ಪಂಚಗ್ಯಾರಂಟಿ ಅನುಷ್ಠಾನ ವೈಫಲ್ಯ ಖಂಡಿಸಿ ಜೆಡಿಎಸ್ ಪ್ರತಿಭಟನೆ

| Published : Mar 07 2025, 12:52 AM IST

ಸಾರಾಂಶ

ರಾಜ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆ ಅನುಷ್ಠಾನ ವೈಫಲ್ಯವಾಗಿದೆ ಎಂದು ಆರೋಪಿಸಿ ಜೆಡಿಎಸ್‌ ಕಾರ್ಯಕರ್ತರು ಇಲ್ಲಿನ ಡಿಸಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ರಾಜ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆ ಅನುಷ್ಠಾನ ವೈಫಲ್ಯವಾಗಿದೆ ಎಂದು ಆರೋಪಿಸಿ ಜೆಡಿಎಸ್‌ ಕಾರ್ಯಕರ್ತರು ಇಲ್ಲಿನ ಡಿಸಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಚುನಾವಣೆ ಮುನ್ನ ಘೋಷಣೆ ಮಾಡಿದಂತೆ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದೆ. ಆದರೆ, ಎಲ್ಲೂ ಸಮರ್ಪಕ ಜಾರಿಯಾಗಿಲ್ಲ. ಗೃಹಲಕ್ಷ್ಮಿಯಡಿ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರು. ನೀಡುವ ಯೋಜನೆ ಸಂಪೂರ್ಣ ವೈಫಲ್ಯವಾಗಿದೆ. ಕಳೆದ ಮೂರು ತಿಂಗಳಿನಿಂದ ಈ ಯೋಜನೆಯಡಿ ಅರ್ಹ ಫಲಾನುಭವಿಗಳ ಖಾತೆಗಳಿಗೆ 7,517 ಕೋಟಿ ರೂ. ವರ್ಗಾವಣೆ ಮಾಡಬೇಕಿದ್ದು, ಈ ಹಣವನ್ನು ರಾಜ್ಯ ಸರ್ಕಾರ ಇದುವರೆಗೂ ವರ್ಗಾಯಿಸಿಲ್ಲ. ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ದಾರ ಕುಟುಂಬಗಳ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದು, ಇದರಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯ ಅಡಿಯಲ್ಲಿ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದು, ರಾಜ್ಯ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ನೀಡುವ ಕಾಳಜಿ ತೆಗೆದುಕೊಂಡಿಲ್ಲ. ಯುವನಿಧಿ ಯೋಜನೆ ಬೆರಳೆಣಿಕೆಯ ಫಲಾನುಭವಿಗಳಿಗಷ್ಟೇ ಅನುಕೂಲವಾಗುತ್ತಿದೆಯೇ ವಿನಾ, ನಿರುದ್ಯೋಗಿ ಯುವಕರಿಗೆ ನೆರವಾಗುವ ಯಾವುದೇ ಕಾಳಜಿ ಈ ಯೋಜನೆಯಡಿ ಕಂಡು ಬರುತ್ತಿಲ್ಲ. ಶಕ್ತಿ ಯೋಜನೆಯಡಿ ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲಾ ವರ್ಗಗಳ ಮಹಿಳೆಯರಿಗೆ

ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ಆದರೆ, ರಾಜ್ಯಸರ್ಕಾರ ಮಹಿಳೆಯರಿಗೆ ಉಚಿತ ಪ್ರಮಾಣದ ಅನುಕೂಲಕ್ಕೆ ತಕ್ಕಂತೆ ಅಗತ್ಯವಿರುವ ಬಸ್ಸುಗಳ ಸಂಚಾರವನ್ನು ಒದಗಿಸುವಲ್ಲಿ ವಿಫಲವಾಗಿದೆ. ಸಾರ್ವಜನಿಕ ಸಾರಿಗೆಯು ಅವ್ಯವಸ್ಥೆಯ ಆಗರವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ತಾಯಣ್ಣ ಮಾತನಾಡಿ, ರಾಜ್ಯದಲ್ಲಿ ಮೈಕ್ರೋಫೈನಾನ್ಸ್‌ನವರು ಸಾಲ ವಸೂಲಿ ಭಾದೆಯಿಂದ ಹಲವಾರು ಸಾಲಗಾರರು ಊರು ತೊರೆದು ಹೋಗಿದ್ದಾರೆ. ಮತ್ತೆ ಕೆಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೈಕ್ರೋ ಫೈನಾನ್ಸ್‌ ಕಂಪನಿಗಳಿಂದ ಬಡ ಮತ್ತು ಮಾಧ್ಯಮ ಕುಟುಂಬಗಳು ಬೀದಿಪಾಲಾಗಿವೆ. ಈ ಸಾಮಾಜಿಕ ಪಿಡುಗನ್ನು ನಿಯಂತ್ರಿಸುವಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಕ್ಷದ ತಾಲೂಕು ಅಧ್ಯಕ್ಷ ಶಿವನಾರಾಯಣ, ಅಶೋಕ ಸಂಗನಕಲ್ಲು, ಮೇಘರಾಜ, ಹೊನ್ನೂರು ಸ್ವಾಮಿ, ಮುತ್ತು, ರಾಮಾಂಜಿನಿ, ಬಸಪ್ಪ, ಪ್ರದೀಪ್, ಜಾವೀದ್, ಕಿರಣ್ ಕುಮಾರ್, ರುದ್ರಮುನಿ , ನಾಗರಾಜ್, ಬಸವರಾಜ, ಜಮೀಲಾ ಬೇಗಂ, ಪುಷ್ಪಾ, ಭವಾನಿ,ವಿಜಯಾ, ವೃಂದಮ್ಮ, ರಾಜೇಶ್ವರಿ, ರಮಾದೇವಿ, ಭುವನೇಶ್ವರಿ, ನೀಲಾ, ನಾಗವೇಣಿ, ರೇಣುಕಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.