ಸಾರಾಂಶ
-ದೇವದುರ್ಗ ಸಂಚಾರ ಠಾಣೆ ಆವರಣದಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರಿಂದ ಪ್ರತಿಭಟನೆ । ಹೆಚ್ಚುವರಿ ಎಸ್ಪಿ ಜಿ.ಹರೀಶ್‌ಗೆ ಮನವಿ
------ಕನ್ನಡಪ್ರಭ ವಾರ್ತೆ ದೇವದುರ್ಗ
ವಾಹನಗಳ ತಪಾಸಣೆ, ಹೆಲ್ಮೆಟ್ ಪರಿಶೀಲನೆ ನೆಪದಲ್ಲಿ ವಾಹನ ಸವಾರರಿಗೆ ಟ್ರಾಫಿಕ ಪೊಲೀಸರ ಕಿರಿಕಿರಿ ಹೆಚ್ಚಾಗಿದ್ದು, ಕೂಲಿಕಾರರ ಮೇಲೆ ಹಲ್ಲೆ ಕೂಡ ನಡೆಸಲಾಗುತ್ತದೆ ಎಂದು ಆರೋಪಿಸಿ, ಜೆಡಿಎಸ್ ಕಾರ್ಯಕರ್ತರು, ಮುಖಂಡರು ಸೋಮವಾರ ರಾತ್ರಿ ದಿಢೀರ ಅಹೋರಾತ್ರಿ ಧರಣಿ ಮಾಡಿದ ಘಟನೆ ನಡೆದಿದೆ.ಕೇವಲ ಒಂದು ತಿಂಗಳ ಹಿಂದೆ ಇದೇ ತೆರನಾದ ಪ್ರಕರಣ ನಡೆದಿದ್ದಾಗ,ಶಾಸಕಿ ಕರೆಮ್ಮ ಜಿ.ನಾಯಕ ಘಟನಾ ಸ್ಥಳದಲ್ಲಿಯೇ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕರೆಸಿ, ಮುಂದೆ ಈ ತರಹದ ಕಿರುಕುಳಕ್ಕೆ ಕಡಿವಾಣ ಹಾಕಲು, ಪಿಎಸ್ಐ ನಾರಾಯಣ ಮತ್ತು ಅವರ ಸಂಗಡಿಗರ ನಡೆ ತಿದ್ದಿಕೊಳ್ಳಲು ಸೂಚಿಸಿದ್ದರು.
ಆದರೆ, ವಾಹನ ಸವಾರರಿಗೆ ಕಿರುಕುಳ ಮಾತ್ರ ತಪ್ಪಿದ್ದಿಲ್ಲ. ಪ್ರತಿನಿತ್ಯ ಒಂದೊಂದು ರಸ್ತೆ ಮಾರ್ಗದಲ್ಲಿ ನಿಂತು ವಾಹನಗಳನ್ನು ತಡೆದು, ಹಣ ವಸೂಲಿ ಮಾಡುವ ಆರೋಪ ಕೇಳಿ ಬಂದಿದ್ದವು. ಹಣ ಕೊಡದೇ ಇದ್ದರೆ ಸವಾರರ ಮೇಲೆ ಹಲ್ಲೆ ಮಾಡಿದ ಪ್ರಕರಣಗಳು ನಡೆದಿವೆ. ಟ್ರಾಫಿಕ್ ಪೊಲೀಸರ ಕಿರುಕುಳಕ್ಕೆ ಅನೇಕ ವಾಹನ ಸವಾರರು ದೂರಿದ್ದರು.ಪುನಃ ಸೋಮವಾರ ಸಂಜೆ ರಾಯಚೂರು ರಸ್ತೆ ಮಾರ್ಗದಲ್ಲಿ ವಾಹನ ಸವಾರರ ಮೇಲೆ ವಾಗ್ವಾದ ನಡೆದಿದೆ. ದಂಡವನ್ನು ನ್ಯಾಯಾಲಯದಲ್ಲಿ ಕಟ್ಟುತ್ತೇವೆ ಸಧ್ಯ ನಮ್ಮಲ್ಲಿ ಹಣವಿಲ್ಲ ಎಂದು ಹೇಳಿದರೂ, ಪೊಲೀಸ್ ವ್ಯಾನ್ ನಲ್ಲಿ ಕರೆದುಕೊಂಡು ಹೋದ ಪ್ರಕರಣ ನಡೆದಿದೆ ಎನ್ನಲಾಗಿದೆ.
ವಿಷಯ ತಿಳಿಯುತ್ತಲೇ ಜೆಡಿಎಸ್ ಕಾರ್ಯಕರ್ತರು ಇಡೀ ರಾತ್ರಿ ಧರಣಿ ನಡೆಸಿ, ಎಸ್ಪಿಯವರು ಬರುವವರೆಗೆ, ಪಿಎಸ್ಐ, ಪೇದೇಗಳ ಅಮಾನತ್ತು ಮಾಡಬೇಕೆಂದು ಪಟ್ಟು ಹಿಡಿದರು.ಮಂಗಳವಾರ ಹೆಚ್ಚುವರಿ ಎಸ್ಪಿ ಜಿ.ಹರೀಶ ಹಾಗೂ ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ ಠಾಣೆಯಲ್ಲಿ ಧರಣಿ ನಿರತರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಮನವಿ ಸಲ್ಲಿಸಿ, ಹಲ್ಲೆ ಮಾಡುವುದು, ಹಣ ವಸೂಲಿ ಮಾಡುವದು, ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗುವ ವಿಡಿಯೋ ಕ್ಲಿಪ್ ಗಳನ್ನು ಅಧಿಕಾರಿಗಳಿಗೆ ತೋರಿಸಿದ ಘಟನೆ ಜರುಗಿತು.
ಕೃಷಿ ಕೂಲಿಕಾರರನ್ನು ಕರೆದುಕೊಂಡು ಹೋಗುವ ವಾಹನಗಳ ಮೇಲೆಯೇ ಪೊಲೀಸರು ಟಾರ್ಗೆಟ್ ಮಾಡುತ್ತಾರೆ. ಕೆಲಸ ಮಾಡಿ ಮನೆಗೆ ಹೋಗುವಾಗ ಕೂಲಿಕಾರರಲ್ಲಿ ಹಣ ಹೇಗೆ ಇರುತ್ತೆ ಎಂಬ ಸಣ್ಣ ಮಾಹಿತಿಯೂ ಪೊಲೀಸರಿಗೆ ಇಲ್ಲ. ಇದರಿಂದ ವಾಹನ ಸವಾರರು ರೋಸಿ ಹೋಗಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು. ಮನವಿ ಸ್ವೀಕರಿಸಿದ ಹೆಚ್ಚವರಿ ಎಎಸ್ಪಿ ಜಿ.ಹರೀಶ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ಮೇಲೆ ಧರಣಿ ಹಿಂಪಡೆಯಲಾಗಿದೆ.ಈ ಸಂದರ್ಭದಲ್ಲಿ ಶಾಸಕಿ ಕರೆಮ್ಮ ಜಿ.ನಾಯಕ ಪುತ್ರಿ ಗೌರಿ ಗೋಪಾಲಕೃಷ್ಣ ನಾಯಕ ಚಿಂತಲಕುಂಟಿ,ಜೆಡಿಎಸ್ ಪಕ್ಷದ ಮುಖಂಡರಾದ ಗೋವಿಂದರಾಜ್ ನಾಯಕ ಕೊತ್ತದೊಡ್ಡಿ, ಹನುಮಂತ್ರಾಯ ನಾಯಕ ಚಿಂತಲಕುಂಟಿ, ಖಾಜೇಗೌಡ ಗಬ್ಬೂರ, ರೇಣುಕಾ ಮಯೂರಸ್ವಾಮಿ, ದೊಡ್ಡ ರಂಗಣ್ಣ ಗೌಡ, ಬಸವರಾಜ ಯರಮಸಾಳ, ರಮೇಶ ರಾಮನಾಳ, ಈಸಾಕ್ ಮೇಸ್ತಿ, ಶಾಲಂ ಉದ್ಧಾರ ಪಾಲ್ಗೊಂಡಿದ್ದರು.
-----------------------25ಕೆಪಿಡಿವಿಡಿ01: ದೇವದುರ್ಗ ಸಂಚಾರ ಠಾಣೆ ಆವರಣದಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಸೋಮವಾರ ರಾತ್ರಿ ದಿಢೀರ ಅಹೋರಾತ್ರಿ ಧರಣಿ ನಡೆಸಿ ಹೆಚ್ಚುವರಿ ಎಸ್ಪಿ ಜಿ.ಹರೀಶ ಮನವಿ ಸಲ್ಲಿಸಿದರು.