ಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿರುವ ಜಿ.ಟಿ. ದೇವೇಗೌಡ ಅವರು ಪಕ್ಷದ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳಿಂದ ದೂರು ಉಳಿಯುವ ಮೂಲಕ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಈ ನಡುವೆ ಜಿ.ಟಿ. ದೇವೇಗೌಡ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡ ಅವರನ್ನು ಹುಟ್ಟಹಬ್ಬದ ಶುಭಾಶಯ ಕೋರುವ ನೆಪದಲ್ಲಿ ಭೇಟಿಯಾಗಿದ್ದಾರೆ. ಈ ಎಲ್ಲದರ ನಡುವೆ ಜಿ.ಟಿ. ದೇವೇಗೌಡರು ಪ್ರತಿನಿಧಿಸುತ್ತಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ (ಮೇ 17) ಜನರೊಂದಿಗೆ ಜನತಾ ದಳ ಕಾರ್ಯಕ್ರಮವನ್ನು ಆಯೋಜಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬೋಗಾದಿ ಹೊರ ವರ್ತುಲ ರಸ್ತೆಯ ಬಳಿಯ ನಾಗಲಿಂಗೇಶ್ವರ- ಬೋಗೇಶ್ವರ ದೇವಸ್ಥಾನದ ಎದುರಿನ ಖಾಲಿ ನಿವೇಶನದಲ್ಲಿ ಸಮಾವೇಶ ನಡೆಯಲಿದ್ದು, ಜೆಡಿಎಸ್ ನಾಯಕರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 40 ಸಾವಿರ ಜನ ಸೇರುವ ನಿರೀಕ್ಷೆಈ ವೇಳೆ ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಚಾಮರಾಜನಗರ, ಮೈಸೂರು, ಮಂಡ್ಯ, ಸುತ್ತಮುತ್ತಲ ಕ್ಷೇತ್ರದಿಂದ ಜನರು ಬರುತ್ತಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. 35 ರಿಂದ 40 ಸಾವಿರ ಜನರು ಸೇರುವ ಸಾಧ್ಯತೆಯಿದೆ ಎಂದು ತಿಳಿಸಿದರು.ಈ ಕಾರ್ಯಕ್ರಮದಿಂದ ರಾಜ್ಯಕ್ಕೆ ಒಂದು ಮೆಸೇಜ್ ಹೋಗುತ್ತದೆ. ಜೆಡಿಎಸ್ ಪಕ್ಷ ಎಲ್ಲಿದೆ ಎಂದು ಕೇಳುತ್ತಿದ್ದವರಿಗೆ ಉತ್ತರ ಸಿಗಲಿದೆ ಎಂದು ಅವರು ಹೇಳಿದರು.ಮಾಜಿ ಸಚಿವ ಸಾ.ರಾ. ಮಹೇಶ್ ಮಾತನಾಡಿ, 2006 ರಿಂದ ಇಲ್ಲಿಯವರೆಗೆ ಎಚ್.ಡಿ. ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದುಡಿದಿದ್ದಾರೆ. ಮೈಸೂರು ಜಿಲ್ಲೆಯ ಜೆಡಿಎಸ್ ಕಾರ್ಯಕ್ರಮವನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಡಬೇಕು, ಖುದ್ದು ಕುಮಾರಸ್ವಾಮಿ ಅವರು ಈ ಕಾರ್ಯಕ್ರಮಕ್ಕೆ ಬರಬೇಕು ಎಂದು ಕೇಳಿದ್ದರಿಂದ ಕುಮಾರಸ್ವಾಮಿ ಬರುತ್ತಿದ್ದಾರೆ. ಈ ಕಾರ್ಯಕ್ರಮ ಯಶಸ್ವಿ ಮಾಡಲು ಎಲ್ಲರೂ ಪಣ ತೊಟ್ಟಿದ್ದಾರೆ ಎಂದರು.ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಸದೃಢವಾಗಬೇಕು. 35 ರಿಂದ 40 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಸೇರುತ್ತಾರೆ. ಸೋಮವಾರ ಎಚ್.ಡಿ. ದೇವೇಗೌಡರ ಹುಟ್ಟುಹಬ್ಬವಿದೆ. ಈ ಮೂಲಕ ಚಾಮುಂಡೇಶ್ವರಿ ಕ್ಷೇತ್ರ ಸುಭದ್ರವಾಗಿದೆ, ಮೈಸೂರಿನಲ್ಲಿ ಜೆಡಿಎಸ್ ಸುಭದ್ರವಾಗಿದೆ ಎಂಬ ಸಂದೇಶ ಕೊಡಬೇಕಿದೆ ಎಂದು ಅವರು ತಿಳಿಸಿದರು. ಜಿಟಿಡಿ ವಿರುದ್ಧ ಅಸಮಾಧಾನನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ದೇವೇಗೌಡರು, ರಾಜ್ಯ ನಾಯಕರು ಕುಮಾರಸ್ವಾಮಿ. ಮೈಸೂರು ಜಿಲ್ಲೆಗೆ ಜಿ.ಟಿ. ದೇವೇಗೌಡರು ಏಕೈಕ ನಾಯಕರು ಅಂತ ಎಲ್ಲರೂ ಹೇಳುತ್ತಿದ್ದರು. ಆದರೆ, ಬೈ ಎಲೆಕ್ಷನ್ ನಲ್ಲಿ ಒಂದು ರೀತಿ. ವಿಧಾನಸಭೆಯಲ್ಲಿ ಒಂದು ರೀತಿ. ಮಹಾನಗರ ಪಾಲಿಕೆಯಲ್ಲಿ ಒಂದು ತೀರ್ಮಾನ, ಡಿಸಿಸಿ ಬ್ಯಾಂಕ್ ನಲ್ಲಿ ಒಂದು ತೀರ್ಮಾನ, ಸಹಕಾರ ಯೂನಿಯನ್ ನಲ್ಲಿ ಒಂದು ತೀರ್ಮಾನ ಮಾಡಿದ ಜಿ.ಟಿ. ದೇವೇಗೌಡರ ನಡೆಯೇ ಎಲ್ಲರಿಗೂ ಬೇಸರ ತರಿಸಿದೆ. ಇದು ಪಕ್ಷದ ಮುಖಂಡರಿಗೆ ಕಾರ್ಯಕರ್ತರಿಗೆ ನೋವನ್ನು ಉಂಟು ಮಾಡಿದೆ ಎಂದರು.ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಶಾಸಕ ಕೆ. ಮಹದೇವು, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮಾಜಿ ಶಾಸಕ ಎಂ. ಅಶ್ವಿನ್ ಕುಮಾರ್, ನಗರಾಧ್ಯಕ್ಷ ಎಸ್.ಬಿ.ಎಂ. ಮಂಜು, ಮುಖಂಡರಾದ ಕೃಷ್ಣ ನಾಯಕ್, ಅಭಿಷೇಕ್ ಮಣೆಗಾರ್ ಮೊದಲಾದವರು ಇದ್ದರು.
ಇಂದು ಜನರೊಂದಿಗೆ ಜನತಾ ದಳ
ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಚಾಮರಾಜನಗರ, ಮೈಸೂರು, ಮಂಡ್ಯ, ಸುತ್ತಮುತ್ತಲ ಕ್ಷೇತ್ರದಿಂದ ಜನರು ಬರುತ್ತಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.