿದರು.

ಜೆಡಿಎಸ್‌ನವರು ಶಾಸಕರಾಗಿದ್ದ ವೇಳೆ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಕಾಲಹರಣ ಮಾಡಿ ಈಗ ಆಗುತ್ತಿರುವ ಅಭಿವೃದ್ಧಿಯನ್ನು ಸಹಿಸದೆ ಅನಗತ್ಯ ಟೀಕೆ ಮಾಡುತ್ತಿದ್ದಾರೆ. ಈ ರೀತಿಯ ಸುಳ್ಳು ಮಾತುಗಳನ್ನು ಹೇಳುವುದು ಬಿಟ್ಟು ಯಾವ ಕೈಗಾರಿಕೆಗೆ ಖಚಿತವಾಗಿ ಭೂಮಿ ಬೇಕೆಂದು ಸರ್ಕಾರದೆದುರು ಅಧಿಕೃತ ಕಂಪನಿಯಿಂದ ಅರ್ಜಿ ಸಲ್ಲಿಸಿದರೆ ಭೂಮಿ ಕೊಡಲು ಬದ್ಧರಾಗಿದ್ದೇವೆ ಎಂದು ಪುನರುಚ್ಚರಿಸಿದರು.

ಜೆಡಿಎಸ್ ಸಿದ್ಧಾಂತವಿಲ್ಲದ ಪಕ್ಷ. ಪಕ್ಷದೊಳಗೆ ಕಾರ್ಯಕರ್ತರನ್ನು ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ. ಎರಡು ಬಾರಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೂ ಕಾರ್ಯಕರ್ತರಿಗೆ ಯಾವುದೇ ಅಧಿಕಾರವನ್ನು ಕೊಡದೆ ತಮ್ಮ ಸ್ವಾರ್ಥಕ್ಕಾಗಿ ಅಧಿಕಾರವನ್ನು ಬಳಸಿಕೊಂಡರು. ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಜಿಲ್ಲೆಯ ೧೧ಮಂದಿಗೆ ಅಧಿಕಾರವನ್ನು ದೊರಕಿಸಿಕೊಟ್ಟು ಇತಿಹಾಸ ಸೃಷ್ಟಿಸಿದ್ದಾರೆ. ಕೃಷಿ ವಿಶ್ವವಿದ್ಯಾಲಯವನ್ನು ತಂದು ರೈತರು, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ. ಮೈಷುಗರ್ ಕಾರ್ಖಾನೆಗೆ ಮರು ಚಾಲನೆ ದೊರಕಿಸಿದ್ದಾರೆ. ಜವಳಿ ಪಾರ್ಕ್‌ನಂತಹ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಸಚಿವರ ವಿರುದ್ಧದ ಇಂತಹ ಸುಳ್ಳು ಆರೋಪಗಳನ್ನು ನಿಲ್ಲಿಸಬೇಕು ಎಂದು ಆಗ್ರಹಪಡಿಸಿದರು.

ಅಭಿವೃದ್ಧಿ ವಿಷಯವಾಗಿ ಕೇಂದ್ರ ಸಚಿವರೇ ಜಿಲ್ಲೆಯ ಸಚಿವರು, ಶಾಸಕರ ಸಭೆ ಕರೆಯಲಿ. ನಾವೇ ಅವರ ಬಳಿಗೆ ಹೋಗುತ್ತೇವೆ. ಕೈಗಾರಿಕೆಯನ್ನು ತಂದರೆ ನಾವೇ ಅವರನ್ನು ಅದ್ಧೂರಿಯಾಗಿ ಮೆರವಣಿಗೆಯಲ್ಲಿ ತಂದು ಗೌರವಿಸುತ್ತೇವೆ ಎಂದರು.

ಮಾಜಿ ಶಾಸಕರು ಬಾಯಿಗೆ ಬಂದಂತೆ ಮಾತನಾಡಬಾರದು. ಭೂಮಿಯನ್ನು ಯಾವ ಮಾನದಂಡದ ಮೇಲೆ ಕಂಪನಿಗಳಿಗೆ ನೀಡಬೇಕು ಎಂಬ ಬಗ್ಗೆ ಅರಿತು ಮಾತನಾಡಬೇಕು. ಸುಳ್ಳನ್ನು ಸತ್ಯ ಮಾಡಲು ಪ್ರಯತ್ನಿಸದಂತೆ ಸಲಹೆ ನೀಡಿದರು.

ಗೋಷ್ಠಿಯಲ್ಲಿ ಮಾಜಿ ಶಾಸಕ ಎಚ್.ಬಿ.ರಾಮು, ನಾಗೇಂದ್ರಕುಮಾರ್, ಎಂ.ಎಸ್.ಚಿದಂಬರ್, ಬಿ.ಪಿ.ಪ್ರಕಾಶ್, ವಿಜಯಕುಮಾರ್ ಇತರರಿದ್ದರು.