ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೃಷ್ಣರಾಜಸಾಗರ ಜಲಾಶಯದಿಂದ ಬೆಂಗಳೂರಿಗೆ ಆರನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿಯಾದರೆ ಜಿಲ್ಲೆಯ ಕೊನೆಯ ಭಾಗದ ರೈತರಿಗೆ ಕಾಂಗ್ರೆಸ್ ಸರ್ಕಾರ ಬರೆಯುವ ಮರಣಶಾಸನವಾಗಲಿದೆ ಎಂದು ಜೆಡಿಎಸ್ ಮಾಜಿ ಶಾಸಕರಾದ ಡಿ.ಸಿ.ತಮ್ಮಣ್ಣ ಮತ್ತು ಡಾ.ಕೆ.ಅನ್ನದಾನಿ ಆತಂಕ ವ್ಯಕ್ತಪಡಿಸಿದರು.ಬೆಂಗಳೂರು ಜನರ ಕುಡಿಯುವ ನೀರಿಗೆ ಕೆಆರ್‌ಎಸ್ ನೀರಿನ ಮೇಲೆ ಅವಲಂಬಿತರಾಗುವುದು ಸರಿಯಲ್ಲ. ಎತ್ತಿನಹೊಳೆ ಯೋಜನೆ ಶುರುವಾಗಿರುವುದರಿಂದ ಅಲ್ಲಿಂದಲೇ ಕುಡಿವ ನೀರನ್ನು ಪೂರೈಸುವಂತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಐದನೇ ಹಂತದ ಕುಡಿಯವ ನೀರಿಗೆ ಪ್ರತಿ ತಿಂಗಳು ೧.೫೦ ಟಿಎಂಸಿ ಅಡಿಯಷ್ಟು ನೀರು ಬೆಂಗಳೂರು ಸೇರುತ್ತಿದೆ. ಆರನೇ ಹಂತದ ಯೋಜನೆ ಜಾರಿಯಾದರೆ ಸರಾಸರಿ ಪ್ರತಿ ತಿಂಗಳಿಗೆ ೨.೫೦ ಟಿಎಂಸಿ ಅಡಿಯಿಂದ ೩ ಟಿಎಂಸಿ ಅಡಿ ನೀರು ಬೆಂಗಳೂರು ಜನರ ಕುಡಿವ ನೀರಿಗೆ ಬಳಕೆಯಾಗಲಿದೆ. ಇದರಿಂದ ಕೃಷಿ ಚಟುವಟಿಕೆಗೆ ಮೀಸಲಿಟ್ಟಿರುವ ನೀರಿಗೆ ಕೊರತೆ ಎದುರಾಗಲಿದೆ. ಈಗಲೇ ಮದ್ದೂರು, ಮಳವಳ್ಳಿ ತಾಲೂಕಿನ ಕೊನೆಯ ಭಾಗಕ್ಕೆ ನೀರು ಸಿಗುತ್ತಿಲ್ಲ. ಈ ಯೋಜನೆಯಿಂದ ಕೊನೆಯ ಭಾಗಕ್ಕೆ ಸಂಪೂರ್ಣವಾಗಿ ನೀರು ಸಿಗದಿರುವ ಆತಂಕ ಸೃಷ್ಟಿಯಾಗಲಿದೆ ಎಂದರು.ಕೆಆರ್‌ಎಸ್‌ನಲ್ಲಿ ಒಂದೂವರೆ ತಿಂಗಳ ಕಾಲ ೧೨೪ ಅಡಿ ನೀರು ಸಂಗ್ರಹವಾಗಿದ್ದರೂ ಎರಡನೇ ಬೆಳೆಗೆ ಕಟ್ಟು ನೀರಿನ ಪದ್ಧತಿಯಲ್ಲೇ ನೀರನ್ನು ಹರಿಸಲಾಗುತ್ತಿದೆ. ನಿರಂತರವಾಗಿ ನೀರು ಹರಿಸುವಂತೆ ರೈತರು ಪ್ರತಿಭಟನೆ ನಡೆಸುವಂತಾಗಿದೆ. ಈಗ ಬೆಂಗಳೂರಿಗೆ ಆರನೇ ಹಂತದ ಯೋಜನೆ ಜಾರಿಯಾದಲ್ಲಿ ಜಿಲ್ಲೆಯ ಜನರು ಹುರುಳಿ, ಜೋಳ. ನವಣೆ, ಆರಕ ಬೆಳೆಯಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಸಿದರು.
ಈಗ ಜಿಲ್ಲೆಯಲ್ಲಿ ತೆಂಗು, ರೇಷ್ಮೆ ಮತ್ತು ಹಾಲು ರೈತರ ಬದುಕಿನ ಆಧಾರವಾಗಿದೆ. ಭತ್ತ, ಕಬ್ಬು ಬೆಳೆಯಿಂದ ರೈತರಿಗೆ ಆದಾಯವಿಲ್ಲ. ಹಾಗಾಗಿ ಕೊನೆಯ ಭಾಗದ ರೈತರು ಭಿಕ್ಷೆ ಬೇಡಿ ಬದುಕಬೇಕಾದ ಸ್ಥಿತಿ ಎದುರಾಗುವ ಸಾಧ್ಯತೆಗಳಿವೆ. ರಾಜ್ಯ ಸರ್ಕಾರ ಈ ಕೂಡಲೇ ಯೋಜನೆ ಕೈಬಿಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಜಿಲ್ಲೆಯ ಮತ್ತು ಕೊನೆಯ ಭಾಗದ ರೈತರು ಬೆಂಗಳೂರಿನ ಕುಡಿಯುವ ನೀರಿನ ಉದ್ದೇಶಕ್ಕೆ ರೂಪಿಸಿರುವ ಆರನೇ ಹಂತದ ಕುಡಿಯುವ ನೀರಿನ ಯೋಜನೆ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳಬೇಕು. ಈಗ ನಿದ್ರೆ ಮಾಡಿದರೆ ಮುಂದೆ ಎದುರಾಗುವ ಅನಾಹುತಗಳು ಭೀಕರವಾಗಿರುತ್ತವೆ. ಈಗಲೇ ಯೋಜನೆಯನ್ನು ಎಲ್ಲರೂ ಒಗ್ಗಟ್ಟಿನಿಂದ ಎದುರಿಸುವಂತೆ ಸಲಹೆ ನೀಡಿದರು.
ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಹಿಂದೆ ಬೆಂಗಳೂರಿಗೆ ನೀರು ಒದಗಿಸುತ್ತಿದ್ದ ಹೆಸರಘಟ್ಟ ಮತ್ತು ತಿಪ್ಪಗೊಂಡನಹಳ್ಳಿ ಕೆರೆಗಳು ಈಗ ಬತ್ತಿಹೋಗಿವೆ. ಬೇರೆ ಬೇರೆ ಮೂಲಗಳಿಂದ ಬೆಂಗಳೂರಿಗೆ ನೀರು ಕೊಡಿ. ಕೃಷಿಗೆ ಮೀಸಲಿಟ್ಟ ನೀರನ್ನು ಕಸಿದುಕೊಂಡರೆ ರೈತರ ಬದುಕು ಏನಾಗಬೇಕು. ಇರುವ ನೀರನ್ನೆಲ್ಲಾ ಬೆಂಗಳೂರಿಗೆ ಕೊಡುವುದಾದರೆ ಇಲ್ಲಿನ ಜನರ ಕತೆ ಏನಾಗಬೇಕು. ಮಂಡ್ಯ ಜಿಲ್ಲೆಯ ಜನರು ಕಾಂಗ್ರೆಸ್‌ಗೆ ೬ ಸ್ಥಾನಗಳನ್ನು ದೊರಕಿಸಿಕೊಟ್ಟಿದ್ದಾರೆ. ಬೆಂಗಳೂರು ಜನರ ಹಿತದೃಷ್ಟಿ ಜೊತೆಗೆ ಜಿಲ್ಲೆಯ ರೈತರ ಬದುಕನ್ನೂ ರಕ್ಷಣೆ ಮಾಡುವುದು ಸರ್ಕಾರದ ಹೊಣೆಯಾಗಿದೆ ಎಂದರು.ನಮ್ಮ ನೀರು-ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿದರು. ೧೦೦೦ ಕೋಟಿ ರು. ಹಣವನ್ನೂ ಮೀಸಲಿಟ್ಟರು. ಇದುವರೆಗೂ ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ತರಲಾಗಲಿಲ್ಲ. ಆ ಯೋಜನೆಯನ್ನು ಜಾರಿಗೊಳಿಸಿ ಬೆಂಗಳೂರಿಗೆ ನೀರನ್ನು ತೆಗೆದುಕೊಂಡು ಹೋಗುವಂತೆ ಸಲಹೆ ನೀಡಿದರು.
ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಇದ್ದರು.