ಇಂದು ತಾಲೂಕು ಬಂದ್‌ಗೆ ಜೆಡಿಎಸ್ ಬೆಂಬಲ

| Published : Aug 12 2025, 12:32 AM IST

ಸಾರಾಂಶ

ರೈತ ಹೋರಾಟ ಸಮಿತಿ ಕರೆ ನೀಡಿರುವ ಆ. 12ರ ಸೋಮವಾರಪೇಟೆ ತಾಲೂಕು ಬಂದ್‌ಗೆ ಜೆಡಿಎಸ್‌ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ರೈತ ಹೋರಾಟ ಸಮಿತಿ ಕರೆ ನೀಡಿರುವ ಆ.12ರ ಸೋಮವಾರಪೇಟೆ ತಾಲೂಕು ಬಂದ್‌ಗೆ ಜೆಡಿಎಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪಕ್ಷದ ತಾಲೂಕು ಅಧ್ಯಕ್ಷ ಸಿ.ಎಸ್.ನಾಗರಾಜ್ ತಿಳಿಸಿದ್ದಾರೆ.ಜೆಡಿಎಸ್ ರೈತರ ಪಕ್ಷವಾಗಿದ್ದು, ರೈತರಿಗೆ ಅನ್ಯಾಯವಾದಾಗ ಎಲ್ಲಾ ಕಾರ್ಯಕರ್ತರು ಹೋರಾಟಕ್ಕೆ ಧುಮುಕುತ್ತೇವೆ. ಕೊಡಗಿನಲ್ಲಿರುವ ಸಿ ಆ್ಯಂಡ್ ಡಿ ಭೂಮಿ ರೈತರ ಕೃಷಿ ಭೂಮಿಯಾಗಿದ್ದು, ಅನೇಕ ವರ್ಷಗಳಿಂದ ಕಾಫಿ ಕಾಳುಮೆಣಸು, ಭತ್ತ, ಏಲಕ್ಕಿ, ತರಕಾರಿ, ಬಾಳೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸಿ ಆ್ಯಂಡ್ ಡಿ ಭೂಮಿ ಕೃಷಿಗೆ ಯೋಗ್ಯವಲ್ಲದ ಭೂಮಿ ಎಂದು ಕಂದಾಯ ಇಲಾಖೆಯವರು ಸರ್ಕಾರಕ್ಕೆ ವರದಿ ನೀಡಿರುವುದು ಖಂಡನೀಯವಾದುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.ಅನ್ನದಾತರೇ ದೇಶದ ಬೆನ್ನೆಲುಬು ಎಂದು ಸರ್ಕಾರಗಳು ಹೇಳುತ್ತವೆ. ಆದರೆ ರೈತವಿರೋಧಿ ಕಾನೂನುಗಳನ್ನು ತರುತ್ತಾರೆ. ಸಿ ಆ್ಯಂಡ್ ಡಿ ಭೂಮಿ ಸಮಸ್ಯೆಯನ್ನು ಯಾವುದೇ ಸರ್ಕಾರಗಳು ಬಗೆಹರಿಸಿಲ್ಲ. ಸಿ ಆ್ಯಂಡ್ ಡಿ ಭೂಮಿಯನ್ನು ಅರಣ್ಯ ಇಲಾಖೆಗೆ ಸೇರ್ಪಡೆಗೊಳಿಸಿದರೆ, ರೈತರು ಬೀದಿಪಾಲಾಗಬೇಕಾಗುತ್ತದೆ. ಮುಂದಿನ ಪೀಳಿಗೆಗೆ ಅನ್ಯಾಯವಾಗುತ್ತದೆ ಎಂದರು.ರೈತಾಪಿ ವರ್ಗ ಹೋರಾಟದ ಮೂಲಕ ನಮ್ಮ ಆಸ್ತಿಯನ್ನು ಉಳಿಸಿಕೊಳ್ಳಬೇಕು. ಬೀದಿಗಿಳಿದು ಹೋರಾಟ ಮಾಡಬೇಕು. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳಲ್ಲಿರುವ ಕಾರ್ಯಕರ್ತರೆಲ್ಲರೂ ರೈತಾಪಿ ವರ್ಗಕ್ಕೆ ಸೇರಿದ್ದಾರೆ. ಪಕ್ಷಭೇದ ಮರೆತು ರೈತಪರ ಹೋರಾಟದಲ್ಲಿ ಭಾಗವಹಿಸಿ ತಮ್ಮ ಆಸ್ತಿ-ಪಾಸ್ತಿಯನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.5 ಗ್ಯಾರೆಂಟಿಗಳನ್ನು ಕೊಟ್ಟು ರಾಜ್ಯ ಸರ್ಕಾರ ದಿವಾಳಿಯಾಗಿದೆ. ಈಗ ಪೈಸಾರಿ ಜಾಗವನ್ನು ಮಾಲಿಕರಿಗೆ ಗುತ್ತಿಗೆ ಕೊಟ್ಟು ಹಣ ಪಡೆದು ಖಜಾನೆ ತುಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪೈಸಾರಿ ಹಾಗು ಸಿ ಆ್ಯಂಡ್ ಡಿ ಜಾಗಕ್ಕೆ ಹಕ್ಕುಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.ಗೋಷ್ಠಿಯಲ್ಲಿ ಜೆಡಿಎಸ್ ಪ್ರಮುಖರಾದ ಪ್ರವೀಣ್ ಕುಮಾರ್, ವಿಜೇಶ್, ಜಯಾನಂದ, ನವೀನ್ ಇದ್ದರು.