ಸಾರಾಂಶ
ಧರ್ಮಸ್ಥಳದಲ್ಲಿ ಲಕ್ಷಾಂತರ ಜನರಿಗೆ ಅನ್ನ ಪ್ರಸಾದ ಸೇರಿ ಹಲವು ಧಾರ್ಮಿಕ ಕಾರ್ಯ ನಡೆಯುತ್ತವೆ. ಆ ಕ್ಷೇತ್ರಕ್ಕೊಂದು ಧಾರ್ಮಿಕ ಇತಿಹಾಸವಿದೆ. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿಯ ಪವಿತ್ರ ನೆಲದಲ್ಲಿ ಈಚೆಗೆ ಅಪಪ್ರಚಾರ ಹೆಚ್ಚಾಗುತ್ತಿದೆ.
ಕೊಪ್ಪಳ:
ಕೋಟ್ಯಂತರ ಜನರ ಧಾರ್ಮಿಕ ಭಾವನೆ ಹಾಗೂ ಶ್ರದ್ಧಾ ಕೇಂದ್ರವಾಗಿರುವ ಧರ್ಮಸ್ಥಳ ಕುರಿತು ಅಪಪ್ರಚಾರ ನಡೆಸಲು ಷಡ್ಯಂತ್ರ ನಡೆದಿರುವುದು ಈಗಾಗಲೇ ಬಯಲಾಗಿದೆ. ಹೀಗಾಗಿ, ಆ. ೩೧ರಂದು ಧರ್ಮಸ್ಥಳಕ್ಕೆ ಜೆಡಿಎಸ್‌ನಿಂದ ಸತ್ಯಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಲಕ್ಷಾಂತರ ಜನರಿಗೆ ಅನ್ನ ಪ್ರಸಾದ ಸೇರಿ ಹಲವು ಧಾರ್ಮಿಕ ಕಾರ್ಯ ನಡೆಯುತ್ತವೆ. ಆ ಕ್ಷೇತ್ರಕ್ಕೊಂದು ಧಾರ್ಮಿಕ ಇತಿಹಾಸವಿದೆ. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿಯ ಪವಿತ್ರ ನೆಲದಲ್ಲಿ ಈಚೆಗೆ ಅಪಪ್ರಚಾರ ಹೆಚ್ಚಾಗುತ್ತಿದೆ. ಯ್ಯೂಟೂಬರ್‌ಗಳು ಧರ್ಮಾಧಿಕಾರಿ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿದೆ. ಅನಾಮಿಕ ಹೇಳಿದ ಎಂದಾಕ್ಷಣ ಸರ್ಕಾರ ಎಸ್‌ಐಟಿ ರಚಿಸಿ ಶವ ಹುಡುಕುವ ಕೆಲಸ ಮಾಡಿತು. ಆದರೆ ಒಂದು ಶವವೂ ಸಿಗಲಿಲ್ಲ. ಈಗ ಆ ಅನಾಮಿಕನ ಅಸಲಿ ಮುಖ ಬಯಲಾಗಿದೆ. ಅಪ್ರಚಾರದಲ್ಲಿ ತೊಡಗಿರುವ ವ್ಯಕ್ತಿಗಳು ಸೌಜನ್ಯ ಪ್ರಕರಣ ಮುಂದಿಟ್ಟು ಬಾಯಿಗೆ ಬಂದಂತೆ ಮಾತನಾಡುತ್ತಿದ್ದು ಅವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಜನಪರ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಸಂಘ ರಚಿಸಿ ಸ್ವಾವಲಂಬಿಗಳಾಗಿ ಜೀವನ ಕಟ್ಟಿಕೊಳ್ಳಲು ದೊಡ್ಡ ಆಸರೆಯಾಗಿ ನಿಂತಿದ್ದಾರೆ. ಅಂಥ ಧರ್ಮಸ್ಥಳಕ್ಕೆ ಅಪಕೀರ್ತೀ ತರುತ್ತಿರುವುದು ಸರಿಯಲ್ಲ. ಈ ಅಪಪ್ರಚಾರ ತಡೆಯಲು ಪಕ್ಷದಿಂದ ರಾಜ್ಯಾದ್ಯಂತ ಧರ್ಮಸ್ಥಳಕ್ಕೆ ಸತ್ಯಯಾತ್ರೆ ಹಮ್ಮಿಕೊಂಡಿದ್ದು ಆ. ೩೦ರಂದು ಕೊಪ್ಪಳದಿಂದ ತೆರಳಿ ಆ. ೩೧ರಂದು ಧರ್ಮಸ್ಥಳದ ಧರ್ಮಾಧಿಕಾರಿ ಭೇಟಿ ಮಾಡಿ ಅವರಿಗೆ ಬೆಂಬಲ ಕೊಡಲಾಗುವುದು. ಜತೆಗೆ ಅಪಪ್ರಚಾರ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಒತ್ತಾಯಿಸಿದರು.ಜೆಡಿಎಸ್ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷ ಮಂಜುನಾಥ ಸೊರಟೂರು, ಕರಿಯಪ್ಪ ನಾಮದಾಸರ, ವೀರೇಶಗೌಡ ಚಿಕ್ಕಬಗನಾಳ, ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ ಸೇರಿ ಇತರರು ಇದ್ದರು.