ಜೆಡಿಎಸ್ ಉಳಿವು, ರೈತರ ಅಭಿವೃದ್ಧಿಗಾಗಿ ಬಿಜೆಪಿ ಜೊತೆ ಮೈತ್ರಿ: ನಿಖಿಲ್ ಕುಮಾರಸ್ವಾಮಿ

| Published : Apr 14 2024, 01:50 AM IST

ಜೆಡಿಎಸ್ ಉಳಿವು, ರೈತರ ಅಭಿವೃದ್ಧಿಗಾಗಿ ಬಿಜೆಪಿ ಜೊತೆ ಮೈತ್ರಿ: ನಿಖಿಲ್ ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಸಕಾಲಕ್ಕೆ ಉತ್ತಮ ಮಳೆ, ಬೆಳೆಯಾಗಿ ರೈತರು ಸಂತೃಪ್ತಿ ಜೀವನ ನಡೆಸುತ್ತಿದ್ದರು. ಆದರೆ, ಸಿದ್ದರಾಮಯ್ಯನವರ ಕಾಲದಲ್ಲಿ ಮಳೆ ಇಲ್ಲದೆ ಬರಗಾಲದ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ನಿಖಿಲ್ ವ್ಯಂಗ್ಯವಾಡಿದರು.

ಕನ್ನಡಪ್ರಭ ವಾರ್ತೆ ಹಲಗೂರು

ಜೆಡಿಎಸ್ ಉಳಿವು, ರೈತರ ಅಭಿವೃದ್ಧಿಗಾಗಿ ನಮ್ಮ ಪಕ್ಷ ಬಿಜೆಪಿ ಜೊತೆ ಮೈತ್ರಿಯಾಗಿದೆ. ಮಂಡ್ಯದಲ್ಲಿ ಎಚ್ .ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡಿರೋದು ಸಹ ರೈತರಿಗಾಗಿ ಎಂದು ಜೆಡಿಎಸ್ ಪಕ್ಷದ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಹಲಗೂರು ಮತ್ತು ಹಾಡ್ಲಿ ವೃತ್ತದಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್ .ಡಿ.ಕುಮಾರಸ್ವಾಮಿ ಪರ ಮತಯಾಚನೆ ವೇಳೆ ಮಾತನಾಡಿ, ಬಿಜೆಪಿ ರಾಷ್ಟ್ರೀಯ ನಾಯಕರು ನಿಮ್ಮ ಸೇವೆ ಕೇಂದ್ರಕ್ಕೆ ಅವಶ್ಯಕತೆ ಇದೆ. ನೀವು ಬರಬೇಕು, ಮಂಡ್ಯ ಕ್ಷೇತ್ರದ ಅಭ್ಯರ್ಥಿ ಆಗುವಂತೆ ಕುಮಾರಣ್ಣನನ್ನು ಕೇಳಿಕೊಂಡರು. ಅದಕ್ಕೆ ಕುಮಾರಣ್ಣ ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ದಾರೆ ಎಂದರು.

ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಸಕಾಲಕ್ಕೆ ಉತ್ತಮ ಮಳೆ, ಬೆಳೆಯಾಗಿ ರೈತರು ಸಂತೃಪ್ತಿ ಜೀವನ ನಡೆಸುತ್ತಿದ್ದರು. ಆದರೆ, ಸಿದ್ದರಾಮಯ್ಯನವರ ಕಾಲದಲ್ಲಿ ಮಳೆ ಇಲ್ಲದೆ ಬರಗಾಲದ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ವ್ಯಂಗ್ಯವಾಡಿದರು.

ಈ ಹಿಂದೆ ಸಿದ್ದರಾಮಣ್ಣ ಸಿಎಂ ಆಗಿದ್ದಾಗ ಬರಗಾಲ ಬಂದಿತ್ತು. ಇದರಿಂದ ಹಲವು ರೈತರು ಬೆಳೆ ಕೈಗೆ ಸಿಗದೇ ಸಾಲ ಮಾಡಿ ತೀರಿಸಲಾಗದೇ ಸಾವನ್ನಪ್ಪಿದ್ದರು. ಕುಮಾರಣ್ಣ ಸಿಎಂ ಆದಾಗ ರೈತರ ಸಾಲ ಮನ್ನಾ ಮಾಡಿ ರೈತರಿಗೆ ಶಕ್ತಿ ತುಂಬಿದರು ಎಂದರು.

ಕುಮಾರಣ್ಣ ಗೆದ್ದರೆ ಕೇವಲ ಸಂಸದರಾಗಿ‌ ಇರಲ್ಲ.ಅವರಿಗೆ ರಾಜ್ಯ ಕಟ್ಟಲು ದೊಡ್ಡ ಶಕ್ತಿ ತುಂಬಿದಂತಾಗುತ್ತದೆ. ಕಾಂಗ್ರೆಸ್ ಸರ್ಕಾರ ಬಂದರೆ ಸಾಕು ಬರಗಾಲ ಬರುತ್ತದೆ. ಕುಮಾರಣ್ಣ, ಯಡಿಯೂರಪ್ಪ ಸಿಎಂ ಆದರೆ, ಉತ್ತಮ ಮಳೆ ಬಂದು ಎಲ್ಲಾ ಕೆರೆ ಕಟ್ಟೆಗಳು ತುಂಬುತ್ತವೆ ಎಂದು ಹೇಳಿದರು.

ಕಾಂಗ್ರೆಸ್ ನೀಡಿರುವ 5 ಗ್ಯಾರಂಟಿಗಳು ನಿಮಗೆ ಸಿಗಲು ಆ ಪಕ್ಷಕ್ಕೆ ಮತ ಹಾಕಬೇಕು. ಇಲ್ಲದಿದ್ದರೆ ಅದನ್ನು ನಿಲ್ಲಿಸಲಾಗುತ್ತದೆ ಎನ್ನುತ್ತಾರೆ ಮಾಗಡಿ ಶಾಸಕರೊಬ್ಬರು. ಆದರೆ, ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಪಕ್ಷದವರು ಐದು ಆರು ಕೋಟಿ ಖರ್ಚು ಮಾಡಿ ಗ್ಯಾರಂಟಿ ಸಮಾವೇಶ ಮಾಡುತ್ತಾರೆ ಎಂದು ದೂರಿದರು.

ಕುಮಾರಣ್ಣ ಮಂಡ್ಯದಲ್ಲಿ 16 ರಿಂದ 24ರ ವರೆಗೆ ಪ್ರಚಾರ ನಿಗದಿ ಮಾಡಿದ್ದಾರೆ. ನಾನು ಸಹ ಅವರ ಪರವಾಗಿ ಮಂಡ್ಯ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಹೃದಯವಂತ ಕುಮಾರಣ್ಣನ ಆರೋಗ್ಯ ಭಗವಂತನ ದಯೆಯಿಂದ ಚೆನ್ನಾಗಿದೆ. ಕುಮಾರಣ್ಣನ ಸಾಧನೆಯನ್ನು ಮಂಡ್ಯ ಬೀದಿಯಲ್ಲಿ ಮಾತನಾಡುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಗೆ ಜನರು ಅಧಿಕಾರ ನೀಡಿದ್ದಾರೆ. ಅವರು ಕೆಲಸ ಮಾಡಲಿ. ಚುನಾವಣೆಯಲ್ಲಿ ಪಕ್ಷಾಂತರ ಸಾಮಾನ್ಯ. ಎಲ್ಲಾ ಪಕ್ಷಗಳಲ್ಲೂ ಒಂದಷ್ಟು ಜನ ಅಲ್ಲಿಗೆ ಹೋಗುತ್ತಾರೆ. ಇನ್ನೊಂದಷ್ಟು ಜನ ಇಲ್ಲಿಗೆ ಬರ್ತಾರೆ ಎಂದರು.

ನಿಖಿಲ್ ಕುಮಾರಸ್ವಾಮಿ ಅವರು ಭಾಷಣ ಮಾಡುತ್ತಿದ್ದ ವೇಳೆ ಜೆಡಿಎಸ್ ಕಾರ್ಯಕರ್ತ ತಮ್ಮ ಮಗುವನ್ನು ಎತ್ತಿಕೊಂಡು ಬಂದಿದ್ದರು. ಈ ವೇಳೆ ಭಾಷಣ ನಿಲ್ಲಿಸಿದ ಮಗುವನ್ನು ಎತ್ತಿಕೊಂಡು ಫೋಟೋ ತೆಗೆಸಿಕೊಂಡು ಅಭಿಮಾನ ಮೆರೆದು ಮತ್ತೆ ಭಾಷಣ ಮುಂದುವರೆಸಿದರು.

ಇದಕ್ಕೂ ಮುನ್ನ ಹಲಗೂರಿಗೆ ನಿಖಿಲ್ ಕುಮಾರಸ್ವಾಮಿ ಬರುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಜೈಕಾರಗಳನ್ನು ಕೂಗಿದರು. ಹಾಡ್ಲಿ ವೃತ್ತದಲ್ಲಿ ಬಿಸಿಲಿನ ತಾಪದಲ್ಲಿ ಭಾಷಣ ಕೇಳುತ್ತಿದ್ದ ಕಾರ್ಯಕರ್ತರಿಗೆ ಮಜ್ಜಿಗೆಯನ್ನು ವಿತರಿಸಲಾಯಿತು.

ಈ ವೇ‍‍ಳೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ , ಬಿಜೆಪಿ ಪಕ್ಷದ ಮುಖಂಡ ಮುನಿರಾಜು, ಜೆಡಿಎಸ್ ತಾಲೂಕು ಅಧ್ಯಕ್ಷ ವಿ.ಎಂ.ವಿಶ್ವನಾಥ್, ಯುವ ಘಟಕದ ಅಧ್ಯಕ್ಷ ರವಿ ಕಂಸಾಗರ, ಮುಖಂಡರಾದ ಎಚ್ ಎನ್ ರಾಮಚಂದ್ರಗೌಡ, ಸುರೇಂದ್ರ, ಎಚ್. ಎಂ.ಆನಂದ್ ಕುಮಾರ್, ರೈತ ಸಂಘದ ಶ್ರೀನಿವಾಸ, ಎನ್ .ಕೆ.ಪುಟ್ಟರಾಮು, ತೊರೆಕಾಡನಹಳ್ಳಿ ಗ್ರಾಮದ ಟಿ.ಪಿ. ರಾಜು, ಕೆಂ ದಾಸೇಗೌಡ ಶ್ರೀನಿವಾಸ, ಸ್ವಾಮಿ, ಮುಖಂಡರು ಹಾಗೂ ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.