ಆ.೩೦-೩೧ರಂದು ಜೆಡಿಎಸ್ ಸದಸ್ಯತ್ವ ನೋಂದಣಿ: ಸಿ.ಎಸ್.ಪುಟ್ಟರಾಜು

| Published : Aug 24 2025, 02:00 AM IST

ಆ.೩೦-೩೧ರಂದು ಜೆಡಿಎಸ್ ಸದಸ್ಯತ್ವ ನೋಂದಣಿ: ಸಿ.ಎಸ್.ಪುಟ್ಟರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಆ.೩೧ರಂದು ಎಚ್‌.ಡಿ.ದೇವೇಗೌಡರ ಒಡನಾಡಿಯಾಗಿ, ಜಿ.ಬಿ.ಶಿವಕುಮಾರ್ ಅವರ ಜೊತೆಗೂಡಿ ಕೆಲಸ ಮಾಡಿದ ಗೊರವಾಲೆಯ ಪಟೇಲ್ ಸಿದ್ದೇಗೌಡ ಅವರ ಅಗಲಿಕೆ ಹಿನ್ನೆಲೆಯಲ್ಲಿ ಅವರ ಪುತ್ಥಳಿ ಅನಾವಣ ಕಾರ್ಯಕ್ರಮದಲ್ಲಿಯೂ ನಿಖಿಲ್ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಆ.೩೦ ಮತ್ತು ೩೧ರಂದು ‘ಜನರೊಂದಿಗೆ ಜನತಾದಳ’ ಸದಸ್ಯತ್ವ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ನಗರದ ಬಂದೀಗೌಡ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರೊಂದಿಗೆ ಸೇರಿ ಪಾಂಡವಪುರದ ಟಿಎಪಿಸಿಎಂಎಸ್ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ದುದ್ದ ಹೋಬಳಿಯ ಮುಖಂಡ ಹಾಗೂ ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ನೇತೃತ್ವದಲ್ಲಿ ಇಂದು ಎಲ್ಲ ಮುಖಂಡರ ಸಭೆ ನಡೆಸಲಾಗಿದ್ದು, ‘ಜನರೊಂದಿಗೆ ಜನತಾದಳ’ ಅಭಿಯಾನ ಸಂಬಂಧ ವಿಮರ್ಶೆ ಮಾಡಿದ್ದೇವೆ ಎಂದು ಹೇಳಿದರು.

ಆ.೩೧ರಂದು ಎಚ್‌.ಡಿ.ದೇವೇಗೌಡರ ಒಡನಾಡಿಯಾಗಿ, ಜಿ.ಬಿ.ಶಿವಕುಮಾರ್ ಅವರ ಜೊತೆಗೂಡಿ ಕೆಲಸ ಮಾಡಿದ ಗೊರವಾಲೆಯ ಪಟೇಲ್ ಸಿದ್ದೇಗೌಡ ಅವರ ಅಗಲಿಕೆ ಹಿನ್ನೆಲೆಯಲ್ಲಿ ಅವರ ಪುತ್ಥಳಿ ಅನಾವಣ ಕಾರ್ಯಕ್ರಮದಲ್ಲಿಯೂ ನಿಖಿಲ್ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದರು.

ಆ.೨೫ರ ಸೋಮವಾರ ಬೆಳಿಗ್ಗೆ ೫ ಗಂಟೆಗೆ ಮಂಡ್ಯ ಮತ್ತು ಮೈಸೂರಿನಿಂದ ಮಂಜುನಾಥನ ಭಕ್ತರು ಧರ್ಮಸ್ಥಳ ತೆರಳಿ ಧರ್ಮದರ್ಶಿ ಡಾ.ವೀರೇಂದ್ರ ಹೆಗಡೆ ಅವರಿಗೆ ಧೈರ್ಯ ಹೇಳುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮೂರು ಕಾರ್ಯಕ್ರಮಗಳ ಸಂಬಂಧ ಕಾರ್ಯಕರ್ತರಿಗೆ ಮಾಹಿತಿ ನೀಡಿ ಯಶಸ್ವಿಗೊಳಿಸಲು ಕರೆ ನೀಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ನ ಅಭ್ಯರ್ಥಿಗಳೇ ಪ್ರತಿನಿಧಿಸಿದ್ದು, ಪಕ್ಷದ ರಾಷ್ಟ ಹಾಗೂ ರಾಜ್ಯ ಮಟ್ಟದ ನಾಯಕರು ಮೈತ್ರಿಯಾಗಿ ಮುಂದುವರೆಯುವುದೋ ಅಥವಾ ಪಕ್ಷವಾಗಿಯೇ ನಾಯಕತ್ವ ಮುಂದುವರೆಸುವುದೋ ನಿರ್ಧಾರ ಮಾಡಿ, ಸೂಚನೆ ನೀಡುತ್ತಾರೆ. ಅದನ್ನು ಪಾಲಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಧರ್ಮಸ್ಥಳದ ಬಗ್ಗೆ ದೈವಭಕ್ತಿ ಇದೆ. ಅನಾಮಿನಕ ಕಟ್ಟುಕಥೆಗೆ ಸರ್ಕಾರ ಪ್ರೋತ್ಸಾಹ ನೀಡಿತ್ತು, ಈಗ ಸರ್ಕಾರಕ್ಕೂ ಅರ್ಥವಾಗಿದೆ ಇದರ ಹಿಂದಿರುವ ವ್ಯಕ್ತಿಗಳ ಮುಖವಾಡ ಕಳಚುವಂತಹ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಮುಖಂಡರಾದ ಬಾಲರಾಜು, ಶಂಕರೇಗೌಡ, ಪದ್ಮಾವತಿ, ಶಿವಶಂಕರ್, ಶಿವಳ್ಳಿ ಸುರೇಶ್, ಮಾದೇಗೌಡ ಇತರರಿದ್ದರು.