ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ರಾಜ್ಯದ ಇತಿಹಾಸದಲ್ಲಿ ಶೇ.೪೦ಕ್ಕೂ ಹೆಚ್ಚು ಬೆಲೆ ಏರಿಕೆ ಮಾಡಿದ ಉದಾಹರಣೆ ರಾಜ್ಯದಲ್ಲಿ ಇರಲಿಲ್ಲ.

ರಾಜ್ಯದ ಇತಿಹಾಸದಲ್ಲಿ ಶೇ.೪೦ಕ್ಕೂ ಹೆಚ್ಚು ಬೆಲೆ ಏರಿಕೆ ಮಾಡಿದ ಉದಾಹರಣೆ ರಾಜ್ಯದಲ್ಲಿ ಇರಲಿಲ್ಲ: ಸಿಎಂಆರ್ ಶ್ರೀನಾಥ್

ಕನ್ನಡಪ್ರಭ ವಾರ್ತೆ ಕೋಲಾರ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಬಸ್ ಟಿಕೆಟ್ ದರವನ್ನು ಶೇ.೩೦ ಕ್ಕಿಂತ ಹೆಚ್ಚಿಗೆ ಏರಿಸಿ ರಾಜ್ಯದ ಜನತೆ ಮತ್ತು ಬಡ ಜನರ ಬದುಕಿನ ಮೇಲೆ ಬರೆ ಎಳೆದಿರುವುದನ್ನು ಖಂಡಿಸಿ, ನಗರದ ಮೆಕ್ಕೆ ವೃತ್ತದಲ್ಲಿ ಜೆಡಿಎಸ್ ಪಕ್ಷ ಮುಖಂಡರು ಹಾಗೂ ಕಾರ್ಯಕರ್ತರು ಬೃಹತ್ ಕಾಲ್ನಡಿಗೆ ಪ್ರತಿಭಟನೆ ನಡೆಸಿದರು.

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ರಾಜ್ಯದ ಇತಿಹಾಸದಲ್ಲಿ ಶೇ.೪೦ಕ್ಕೂ ಹೆಚ್ಚು ಬೆಲೆ ಏರಿಕೆ ಮಾಡಿದ ಉದಾಹರಣೆ ರಾಜ್ಯದಲ್ಲಿ ಇರಲಿಲ್ಲ. ಕೋಲಾರದಿಂದ ಬೆಂಗಳೂರಿಗೆ ೮೦ ರೂಪಾಯಿ ಇದ್ದ ಪ್ರಯಾಣ ದರವನ್ನು ೧೦೪ ರೂಗೆ ರಾಜ್ಯ ಸರ್ಕಾರ ಏರಿಸಿದ್ದಾರೆ ಎಂದು ಹೇಳಿದರು.

ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಸಹಾಯ ಮಾಡಿದ್ದೇವೆ ಅಂತೀರಿ, ಆದರೆ ಇವತ್ತು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ವಿರೋಧ ಮಾಡೋಕೆ ಬಂದಿದ್ದಾರೆ. ಈ ದುಷ್ಟ ಸರ್ಕಾರವನ್ನು ಹತ್ತಿಕ್ಕಬೇಕು, ನಿರ್ನಾಮ ಮಾಡಬೇಕು ಅಂತ ಒಂದೇ ದೃಷ್ಟಿಯಿಂದ ಸ್ವಯಂ ಪ್ರೇರಿತವಾಗಿ ಜೆಡಿಎಸ್ ತಾಲ್ಲೂಕು ಘಟಕದ ಹೋರಾಟದಲ್ಲಿ ರೈತರು, ಮಹಿಳೆಯರು, ಹಿಂದುಳಿದ ವರ್ಗದವರು, ಎಲ್ಲಾ ವರ್ಗದ ಜನ ಸ್ವಯಂ ಪ್ರೇರಿತವಾಗಿ ಭಾಗವಹಿಸಿದ್ದಾರೆ ಎಂದರು.

ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕೊಟ್ಟಿದ್ದೇವೆ ಎನ್ನುತ್ತಾರೆ, ಆದರೆ ನಿಗಮ ಮಂಡಳಿಗಳಲ್ಲಿ ನಿಗಮ ಮಂಡಳಿ ೧೨ ಸಾವಿರ ಕೋಟಿ ಬಾಕಿ ಇದೆ. ಅನೇಕ ಡಿಪೋಗಳಲ್ಲಿ ಸಾವಿರಾರು ಬಸ್ ಗಳು ನಿಂತಿವೆ, ಡೀಸೆಲ್ ಗೆ ಬಾಕಿ ಉಳಿಸಿಕೊಂಡು ಬಸ್ ಗಳು ರಸ್ತೆ ಮೇಲೆ ಓಡಾಡುತ್ತಿಲ್ಲ ಎಂದು ಆರೋಪಿಸಿದರು.

ಅನೇಕ ಡಿಪೋಗಳಲ್ಲಿ ಸಾವಿರಾರು ಬಸ್ ಗಳು ಕೆಟ್ಟು ನಿಂತಿವೆ. ಡೀಸೆಲ್ ಗೆ ಬಾಕಿ ಉಳಿಸಿಕೊಂಡು ವಾಹನಗಳು ರಸ್ತೆ ಮೇಲೆ ಓಡಾಡುತ್ತಿವೆ. ನೂರಾರು ಬಸ್ ಗಳು ಪ್ರತಿನಿತ್ಯ ರಸ್ತೆಯಲ್ಲಿ ನಿಲ್ಲುತ್ತಿವೆ. ಎಂತಹ ದುಸ್ಥಿತಿಗೆ ಕಾಂಗ್ರೆಸ್ ಸರ್ಕಾರ ತಂದುಬಿಟ್ಟಿದೆ ಎಂದು ಕಿಡಿಕಾರಿದರು.

ಆಡಳಿತ ಯಂತ್ರ ಬಳಸಿಕೊಂಡು ರಾಜಾರೋಷವಾಗಿ ಕೋಟಿಗಟ್ಟಲೆ ಲಂಚ, ಭ್ರಷ್ಟಾಚಾರದ ಮೂಲಕ ಲೂಟಿ ಹೊಡೆದು ಸರ್ಕಾರ ನಡೆಸುತ್ತಿದ್ದಾರೆ. ೨೦೨೮ರಲ್ಲಿ ಮತ್ತೆ ಗೆಲ್ಲಬೇಕು ಅಂತ ಎಲ್ಲಾ ಇಲಾಖೆಗಳಿಗೂ ಟಾರ್ಗೆಟ್ ಇಟ್ಟಿದ್ದಾರೆ. ಇಂತಿಷ್ಟು ಪ್ರಮಾಣದಲ್ಲಿ ಸರ್ಕಾರಕ್ಕೆ ದೇಣಿಗೆ ನೀಡಬೇಕು ಅಂತ ಹೇಳ್ತಿದ್ದಾರೆ. ಇದು ಅಧಿಕಾರದ ದುರಾಡಳಿತದ ಪರಮಾವಧಿ ಎಂದು ವಾಗ್ದಾಳಿ ನಡೆಸಿದರು.

ಕೆಪಿಎಸ್ಸಿ ಯಲ್ಲಿ ಅಧಿಕಾರಿ ನೇಮಕ ಪ್ರಕ್ರಿಯೆಯಲ್ಲಿ ಒಂದೊಂದು ಅಧಿಕಾರಿ ಹುದ್ದೆಗೆ ೮೦ ಲಕ್ಷ, ೧ ಕೋಟಿ, ೧.೫ ಕೋಟಿ ರೀತಿಯಲ್ಲಿ ಹರಾಜು ಇಟ್ಟುಕೊಂಡು ವ್ಯಾಪಾರ ಮಾಡ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿ, ಬಿಡದಿಯಲ್ಲಿ ಟೌನ್ ಶಿಪ್ ಹೆಸರಲ್ಲಿ ಅನೇಕ ಅಮಾಯಕರ ಜಮೀನುಗಳನ್ನು ದಲ್ಲಾಳಿಗಳ ಮೂಲಕ, ರಿಯಲ್ ಎಸ್ಟೇಟ್ ಮಾಫಿಯಾ ಮೂಲಕ ಲೂಟಿ ಹೊಡೆಯಲು ಹೊರಟಿದ್ದಾರೆ ಎಂದು ದೂರಿದರು.

ಕೇಂದ್ರ ಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಗೃಹ ಸಚಿವರು ಹೇಳಿಕೆ ನೀಡ್ತೀರಿ. ಇದು ಕೇವಲ ಕುಮಾರಸ್ವಾಮಿ ಅವರ ವಿರುದ್ಧದ ಹೇಳಿಕೆ ಅಲ್ಲ, ರಾಜ್ಯದ ೬.೫ ಕೋಟಿ ಜನತೆಗೆ ಮಾಡಿದ ಅವಮಾನ. ಇದಕ್ಕೆ ೨೦೨೮ರಲ್ಲಿ ಜನತೆ ಉತ್ತರ ಕೊಡ್ತಾರೆ ಎಂದರು.

೨೦೦ ಯೂನಿಟ್ ವಿದ್ಯುತ್ ಫ್ರೀ ಅಂತ ಹೇಳಿ, ಷರತ್ತು ಹಾಕಿ ಬೆಲೆ ಏರಿಕೆ ಮಾಡ್ತಿದ್ದಾರೆ. ಅನ್ನದಾತರನ್ನು, ರೈತರನ್ನು, ಕೂಲಿ ಕಾರ್ಮಿಕರನ್ನು ಕಡೆಗಣಿಸಿದ್ದಾರೆ. ೨೦೨೮ಕ್ಕೆ ನಿಮ್ಮ ದುರಾಡಳಿತಕ್ಕೆ ರೈತರೇ ನಿಮ್ಮ ಭವಿಷ್ಯ ಬರೀತಾರೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ವಕ್ಕಲೇರಿ ರಾಮು, ಕಾಮದೇನುಹಳ್ಳಿ ಬಾಬುಮೌನಿ, ಡಾ. ಡಿ. ಕೆ. ರಮೇಶ್, ವಡಗೂರು ರಾಮು, ಚಿಕ್ಕಹಸಾಳ ರವಿಕುಮಾರ್, ವಿ. ಕೆ. ರಾಜೇಶ್, ಕೋಡಿಕಣ್ಣೂರು ಶಂಕರ್, ನಾಯಕರಹಳ್ಳಿ ವಿನಯ್ ಬೈರೇಗೌಡ, ಚಂಬೆ ರಾಜೇಶ್, ವೇಮಗಲ್ ಕುರುಗಲ್ ಪಟ್ಟಣ ಪಂಚಾಯತ್ ಸದಸ್ಯರಾದ ಲೋಕೇಶ್ ಮರಿಯಪ್ಪ, ರಮೇಶ್, ವಿಜಿಕುಮಾರ್ ಗೌಡ, ಡಿ. ಎಂ. ನಾಗರಾಜ್, ವಕ್ಕಲೇರಿ ಚಿರಂಜೀವಿ, ಕಾಮದೇನುಹಳ್ಳಿ ಚಂದ್ರೇಗೌಡ ಇದ್ದರು.