ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಪುರಸಭೆ ಅಧಿಕಾರ ಮೈತ್ರಿಕೂಟಕ್ಕೆ ದೊರಕಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್ ನ ಜ್ಯೋತಿಲಕ್ಷ್ಮೀಬಾಬು, ಬಿಜೆಪಿಯ ಏಕೈಕ ಸದಸ್ಯ ಎಲ್.ಅಶೋಕ್ ಅವಿರೋಧವಾಗಿ ಆಯ್ಕೆಯಾದರು. ಪುರಸಭೆ ಒಟ್ಟು 23 ಸದಸ್ಯರ ಸಂಖ್ಯಾಬಲ ಹೊಂದಿದ್ದ ಜೆಡಿಎಸ್- 18, ಕಾಂಗ್ರೆಸ್- 3, ಬಿಜೆಪಿ- 1 ಹಾಗೂ ರೈತಸಂಘ- 1 ಸದಸ್ಯರಿದ್ದರು.ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿತ್ತು.
ಮಂಗಳವಾರ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಸೂಚನೆ ಮೇರೆಗೆ ಅಧ್ಯಕ್ಷ ಸ್ಥಾನಕ್ಕೆ 9ನೇ ವಾರ್ಡ್ ನ ಜೆಡಿಎಸ್ ಸದಸ್ಯೆ ಜ್ಯೋತಿಲಕ್ಷ್ಮೀ ಬಾಬು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 15ನೇ ವಾರ್ಡ್ ನ ಬಿಜೆಪಿಯ ಏಕೈಕ ಸದಸ್ಯ ಎಲ್.ಅಶೋಕ್ ನಾಮಪತ್ರ ಸಲ್ಲಿಸಿದರು.ಇವರಿಬ್ಬರನ್ನು ಹೊರತುಪಡಿಸಿ ಉಳಿದ ಯಾವೊಬ್ಬ ಸದಸ್ಯರು ಸಹ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಸಂತೋಷ್ ಜೆಡಿಎಸ್ ನ ಜ್ಯೋತಿಲಕ್ಷ್ಮೀಬಾಬು ಅವರನ್ನು ಅಧ್ಯಕ್ಷರಾಗಿ, ಬಿಜೆಪಿಯ ಎಲ್. ಅಶೋಕ್ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.
ಅಧ್ಯಕ್ಷ - ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿಸುವ ಮೂಲಕ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಮೈತ್ರಿ ಧರ್ಮ ಪಾಲನೆ ಮಾಡಿದರು. ನಂತರ ನೂತನ ಅಧ್ಯಕ್ಷೆ ಜ್ಯೋತಿಲಕ್ಷ್ಮೀಬಾಬು, ಉಪಾಧ್ಯಕ್ಷ ಎಲ್. ಅಶೋಕ್ ಅವರನ್ನು ಎಲ್ಲಾ ಸದಸ್ಯರು, ಮುಖಂಡರು ಅಭಿನಂದಿಸಿದರು.ಪುರಸಭೆಯ ಏಕೈಕ ಬಿಜೆಪಿ ಸದಸ್ಯ ಎಲ್.ಅಶೋಕ್ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡುವ ಮೂಲಕ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಮೈತ್ರಿ ಧರ್ಮಪಾಲನೆ ಮಾಡುವ ಮೂಲಕ ರಾಜ್ಯ ಹಾಗೂ ಜಿಲ್ಲಾ ಬಿಜೆಪಿ- ಜೆಡಿಎಸ್ ನಾಯಕರಿಗೆ ಸ್ಪಷ್ಟವಾದ ಸಂದೇಶ ರವಾನಿಸಿದರು.
ಪುರಸಭೆಯಲ್ಲಿ 18 ಮಂದಿ ಜೆಡಿಎಸ್ ಸದಸ್ಯರಿದ್ದು ಸಂಪೂರ್ಣ ಬಹುಮತದೊಂದಿಗೆ ಜೆಡಿಎಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಬಹುದಾಗಿತ್ತು. ಆದರೆ, ಸಿ.ಎಸ್.ಪುಟ್ಟರಾಜು ಅವರು ಮೈತ್ರಿ ಧರ್ಮ ಪಾಲನೆ ಮಾಡುವ ಉದ್ದೇಶದಿಂದ ಪುರಸಭೆಯಲ್ಲಿ ಇರುವ ಏಕೈಕ ಬಿಜೆಪಿ ಸದಸ್ಯ ಎಲ್.ಅಶೋಕ್ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಿದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ನಡೆಗೆ ಬಿಜೆಪಿ ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿದರು.ಅಧ್ಯಕ್ಷೆ ಜ್ಯೋತಿಲಕ್ಷ್ಮೀಬಾಬು ಮಾತನಾಡಿ, ನಮ್ಮ ನಾಯಕರಾದ ಸಿ.ಎಸ್.ಪುಟ್ಟರಾಜು ಅವರ ಆಶೀರ್ವಾದದಿಂದ ಪುರಸಭೆಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲರ ಜತೆಗೂಡಿ ಕೆಲಸ ಮಾಡುವ ಮೂಲಕ ಪುರಸಭೆ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಉಪಾಧ್ಯಕ್ಷ ಎಲ್.ಅಶೋಕ್ ಮಾತನಾಡಿದರು. ಪುರಸಭೆ ಆವರಣದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದರು. ಅಧ್ಯಕ್ಷೆ ಜ್ಯೋತಿಲಕ್ಷ್ಮೀಬಾಬು ಅವರನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಯಿತು.