ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರೈತರು ಮತ್ತು ಶಿಕ್ಷಕರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಸಮರ್ಪಕವಾಗಿ ಮಂಡಿಸುವಂತಹ ಎದೆಗಾರಿಕೆ ಮರಿತಿಬ್ಬೇಗೌಡರಲ್ಲಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕು ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಶಿಕ್ಷಕರಿಗೆ ಮನವಿ ಮಾಡಿದರು.ಪ್ರಸ್ತುತ ದಿನಗಳಲ್ಲಿ ಸಿದ್ಧಾಂತ ಮತ್ತು ವಾಸ್ತವದ ಮೇಲೆ ರಾಜಕಾರಣ ಮಾಡುವಂತಹುದ್ದು ಕಡಿಮೆಯಾಗುತ್ತಿದೆ. ಆದರೆ ಮರಿತಿಬ್ಬೇಗೌಡರು ಇದಕ್ಕೆ ತದ್ವಿರುದ್ಧವಾಗಿದ್ದು, ಶಿಕ್ಷಕರು ಮತ್ತು ಜಿಲ್ಲೆಯ ರೈತರ ಬಗ್ಗೆ ಅಪಾರ ಕಾಳಜಿಯಿಂದ ಸದನದಲ್ಲಿ ಅವರ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ನಾಲ್ಕು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಪರಿಷತ್ತಿನಲ್ಲಿ ಅತ್ಯಂತ ಹಿರಿಯ ಸದಸ್ಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಹಿರಿತನದ ಆಧಾರದ ಮೇಲೆ ಅವರಿಗೆ ಸಭಾಪತಿಯಂತಹ ಸ್ಥಾನ ಒಲಿಯುವ ಸಾಧ್ಯತೆಗಳೂ ಇವೆ. ಈ ಎಲ್ಲ ಅಂಶಗಳನ್ನೂ ಗಣನೆಗೆ ತೆಗೆದುಕೊಂಡು ಶಿಕ್ಷಕರು ಮರಿತಿಬ್ಬೇಗೌಡರಿಗೆ ಮೊದಲ ಪ್ರಾಶಸ್ತ್ಯ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.ಬಿಜೆಪಿ-ಜೆಡಿಎಸ್ ಸರ್ಕಾರ ಆಡಳಿತದಲ್ಲಿದ್ದಾಗ ಶಿಕ್ಷಕರು ಒಟಿಎಸ್ ರದ್ದು ಮಾಡಬೇಕೆಂಬುದು ಶಿಕ್ಷಕರ ಬಹುದಿನಗಳ ಬೇಡಿಕೆಯಾಗಿತ್ತು. ಕಾಂಗ್ರೆಸ್ ಇದನ್ನು ಅರಿತು ಗ್ಯಾರಂಟಿ ಯೋಜನೆಗಳ ಜೊತೆಗೆ ತನ್ನ ಪ್ರಣಾಳಿಕೆಯಲ್ಲೂ ಇದನ್ನು ಸೇರಿಸಿ ಬೇಡಿಕೆ ಈಡೇರಿಸುವ ಮಾತು ಕೊಟ್ಟಿದೆ. ಈಗಾಗಲೇ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ನಂತರ ಹಂತ ಹಂತವಾಗಿ ಪ್ರಣಾಳಿಕೆಯಲ್ಲಿನ ಎಲ್ಲ ಅಂಶಗಳನ್ನೂ ಈಡೇರಿಸುವುದಾಗಿ ಸ್ಪಷ್ಟಪಡಿಸಿದರು.
ಶಿಕ್ಷಕರ ಬಗ್ಗೆ ಯಾವುದೇ ಜ್ಞಾನವಿಲ್ಲದವರನ್ನು ಮೈತ್ರಿ ಪಕ್ಷಗಳು ಅಭ್ಯರ್ಥಿಯನ್ನಾಗಿ ಮಾಡಿವೆ. ಈ ಕ್ಷೇತ್ರದಲ್ಲಿ ಅರ್ಹತೆ ಮತ್ತು ಹಿರಿತನದ ಅಗತ್ಯವಿದೆ. ನಮ್ಮ ಪಕ್ಷದ ಅಭ್ಯರ್ಥಿ ಈಗಾಗಲೇ ನಾಲ್ಕು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿ ಎಲ್ಲವನ್ನೂ ಅರಿತವರಾಗಿದ್ದಾರೆ. ಹೀಗಿರುವಾಗ ಮತ್ತೊಮ್ಮೆ ಅವರನ್ನೇ ಆಯ್ಕೆ ಮಾಡುವುದು ಸೂಕ್ತ ಎಂದು ಪ್ರತಿಪಾದಿಸಿದರು.ಮಳವಳ್ಳಿ ಸೇರಿ ಎಲ್ಲೆಡೆ ಕ್ರೈಸ್ತ ಶಿಕ್ಷಣ ಸಂಸ್ಥೆಗಳು, ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಇತರೆ ಸಂಸ್ಥೆಗಳಲ್ಲಿರುವ ಪ.ಜಾತಿ, ಪಂಗಡ, ಹಿಂದುಳಿದ ವರ್ಗಗಳ ಶಿಕ್ಷಕರ ಬದುಕು ಅತಂತ್ರವಾಗಿದೆ. ಅವರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಾಗಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಹೀಗಿರುವಾಗ ಅವರ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುವ ಸಾಧ್ಯತೆಗಳಿರುವುದರಿಂದ ಆಯ್ಕೆ ಉತ್ತಮ ಎಂದು ಹೇಳಿದರು.
ಮರಿತಿಬ್ಬೇಗೌಡರು ತಮ್ಮ ನಾಲ್ಕೂ ಅವಧಿಯಲ್ಲೂ ವಿರೋಧ ಪಕ್ಷದ ಸ್ಥಾನದಲ್ಲಿದ್ದುದೇ ಹೆಚ್ಚು. ಹೀಗಾಗಿ ಅವರು ಹೆಚ್ಚಿನ ಸಮಸ್ಯೆಗಳ ಬಗೆಹರಿಸಲು ಸಾಧ್ಯವಾಗದಿರಬಹುದು. ಆದರೆ ಈ ಬಾರಿ ನಮ್ಮದೇ ಸರ್ಕಾರ ಇರುವಾಗ ಚರ್ಚೆಗೆ ಹೆಚ್ಚಿನ ಅವಕಾಶಗಳು ಇವೆ ಎಂದರು.ಲೋಕಸಭೆಯಲ್ಲಿ ಸ್ಟಾರ್ ಚಂದ್ರು ಆಯ್ಕೆ ಖಚಿತ:
ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಗೆಲುವು ನಿಶ್ಚಿತ. ೨೦೧೯ರಿಂದಲೂ ನಮ್ಮ ಪ್ರಯತ್ನ ಲಭಿಸುತ್ತಿದೆ. ಈ ಬಾರಿಯೂ ಅದೇ ರೀತಿ ಪುನಾರಾವರ್ತನೆಯಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಭೋವಿ ಅಭಿವೃದ್ಧಿ ನಿಗಮದಲ್ಲಿ ದೊಡ್ಡ ಹಗರಣ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವುದಕ್ಕಿಂತ ಭೋವಿ ಅಭಿವೃದ್ಧಿ ನಿಗಮದಲ್ಲಿ ದೊಡ್ಡ ಹಗರಣ ನಡೆದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಬಟಾ ಬಯಲಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಡೆತ್‌ನೋಟ್‌ನಲ್ಲಿ ಸ್ಪಷ್ಟವಾಗಿ ಸಚಿವರ ಹೆಸರನ್ನು ಉಲ್ಲೇಖಿಸಿಲ್ಲ. ಹೀಗಿರುವಾಗ ಅವರ ರಾಜೀನಾಮೆಯ ಅಗತ್ಯವಾದರೂ ಏನು ಎಂದು ಪ್ರಶ್ನಿಸಿದ ಅವರು, ತನಿಖೆ ಪ್ರಗತಿಯಲ್ಲಿದೆ. ನಂತರ ನಿರ್ಧಾರವಾಗುತ್ತದೆ ಎಂದರು.