ಪ್ರಜ್ವಲ್‌ ಅಮಾನತಿಗೆ ಜೆಡಿಎಸ್‌ ಶಾಸಕ ಕಂದಕೂರ ಆಗ್ರಹ

| Published : Apr 30 2024, 02:03 AM IST

ಸಾರಾಂಶ

ಮಾಜಿ ಪ್ರಧಾನಿ ದೇವೇಗೌಡರಿಗೆ ಪತ್ರ ಬರೆದ ಗುರುಮಠಕಲ್ ಶಾಸಕ

ಕನ್ನಡಪ್ರಭ ವಾರ್ತೆ ಯಾದಗಿರಿ

ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್‌ ರೇವಣ್ಣ ಅವರು ಮೇಲ್ನೋಟಕ್ಕೆ ತಪ್ಪಿತಸ್ಥರಂತೆ ಕಂಡುಬಂದಿದ್ದು, ತೆನೆ ಹೊತ್ತ ಮಹಿಳೆಯ ಚಿನ್ಹೆ ಹೊಂದಿದ ಜೆಡಿಎಸ್‌ ಪಕ್ಷಕ್ಕೆ ಇದು ತೀವ್ರ ಮಜುಗರ ಮೂಡಿಸಿದೆ. ಕೂಡಲೇ ಪ್ರಜ್ವಲ್‌ರನ್ನು ಪಕ್ಷದಿಂದ ಅಮಾನತು ಮಾಡಬೇಕೆಂದು ಗುರುಮಠಕಲ್‌ ಶಾಸಕ ಜೆಡಿಎಸ್‌ನ ಶರಣಗೌಡ ಕಂದಕೂರ ಮಾಜಿ ಪ್ರಧಾನಿ, ಪಕ್ಷದ ವರಿಷ್ಠ ಎಚ್‌. ಡಿ. ದೇವೇಗೌಡರಿಗೆ ಪತ್ರ ಬರೆದಿದ್ದಾರೆ.

ಮಹಿಳೆಯರ ಮೇಲೆ ಇಂತಹ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಾಗ, ತಪ್ಪಿತಸ್ಥರು ಯಾರೇ ಇರಲಿ ಅದನ್ನು ಖಂಡಿಸಬೇಕು ಹಾಗೂ ಕ್ರಮಕ್ಕೆ ಆಗ್ರಹಿಸಿ, ನೊಂದ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಎಂದಿರುವ ಶಾಸಕ ಶರಣಗೌಡ ಕಂದಕೂರ, ತಮಗೆ (ದೇವೇಗೌಡರು) ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಆದರೆ, ಅಂತಹ ಪರಿಸ್ಥಿತಿ ಬಂದೊದಗಿದೆ. ಅಂತರಾಳದ ಅಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ವ್ಯಕ್ತಪಡಿಸುತ್ತಿರುವುದಾಗಿ ಕಂದಕೂರು ಪತ್ರದಲ್ಲಿ ತಿಳಿಸಿದ್ದಾರೆ.

ಶಾಸಕ ಕಂದಕೂರ ಪತ್ರದಲ್ಲೇನಿದೆ?:

ರಾಜ್ಯಾದ್ಯಂತ ಹರಿದಾಡುತ್ತಿರುವ ಅಶ್ಲೀಲ ವೀಡಿಯೋ ತುಣುಕುಗಳಿಂದ ಪಕ್ಷಕ್ಕೆ ತೀರಾ ಮಜುಗರ ಉಂಟಾಗಿದೆ. ಸದರಿ ವೀಡಿಯೋ ದೃಶ್ಯಗಳಲ್ಲಿ ಪ್ರಜ್ವಲ್‌ ರೇವಣ್ಣ ಅವರು ಕಾಣಿಸಿಕೊಂಡಿದ್ದಾರೆ. ಸದ್ಯ, ಮೇಲ್ನೋಟಕ್ಕೆ ಅವರು ತಪ್ಪಿತಸ್ಥರಂತೆ ಕಾಣುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರನ್ನು ಪಕ್ಷದಿಂದ ಅಮಾನತು ಮಾಡಬೇಕು.

ಆರು ದಶಕಗಳಿಗೂ ಮಿಕ್ಕಿ ನಡೆಸಿಕೊಂಡು ಬರುತ್ತಿರುವ ತಮ್ಮ ರಾಜಕೀಯ ಜೀವನ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ತತ್ವ ಸಿದ್ಧಾಂತಗಳ ಬುನಾದಿಯ ಮೇಲೆ ಪಕ್ಷವನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದ್ದೀರಿ, ರಾಷ್ಟ್ರದ ಪ್ರಧಾನಿಯಾದ ಮೊದಲ ಕನ್ನಡಿಗ ಎಂಬ ಅಭಿದಾನ ತಮ್ಮದಾಗಿದೆ. ಮಣ್ಣಿನ ಮಗನಾಗಿ, ರೈತ ಜನಾಂಗದ ಏಳಿಗೆಗಾಗಿ ಸದಾ ಮಿಡಿಯುವ ನೇತಾರರು ತಾವಾಗಿದ್ದೀರಿ, ಅದರಲ್ಲೂ "ಹೆಣ್ಣು ಸಾಕ್ಷಾತ್‌ ಕಪಿಲಸಿದ್ಧ ಮಲ್ಲಿಕಾರ್ಜುನ " ಎಂಬ ಶರಣರ ವಾಣಿಯಂತೆ ಹೆಣ್ಣು ಮಕ್ಕಳನ್ನು ಗೌರವಾದರಗಳಿಂದ ನೋಡಿಕೊಂಡು ಬಂದಿದ್ದೀರಿ. ಕುಮಾರಣ್ಣ ಅವರು, ಮುಖ್ಯಮಂತ್ರಿಯಾಗಿ ಲಾಟರಿ ನಿಷೇಧ ಮಾಡಿ ಕನ್ನಡ ನಾಡಿನ ಹೆಣ್ಣು ಮಕ್ಕಳ ಪುಣ್ಯಕ್ಕೆ ಪಾತ್ರರಾಗಿದ್ದು, ಸೈಕಲ್‌ ಭಾಗ್ಯವನ್ನು ಕರುಣಿಸಿ, ಹೆಣ್ಣುಮಕ್ಕಳ ಕಷ್ಟಕ್ಕೆ ಸ್ಪಂದಿಸಿದ್ದಾರೆ.

ಜಾತ್ಯತೀತ ನೆಲೆಗಟ್ಟಿನ ಮೇಲೆ ಪಕ್ಷವನ್ನು ಕಟ್ಟಿದ್ದು, ಪಕ್ಷದ ಚಿನ್ಹೆ ಭತ್ತದ ತೆನೆ ಹೊತ್ತ ಮಹಿಳೆಯಾಗಿದೆ. ನಿಮಗೆ ಮಹಿಳೆಯರ ಮೇಲಿನ ಗೌರವವನ್ನು ಇದು ಪ್ರತಿನಿಧಿಸುತ್ತದೆ ಎಂದು ಎಲ್ಲರೂ ಭಾವಿಸಿದ್ದಾರೆ. ನಮ್ಮದು ಪ್ರಾದೇಶಿಕ ಪಕ್ಷ, ತಾವು ರಾಷ್ಟ್ರ ಕಂಡ ಮಹಾ ಮುತ್ಸದ್ದಿ. ಅಂತೆಯೇ, ಬಿಜೆಪಿ ರಾಷ್ಟ್ರೀಯ ಪಕ್ಷದವರು ನಮ್ಮೊಡನೆ ಮೈತ್ರಿ ಮಾಡಿಕೊಂಡಿರುವುದು ನಿಮ್ಮ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಈ ಎಲ್ಲ ಹಿನ್ನೆಲೆ, ಪರಂಪರೆ ಹೊಂದಿರುವ ಪಕ್ಷಕ್ಕೆ ವೀಡಿಯೋ ಪ್ರಕರಣ ತೀವ್ರ ಮಜುಗರ ತಂದಿರುವುದಂತೂ ಸುಳ್ಳಲ್ಲ. ಈಗಾಗಲೇ ಸರ್ಕಾರ ಇದನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಿದೆ. ದಯವಿಟ್ಟು ತಾವು ಪಕ್ಷದ ಆಂತರಿಕ ಸಮಿತಿಯನ್ನು ರಚಿಸಿ, ಸಮಿತಿಯು ವೀಡಿಯೋ ಪ್ರಕರಣದ ಸತ್ಯಾಸತ್ಯತೆಯನ್ನು ನಾಡಿನ ತಾಯಂದಿರರಿಗೆ ಗೊತ್ತು ಮಾಡವಂತಾಗಲಿ, ಅಲ್ಲಿವರೆಗೆ ಪಕ್ಷಕ್ಕೆ ಮುಜುಗರ ತಪ್ಪಿಸಲು ಮತ್ತು ಎರಡನೇ ಹಂತದ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಿರಲು ಕೂಡಲೇ ಸಂಸದರಾದ ಪ್ರಜ್ವಲ್‌ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಬೇಕು.ಇದು ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ಅವರು ಪಕ್ಷದ ವರಿಷ್ಠ ದೇವೇಗೌಡರಿಗೆ ಬರದೆ ಪತ್ರದ ಪೂರ್ಣಪಾಠವಾಗಿದೆ. ಇದರ ಪ್ರತಿಯನ್ನು ಮಾಜಿ ಸಿಎಂ ಎಚ್ಡಿಕೆ ಹಾಗೂ ರಾಜ್ಯ ಕೋರ್ ಕಮೀಟಿ ಅಧ್ಯಕ್ಷ ಜಿ. ಟಿ. ದೇವೇಗೌಡರಿಗೆ ಕಳುಹಿಸಿದ್ದಾರೆ.