ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್
ಜೆಡಿಎಸ್- ಬಿಜೆಪಿ ಮೈತ್ರಿಯು ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ನಗರಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೂ ಮುಂದುವರಿಯುತ್ತದೆ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಖಚಿತಪಡಿಸಿದ್ದು, ಈ ಹಿನ್ನೆಲೆ ಕಾರ್ಯಕರ್ತರು ಕೆಜಿಎಫ್ ತಾಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದು ತಾಲೂಕು ಅಧ್ಯಕ್ಷ ಪಿ.ದಯಾನಂದ್ ತಿಳಿಸಿದರು.ನಗರದ ತಾಲೂಕು ಅಧ್ಯಕ್ಷರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಜೆಡಿಎಸ್ ಕಾರ‍್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದರು.
ಸಂಸದ ಮಲ್ಲೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸಂಘಟಿಸಿ, ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷಕ್ಕೆ ಶಕ್ತಿ ತುಂಬಬೇಕಾಗಿದೆ, ನಗರದಲ್ಲಿರುವ ಸಮಸ್ಯೆಗಳ ಕುರಿತು ಸಂಸದರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಲು ಪಕ್ಷದ ಕಾರ‍್ಯಕರ್ತರು ಮುಂದಾಗಬೇಕಿದೆ ಎಂದರು.ನಗರಸಭೆ ಲಂಚಾವತಾರ:ನಗರಸಭೆಯಲ್ಲಿ ಯಾವುದೇ ಕೆಲಸ ಆಗಬೇಕಾದರೆ ಹಣ ಕೊಡಬೇಕು, ಸರ್ಕಾರದ ಸೌಲತ್ತುಗಳು ಕಾನೂನು ಬದ್ಧವಾಗಿ ವಿತರಣೆಯಾಗುತ್ತಿಲ್ಲ, ದಲಿತರಿಗೆ ಸಲ್ಲಬೇಕಾದ ಸೌಲತ್ತುಗಳನ್ನು ಸಕಾಲಕ್ಕೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ತಾಲೂಕು ಕಚೇರಿಯಲ್ಲಿ ೫೦೦ಕ್ಕೂ ಹೆಚ್ಚು ಕಡತಗಳು ಬಾಕಿ:ತಾಲೂಕು ಕಚೇರಿಯಲ್ಲಿ ರೈತರು, ಅಲ್ಪಸಂಖ್ಯಾತರು, ದೀನ ದಲಿತರಿಗೆ ಸಂಬಂಧಪಟ್ಟ ಜಾತಿ ಪ್ರಮಾಣ ಪತ್ರ, ಆದಾಯ ಪತ್ರಗಳು, ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ೫೦೦ಕ್ಕೂ ಹೆಚ್ಚು ಕಡತಗಳು ವಿಲೇಯಾಗದೆ ಬಾಕಿ ಇದ್ದು, ತಹಸೀಲ್ದಾರ್ ಕಡತಗಳ ವಿಲೇಗೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ತಹಸೀಲ್ದಾರ್ ಕಾರ‍್ಯವೈಖರಿ ಕುರಿತು ಮಾತನಾಡಿದರು.
ಹೃದಯ ಭಾಗದ ಪೊಲೀಸ್ ಠಾಣೆಗೆ ಕಾಯಂ ಠಾಣಾಧಿಕಾರಿ ಇಲ್ಲ;ಕಳೆದ ಒಂದು ವರ್ಷದಿಂದ ನಗರದ ಹೃದಯ ಭಾಗದ ರಾಬರ್ಟ್ಸನ್ ಪೇಟೆ ಪೊಲೀಸ್ ಠಾಣೆಗೆ ಕಾಯಂ ಠಾಣಾಧಿಕಾರಿಗಳು ಇಲ್ಲ, ಆಡಳಿತ ಪಕ್ಷದ ಶಾಸಕರು ಇದ್ದರೂ ಪ್ರಮುಖ ಪೊಲೀಸ್ ಠಾಣೆಗೆ ಠಾಣಾಧಿಕಾರಿಯನ್ನು ನೇಮಕ ಮಾಡಲು ಶಾಸಕರಿಗೆ ಸಾಧ್ಯವಾಗುತ್ತಿಲ್ಲ ಅಂದರೆ ಶಾಸಕರು ಸಾರ್ವಜನಿಕರ ಕೆಲಸ ಎಷ್ಟರ ಮಟ್ಟಿಗೆ ಮಾಡುತ್ತಿದ್ದಾರೆ ಎಂದು ವ್ಯಂಗವಾಡಿದರು.
ಜೆಡಿಎಸ್ ತಾಲೂಕು ಕಾರ‍್ಯಕರ್ತರು ಸಭೆಯಲ್ಲಿದ್ದರು.