ಸಾರಾಂಶ
ಸ್ಥಳೀಯ ಪುರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾನು ಮತ ಕೇಳಲು ಹೋದಾಗ ಗುಡಿಸಲು ತೆರವುಗೊಳಿಸುವ ಅನಿವಾರ್ಯತೆಯಲ್ಲಿದ್ದ ಚೌಡಮ್ಮ ಎಂಬ ವೃದ್ಧೆ ತನ್ನ ಕುಟುಂಬದ ಆಶ್ರಯಕ್ಕೆ ನಿವೇಶನ ಸೇರಿದಂತೆ ಏನಾದರೂ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದರು.
ಕನ್ನಡಪ್ರಭ ವಾರ್ತೆ ಮದ್ದೂರು
ಪುರಸಭಾ ಜೆಡಿಎಸ್ ಸದಸ್ಯೆ ಪ್ರಿಯಾಂಕಾ ಅಪ್ಪು ಪಿ.ಗೌಡ ಹಾಗೂ ಸಮಾಜ ಸೇವಕ ಅಪ್ಪುಪಿ.ಗೌಡ ದಂಪತಿ ಬಡ ಕುಟುಂಬವೊಂದಕ್ಕೆ ನಿವೇಶನ (ಸೈಟ್)ವನ್ನು ದಾನವಾಗಿ ನೀಡಿದರು.ಪುರಸಭಾ ಸದಸ್ಯೆ ಪ್ರಿಯಾಂಕ ಅಪ್ಪುಪಿ.ಗೌಡ ಮಾತನಾಡಿ, ಕೆಲವು ವರ್ಷಗಳ ಹಿಂದೆ ಪಟ್ಟಣದ ಮಳವಳ್ಳಿ ಹೆದ್ದಾರಿ ರಸ್ತೆ ಬಳಿ ಇದ್ದ ಕೆಲವು ಗುಡಿಸಿಲುಗಳನ್ನು ರಸ್ತೆ ವಿಸ್ತರೀಕರಣ ಕಾಮಗಾರಿ ವೇಳೆ ತೆರವುಗೊಳಿಸಲಾಗಿತ್ತು. ಆ ವೇಳೆ ಅಲ್ಲಿದ್ದ ನಿರಾಶ್ರಿತರಿಗೆ ನಿವೇಶನ ನೀಡುವ ಭರವಸೆಯನ್ನು ತಾಲೂಕು ಆಡಳಿತದಿಂದ ನೀಡಲಾಯಿತಾದರೂ ಕೊಟ್ಟಿರಲಿಲ್ಲ ಎಂದರು.
ಸ್ಥಳೀಯ ಪುರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾನು ಮತ ಕೇಳಲು ಹೋದಾಗ ಗುಡಿಸಲು ತೆರವುಗೊಳಿಸುವ ಅನಿವಾರ್ಯತೆಯಲ್ಲಿದ್ದ ಚೌಡಮ್ಮ ಎಂಬ ವೃದ್ಧೆ ತನ್ನ ಕುಟುಂಬದ ಆಶ್ರಯಕ್ಕೆ ನಿವೇಶನ ಸೇರಿದಂತೆ ಏನಾದರೂ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದರು.ಆ ಬಡ ಕುಟುಂಬಕ್ಕೆ ಕೈಲಾದ ಏನಾದರೂ ಸಹಾಯವನ್ನು ಮಾಡಲು ನಿರ್ಧರಿಸಿ ನನ್ನ ಪತಿ ಸಮಾಜ ಸೇವಕರಾದ ಅಪ್ಪುಪಿ.ಗೌಡರೊಂದಿಗೆ ಚರ್ಚಿಸಿ ಪಟ್ಟಣದ ಹೊರ ವಲಯದ ನಳಂದ ಶಾಲೆ ಬಳಿ ನಿವೇಶನವನ್ನು ಬಡ ಕುಟುಂಬಕ್ಕಾಗಿ ಖರೀದಿಸಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿ ಅವರಿಗೆ ನೀಡಿದ್ದೇವೆ ಎಂದರು.
ಸಮಾಜ ಸೇವಕ ಅಪ್ಪುಪಿ.ಗೌಡ ಮಾತನಾಡಿ, ಸಮಾಜದಲ್ಲಿ ನೊಂದವರಿಗೆ ಸಹಾಯ ಮಾಡಬೇಕು ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ನಿಟ್ಟಿನಲ್ಲಿ ನಾನು ಮತ್ತು ನನ್ನ ಇಡೀ ಕುಟುಂಬ ನಿರಂತರವಾಗಿ ಶ್ರಮಿಸುತ್ತಾ ಬರುತ್ತಿದ್ದೇವೆ. ಚೌಡಮ್ಮ ಕುಟುಂಬದವರು ನಿರಾಶ್ರಿತರಾದ ಕಾರಣ ಅವರ ಕುಟುಂಬಕ್ಕೆ ನಿವೇಶನವನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.ಈ ವೇಳೆ ವಿರಾಟ್ ಅಪ್ಪು ಗೌಡ, ಮಹದೇವು, ನಿವೇಶನ ಪಡೆದ ವೃದ್ಧೆಯ ಮಗ ಮಂಜು, ಸೊಸೆ ಪುಟ್ಟಲಿಂಗಮ್ಮ ಹಾಜರಿದ್ದರು.