ಎಚ್.ಡಿ.ಕುಮಾರಸ್ವಾಮಿ ಆರೋಗ್ಯಕ್ಕೆ ಜೆಡಿಎಸ್ ವಿಶೇಷ ಪೂಜೆ

| Published : Mar 22 2024, 01:04 AM IST

ಎಚ್.ಡಿ.ಕುಮಾರಸ್ವಾಮಿ ಆರೋಗ್ಯಕ್ಕೆ ಜೆಡಿಎಸ್ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಇದಕ್ಕೂ ಮುನ್ನ ಚಿಕಿತ್ಸೆ ಯಶಸ್ವಿ ಆಗಲೆಂದು ಪ್ರಾರ್ಥಿಸಿ ಹಾಸನದ ಶ್ರೀ ಗಣಪತಿ ದೇವಾಲಯದಲ್ಲಿ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಗುರುವಾರ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿದರು.

ಪ್ರಾರ್ಥನೆ । ಹೃದಯ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿರುವ ಮಾಜಿ ಸಿಎಂ । ಆದಿಚುಂಚನಗಿರಿ ಮಠದ ದೇವಾಲಯದಲ್ಲಿ ವಿನಾಯಕನಿಗೆ ಬೇಡಿಕೆ

ಕನ್ನಡಪ್ರಭ ವಾರ್ತೆ ಹಾಸನ

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಇದಕ್ಕೂ ಮುನ್ನ ಚಿಕಿತ್ಸೆ ಯಶಸ್ವಿ ಆಗಲೆಂದು ಪ್ರಾರ್ಥಿಸಿ ನಗರದ ಎಂ.ಜಿ.ರಸ್ತೆಯ ಬಳಿ ಇರುವ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಆವರಣದಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಗುರುವಾರ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿ ದೇವರಿಗೆ ಈಡುಗಾಯಿ ಒಡೆದರು.ಬೆಳಿಗ್ಗೆಯಿಂದಲೇ ನೂರಾರು ಸಂಖ್ಯೆಯ ಜೆಡಿಎಸ್ ಕಾರ್ಯಕರ್ತರು ಹಾಗೂ ಎಚ್ಡಿಕೆ ಅಭಿಮಾನಿಗಳು ಜಮಾಯಿಸಿ ವಿನಾಯಕನಿಗೆ ಬೇಡಿಕೊಂಡು ಭಕ್ತಿ ಸಮರ್ಪಣೆ ಮಾಡಿ, ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಣೆಗೆ ಪ್ರಾರ್ಥಿಸಿದರು.

ಈ ವೇಳೆ ಜಿಲ್ಲಾ ಜೆಡಿಎಸ್ ವಕ್ತಾರ ಹೊಂಗೆರೆ ರಘು ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಮಾದರಿ ಮುಖ್ಯಮಂತ್ರಿಯಾಗಿ ಎಚ್ಡಿ ಕುಮಾರಸ್ವಾಮಿ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಆದರೆ ಗುರುವಾರ ಅವರಿಗೆ ಮೂರನೇ ಬಾರಿಗೆ ಹೃದಯ ಶಸ್ತ್ರ ಚಿಕಿತ್ಸೆ ನಡೆದಿದೆ. ಅವರ ಆರೋಗ್ಯ ಸುಧಾರಣೆಗೆ ದೇವರಲ್ಲಿ ಮೊರೆ ಇಟ್ಟಿದ್ದೇವೆ ಎಂದು ಹೇಳಿದರು.

ಆರೋಗ್ಯ, ಶಿಕ್ಷಣ, ನೀರಾವರಿ ಸೇರಿದಂತೆ ಇನ್ನೂ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ರಾಜ್ಯದ ಜನರಿಗೆ ನೀಡುವ ಮೂಲಕ ಇತರರಿಗೆ ಮಾದರಿ ಆಗಿರುವ ಎಚ್ಡಿ ಕುಮಾರಸ್ವಾಮಿ ಅವರಿಗೆ ಶಸ್ತ್ರ ಚಿಕಿತ್ಸೆ ಯಶಸ್ವಿ ಆಗಲಿ, ಆದಷ್ಟು ಬೇಗ ಗುಣಮುಖರಾಗಲಿ ಎಂದು ಆಶಿಸಿದರು.

ಕೇವಲ ರಾಜಕೀಯವಾಗಿ ಮಾತ್ರವಲ್ಲದೆ ವೈಯಕ್ತಿಕವಾಗಿ ಕೂಡ ಅನೇಕರಿಗೆ ಸಹಾಯಹಸ್ತ ಚಾಚಿರುವ ಕೊಡುಗೈ ದಾನಿ ಕುಮಾರಸ್ವಾಮಿ ಅವರ ಕೊಡುಗೆ ಈ ರಾಜ್ಯಕ್ಕೆ, ಹಾಸನ ಜಿಲ್ಲೆಗೆ ಇನ್ನೂ ಅಗತ್ಯವಾಗಿದೆ. ಆದುದರಿಂದ ದೇವರು ಅವರಿಗೆ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ತಿಳಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ ಮಾತನಾಡಿ, ಜನಪರ ನಾಯಕ, ಜನಪರ ಕಾಳಜಿ ಉಳ್ಳ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮೂರನೇ ಬಾರಿಗೆ ಹೃದಯ ಶಸ್ತ್ರ ಚಿಕಿತ್ಸೆ ನಡೆದಿರುವುದು ಬೇಸರದ ವಿಚಾರವಾಗಿದೆ, ಅವರಿಗೆ ಬೇಗ ಆರೋಗ್ಯ ಸುಧಾರಿಸಿ ಮತ್ತೆ ರಾಜ್ಯಕ್ಕೆ, ಈ ದೇಶಕ್ಕೆ ಕೊಡುಗೆ ನೀಡುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ರಾಜ್ಯದ ರೈತರ ಸಾಲ ಮನ್ನಾ ಮಾಡಿ, ಶಿಕ್ಷಣ ಕ್ಷೇತ್ರದಲ್ಲೂ ಹೊಸ ಕ್ರಾಂತಿಕಾರಕ ಬದಲಾವಣೆ ತಂದು ಸಾಕಷ್ಟು ಕೊಡಿಗೆ ನೀಡಿರುವ ಕುಮಾರಸ್ವಾಮಿ ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದರು

ಇದೇ ವೇಳೆ ಜೆಡಿಎಸ್ ಮುಖಂಡರು ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಅನಿಲ್ ಕುಮಾರ್, ಜಿ.ಪಂ. ಮಾಜಿ ಉಪಾಧ್ಯಕ್ಷ ಸ್ವಾಮಿಗೌಡ, ನಗರಸಭೆ ಸದಸ್ಯ ಚಂದ್ರೇಗೌಡ, ತಾಪಂ ಮಾಜಿ ಅಧ್ಯಕ್ಷ ಕುಮಾರ್, ಮುಖಂಡರಾದ ಅಗಿಲೆ ಮೊಗಣ್ಣಗೌಡ, ರುದ್ರಪ್ಪ, ಸಂಗಂ, ಸಮೀರ್ ಖಾನ್, ಯೋಗೇಶ್, ಅನಿಲ್, ಕುಮ್ಮಿ, ವಿಜಿ, ರಾಮಣ್ಣ, ಬಾಲಕೃಷ್ಣ, ದಾಸೇಗೌಡ, ದರ್ಮಣ್ಣ, ಚಂದ್ರಿಕಾ, ನಿರ್ಮಲಾ ಭಾಗವಹಿಸಿದ್ದರು.ಹಾಸನದ ಆದಿಚುಂಚನಗಿರಿ ಶಾಖಾ ಮಠದ ಗಣಪತಿ ದೇವಸ್ಥಾನದ ಮುಂದೆ ಈಡುಗಾಯಿ ಒಡೆದು ಎಚ್‌.ಡಿ.ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಣೆಗಾಗಿ ಜೆಡಿಎಸ್‌ ಕಾರ್ಯಕರ್ತರು ಪ್ರಾರ್ಥಿಸಿದರು.