ಸಾರಾಂಶ
ಹಾವೇರಿ: ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವುದಕ್ಕಾಗಿ ಸಂವಿಧಾನ ಬದಲಾವಣೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೀಡಿದ ಹೇಳಿಕೆ ಖಂಡಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ನೇತೃತ್ವದಲ್ಲಿ ಜೆಡಿಎಸ್ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ಕೇವಲ ಮುಸ್ಲಿಮರ ಓಲೈಕೆಗಾಗಿ ಕಾಂಗ್ರೆಸ್ ಸರ್ಕಾರ ಗುತ್ತಿಗೆಯಲ್ಲಿ ಶೇ. 4ರಷ್ಟು ಮೀಸಲಾತಿ ನೀಡಿದೆ. ಇದು ಸಂವಿಧಾನ ಬಾಹಿರವಾಗಿದ್ದು, ಇದರ ಅರಿವಿದ್ದರೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ತಮ್ಮ ಅನುಕೂಲತೆಗಾಗಿ ಸಂವಿಧಾನವನ್ನೇ ತಿದ್ದುಪಡಿ ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಇದು ಅವರ ಕೆಳಮಟ್ಟದ ಬುದ್ಧಿಯನ್ನು, ಕಾಂಗ್ರೆಸ್‌ನ ಮನಸ್ಥಿತಿಯನ್ನು ತೋರಿಸುತ್ತದೆ. ಕೂಡಲೇ ಸರ್ಕಾರ ಇದನ್ನೆಲ್ಲ ಕೈಬಿಟ್ಟು ನೈಜ, ಜನಪರ ಆಡಳಿತ ನೀಡುವಂತೆ ಒತ್ತಾಯಿಸಿದರು. ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಸಿದ್ದಣ್ಣ ಗುಡಿಮುಂದ್ಲರ ಮಾತನಾಡಿ, ನೂರಾರು ಪುಸ್ತಕಗಳನ್ನು ಓದಿ ಈ ದೇಶದ ಎಲ್ಲ ಸಮಾಜದ ಒಳಿತಿಗಾಗಿ ಡಾ. ಅಂಬೇಡ್ಕರ್ ಸಂವಿಧಾನವನ್ನು ಬರೆದಿದ್ದಾರೆ. ಆದರೆ ಒಂದೆರಡು ಪುಸ್ತಕ ಓದಿಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅದರ ಬದಲಾವಣೆಗೆ ಮುಂದಾಗಿರುವುದು ಸರಿಯಲ್ಲ. ಇದರ ವಿರುದ್ಧ ದೇಶಾದ್ಯಂತ ಜನರು ದಂಗೆ ಏಳಬೇಕಾಗುತ್ತದೆ. ಅಂಥ ಕಾರ್ಯಕ್ಕೆ ಡಿ.ಕೆ. ಶಿವಕುಮಾರ ಕಾರಣರಾಗಬಾರದು. ಇಂಥ ಬೇಜವಾಬ್ದಾರಿ ಹೇಳಿಕೆ ನೀಡಿರುವ ಡಿ.ಕೆ. ಶಿವಕುಮಾರ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಎಸ್ಸಿ ವಿಭಾಗದ ತಾಲೂಕಾಧ್ಯಕ್ಷ ಹನುಮಂತಪ್ಪ ಭಿಷ್ಟಣ್ಣನವರ, ಮುಖಂಡರಾದ ನಿಂಗಪ್ಪ ಸಣ್ಣಕೊಟ್ರಪ್ಪನವರ, ರವೀಂದ್ರನಾಥ ಶಿವಪ್ಪನವರ, ಮೈಲಾರೆಪ್ಪ ಹರಿಜನ, ಮಲ್ಲೇಶಪ್ಪ ಬುಡ್ಡಣ್ಣನವರ, ಮೂಕಪ್ಪ ಪಡಿಯಪ್ಪನವರ, ಎಸ್.ಎಲ್. ಕಾಡದೇವರಮಠ, ರಾಮನಗೌಡ ಪಾಟೀಲ, ರವೀಂದ್ರ, ರಮೇಶ ಮಾಕನೂರ, ಮಾಲತೇಶ ಬಡಿಗೇರ, ಬಸವರಾಜ ಲಘುಬಿಗಿ, ಶಿವಾನಂದ ಹಿರೇಬಿದರಿ, ನಾಗರಾಜ ಕ್ಯಾವಿಕೇರಿ, ಮುತ್ತಪ್ಪ ಸೇರಿದಂತೆ ಇತರರು ಇದ್ದರು.
ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲದುಹಾವೇರಿ: ಆಧುನಿಕ ಜೀವನದ ಒತ್ತಡದಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಈ ಬಗ್ಗೆ ಹಳ್ಳಿಗಳಲ್ಲಿ ಜನರನ್ನು ಸೇರಿಸಿ ಉಚಿತ ಆರೋಗ್ಯ ಕ್ಯಾಂಪ್ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯ ಎಂದು ವೀರಾಪೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ. ಬಸವರಾಜ ವೀರಾಪೂರ ತಿಳಿಸಿದರು.ನಗರದ ಪುರದ ಓಣಿಯ ಬಸವಣ್ಣನ ದೇವಸ್ಥಾನದಲ್ಲಿ ವೀರಾಪೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ನಡೆದ ಉಚಿತ ಕಣ್ಣಿನ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಂತರ್ಜಲ ಹೆಚ್ಚಿಸಲು ಕೆರೆಗಳ ಹೂಳೆತ್ತುವಿಕೆ, ಧಾರ್ಮಿಕ ಶ್ರದ್ಧಾಕೇಂದ್ರಗಳ ಸ್ವಚ್ಛತೆ ಮಾಡಿಸುವ ಜತೆಗೆ ಜೀರ್ಣೋದ್ಧಾರ ಮಾಡಿಸುವುದು, ತಮ್ಮ ಪಾಲುದಾರ ಕುಟುಂಬದ ಮಕ್ಕಳ ವೃತ್ತಿಪರ ಶಿಕ್ಷಣಕ್ಕೆ ವಿದ್ಯಾರ್ಥಿವೇತನ ಒದಗಿಸುವುದು ಅಶಕ್ತರಿಗೆ ಹಾಗೂ ನಿರ್ಗತಿಕರಿಗೆ ಮಾಸಾಶನ ನೀಡುವ ಜತೆಗೆ ಮನೆ ರಚನೆ ಮಾಡುವುದು, ಶುದ್ಧ ಕುಡಿಯುವ ನೀರು ಒದಗಿಸುವ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ನಾರಾಯಣ ಗೊಂಡ, ವೀರಾಪೂರ ಆಸ್ಪತ್ರೆಯ ನೇತ್ರತಜ್ಞ ಡಾ. ವಿಜಯ, ಜಿಲ್ಲಾ ವಿಮಾ ಸಮನ್ವಯಾಧಿಕಾರಿ ಕೃಷ್ಣಮೂರ್ತಿ ಎನ್., ಹೆಲ್ತ್ ಇಂಡಿಯಾ ಟಿಪಿಎ ವಿಭಾಗದ ಸಮನ್ವಯಾಧಿಕಾರಿ ಶ್ರವಣಕುಮಾರ ಹಾಗೂ ಆಸ್ಪತ್ರೆಯ ಸಿಬ್ಬಂದಿ ಇದ್ದರು. ವಲಯದ ಮೇಲ್ವಿಚಾರಕರಾದ ಜಯಶ್ರೀ ಸ್ವಾಗತಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ವೀಣಾ ವಂದಿಸಿದರು.