ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಜೆಡಿಎಸ್ ಮುಖಂಡರು ಅಪಪ್ರಚಾರ ಮಾಡುವ ಚಾಳಿ ಬಿಡಬೇಕು ಎಂದು ಜಿಪಂ ಮಾಜಿ ಸದಸ್ಯೆ ಸುಷ್ಮಾರಾಜು ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ಡಾ.ಅನ್ನದಾನಿ ಅವರು 4 ಸಾವಿರ ಕೋಟಿ ರು. ಅನುದಾನ ತಂದು ಅಭಿವೃದ್ಧಿ ಪಡಿಸಿದ್ದಾರೆಂದು ಜೆಡಿಎಸ್ ಮುಖಂಡರು ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ತಂದಿದ್ದ ಯೋಜನೆಗಳನ್ನು ಅಂತಿಮಗೊಳಿಸಲು ಸಾಧ್ಯವಾಗದವರು ತಾವು ತಂದಿರುವ ಸಾವಿರಾರು ಕೋಟಿ ರು. ಹಣದ ಯೋಜನೆಯ ಸಾಕ್ಷಿ ಗುಡ್ಡೆಗಳು ಕಣ್ಣಿಗೆ ಕಾಣುತ್ತಿಲ್ಲ ಎಂದು ಟೀಕಿಸಿದರು.ಟಿಎಪಿಸಿಎಂಎಸ್ ನಿರ್ದೇಶಕ ಲಿಂಗರಾಜು ಮಾತನಾಡಿ, ಭೂ ಅಕ್ರಮದ ವಿಚಾರದಲ್ಲಿ ಭೂಮಿ ವಾಪಸ್ ಪಡೆವ ಜೊತೆಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎನ್ನುವುದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರ ಆಶಯವಾಗಿದೆ. ಜೆಡಿಎಸ್ ಮುಖಂಡರು ತಪ್ಪುಗಳನ್ನು ಮುಚ್ಚಿಕೊಳ್ಳುವ ಉದ್ದೇಶದಿಂದ ಸುದ್ದಿಗೋಷ್ಠಿ ನಡೆಸಿ ಸುಳ್ಳು ದಾಖಲೆಗಳನ್ನು ಮುಂದಿಟ್ಟಿಕೊಂಡು ಮಾತನಾಡಿದ್ದಾರೆ ಎಂದು ದೂರಿದರು.
ಭೂ ಅಕ್ರಮದ ವಿಚಾರದಲ್ಲಿ ಅಮಾನತುಗೊಂಡಿರುವ ಅಧಿಕಾರಿಗಳು ಅನ್ನದಾನಿ ಅವರ ಅಧಿಕಾರ ಅವಧಿಯಲ್ಲಿ ಇದ್ದವರು ಎನ್ನುವುದನ್ನು ಅರಿಯಬೇಕು. ಸರ್ಕಾರಿ ಭೂಮಿಯನ್ನು ಪಿ.ಎಂ.ನರೇಂದ್ರಸ್ವಾಮಿ ಅವರು ಶಾಸಕರಾದ ಮೇಲೆ ಜಮೀನು ವಾಪಸ್ ಪಡೆದ ಎಂ.ಆರ್. ಇಟ್ಟಿಕೊಂಡು ಸುದ್ದಿಗೋಷ್ಠಿ ಮಾಡಿದ್ದಾರೆಂದು ಆರೋಪಿಸಿದರು.ಪುರಸಭೆ ಮಾಜಿ ಸದಸ್ಯ ಕಿರಣ್‌ಶಂಕರ್ ಮಾತನಾಡಿ, ಬಸವ, ಕನಕ, ಸೇರಿದಂತೆ ಇತರೆ ಭವನಗಳ ನಿರ್ಮಾಣಕ್ಕೆ ಅಂದಾಜು ವೆಚ್ಚ ತಯಾರಿಸಿ ಸರ್ಕಾರದಿಂದ ಅನುದಾನ ತಂದು ಕಾಮಗಾರಿ ಆರಂಭಿಸುವ ಬದಲು ಸಮುದಾಯದ ಒಲೈಕೆಗಾಗಿ ಸರ್ಕಾರ ಕೊಟ್ಟ ಸ್ವಲ್ಪ ಅನುದಾನದಲ್ಲಿ ಕಾಮಗಾರಿ ಅರಂಭಿಸಿ ಪ್ರಯೋಜನಕ್ಕೆ ಬಾರದ ಸ್ಥಿತಿಗೆ ಮಾಜಿ ಶಾಸಕರು ತಲುಪಿಸಿದ್ದಾರೆ. ಭವನಗಳ ಅವ್ಯವಸ್ಥೆಗೆ ಮಾಜಿ ಶಾಸಕರೇ ಕಾರಣರಾಗಿದ್ದಾರೆಂದು ದೂರಿದರು.
ಜಿಪಂ ಮಾಜಿ ಸದಸ್ಯೆ ಸುಜಾತ ಕೆ.ಎಂ. ಪುಟ್ಟು ಮಾತನಾಡಿ, ಜಿಪಂ ಮಾಜಿ ಸದಸ್ಯ ಹನುಮಂತು ದೌರ್ಜನ್ಯದಿಂದ ಕಾಂಗ್ರೆಸ್ ಪಕ್ಷದಿಂದ ಹೊರ ಬಂದೆ ಎಂದು ಹೇಳಿದ್ದಾರೆ. ಜೆಡಿಎಸ್ ಪಕ್ಷ ಬಿಟ್ಟು ಬಂದಾಗ ನಿಮಗೆ ಅಲ್ಲಿ ದೌರ್ಜನ್ಯ ಯಾರು ನಡೆಸಿದ್ದರು ಎಂದು ತಿಳಿಸಬೇಕು. ಬೇರೆ ಪಕ್ಷದಿಂದ ಬಂದವರಿಗೆ ಜಿಪಂ ಟಿಕೆಟ್ ನೀಡಿ ಗೆಲ್ಲುಸುವ ಜೊತೆಗೆ ವಿಪಕ್ಷದ ನಾಯಕನ್ನಾಗಿ ಮಾಡಿದ್ದು ಪಿ.ಎಂ.ನರೇಂದ್ರಸ್ವಾಮಿ ಎನ್ನುವುದನ್ನು ಮರೆಯಬಾರದು ಎಂದರು.ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಿಶ್ವ ಮಾತನಾಡಿ, ಗ್ರಾಪಂನಲ್ಲಿ ಸೋತ ವ್ಯಕ್ತಿಯನ್ನು ಜಿಪಂ ಚುನಾವಣೆಯಲ್ಲಿ ಗೆಲ್ಲಿಸಿ ನಾಯಕತ್ವ ಕೊಡಿಸಿರುವುದನ್ನು ಮರೆತು ನರೇಂದ್ರಸ್ವಾಮಿ ಅವರು ದರ್ಪ ದೌರ್ಜನ್ಯ ಮಾಡುತ್ತಾರೆ ಎಂದು ದೂರಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕುಳ್ಳಚನ್ನಂಕಯ್ಯ, ಬಸವರಾಜು, ದೊಡ್ಡಯ್ಯ, ಸಿ.ಪಿ.ರಾಜು, ದೇವರಾಜು, ಪುಟ್ಟಸ್ವಾಮಿ, ಮಾದೇಶ್, ಚೌಡಪ್ಪ, ದ್ಯಾಪೇಗೌಡ, ಶಿವಮಾದೇಗೌಡ, ಶಿವರಾಜ್, ಲಿಂಗರಾಜು, ಸೇರಿದಂತೆ ಇತರರು ಇದ್ದರು.