ಎಡಿಜಿಪಿ ಚಂದ್ರಶೇಖರ್, ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ

| Published : Oct 05 2024, 01:33 AM IST

ಎಡಿಜಿಪಿ ಚಂದ್ರಶೇಖರ್, ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಸರ್ಕಾರ ಕೆಲವು ಪೊಲೀಸ್ ಅಧಿಕಾರಿಗಳ ಮೂಲಕ ನಮ್ಮ ನಾಯಕರ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಹಾಕುವ ಕೆಲಸವನ್ನು ಮಾಡುತ್ತಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಅವಾಚ್ಯ ಪದಬಳಕೆ ಮಾಡಿರುವ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಹಾಗೂ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮೈಸೂರಿನ ಗಾಂಧಿ ಚೌಕದಲ್ಲಿ ಶುಕ್ರವಾರ ಪ್ರತಿಭಟಿಸಿದರು.

ಈ ವೇಳೆ ಮಾಜಿ ಸಚಿವ ಸಾ.ರಾ. ಮಹೇಶ್ ಮಾತನಾಡಿ, ಈ ಸರ್ಕಾರ ಕೆಲವು ಪೊಲೀಸ್ ಅಧಿಕಾರಿಗಳ ಮೂಲಕ ನಮ್ಮ ನಾಯಕರ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಹಾಕುವ ಕೆಲಸವನ್ನು ಮಾಡುತ್ತಿದೆ. ಸರ್ಕಾರಿ ನೌಕರ ತನ್ನ ಕೈ ಕೆಳಗಿನ ಅಧಿಕಾರಿಗಳಿಗೆ ದೇಶದ ಸಚಿವರ ವಿರುದ್ಧ ಪತ್ರ ಬರೆದಿದ್ದಾರೆ. ರಜಾ ದಿನಗಳಲ್ಲಿ ಪತ್ರವನ್ನು ಬರೆದಿದ್ದಾರೆ. ಡಿಜಿ ಮತ್ತು ಐಜಿ ಏನು ಮಾಡ್ತಾ ಇದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

ಎಡಿಜಿಪಿ ಚಂದ್ರಶೇಖರ್ ಭ್ರಷ್ಟ. ನೀವು ಪ್ರಾಮಾಣಿಕ ಅಧಿಕಾರಿಯಾಗಿದ್ದರೆ ರಾಜ್ಯದಲ್ಲಿ 11 ವರ್ಷಗಳಿಂದ ಏಕೆ ಇದ್ದೀರಾ?ನಿಷ್ಠಾವಂತ ಅಧಿಕಾರಿಗಳ ಸಂಖ್ಯೆ ಕಡಿಮೆ ಆಗ್ತಾ ಇದೆ. ಅಧಿಕಾರಿಗಳು ರಾಜಕಾರಣಿಗಳ ಮನೆ ಬಾಗಿಲು ಕಾಯ್ತಾ ಇದ್ದಾರೆ ಎಂದು ಅವರು ಆರೋಪಿಸಿದರು.

ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಶಾಸಕ ಎಂ. ಅಶ್ವಿನ್ ಕುಮಾರ್, ಮಾಜಿ ಮೇಯರ್ ಗಳಾದ ಎಂ.ಜೆ. ರವಿಕುಮಾರ್, ಆರ್. ಲಿಂಗಪ್ಪ, ಭಾಗ್ಯವತಿ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ. ಚಲುವೇಗೌಡ, ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರೇಮಾ ಶಂಕರೇಗೌಡ, ಎಸ್.ಬಿ.ಎಂ. ಮಂಜು, ಅಶ್ವಿನಿ ಅನಂತು, ಮುಖಂಡರಾದ ರಾಮು, ಮಂಜುನಾಥ್, ಪ್ರಶಾಂತ್, ಪ್ರಕಾಶ್ ಮೊದಲಾದವರು ಇದ್ದರು.

ಜೆಡಿಎಸ್ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಶಾಸಕ ಜಿ.ಟಿ. ದೇವೇಗೌಡ ಅವರು ಗೈರಾಗಿದ್ದರು. ಈ ಕುರಿತು ಮಾಜಿ ಸಚಿವ ಸಾ.ರಾ. ಮಹೇಶ್ ಮಾತನಾಡಿ, ಜಿ.ಟಿ. ದೇವೇಗೌಡರು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರು. ರಾಜ್ಯ ಸುತ್ತಾಡಿ ಪಕ್ಷ ಕಟ್ಟುವ ಜವಾಬ್ದಾರಿ ಇದೆ. ಹೀಗಾಗಿ ಬಂದಿಲ್ಲ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.