ಸಾರಾಂಶ
ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ‘ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ’ ಎಂಬ ಘೋಷವಾಕ್ಯದೊಂದಿಗೆ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಜೆಡಿಎಸ್ ಬೃಹತ್ ಪ್ರತಿಭಟನೆ ನಡೆಸಲಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ‘ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ’ ಎಂಬ ಘೋಷವಾಕ್ಯದೊಂದಿಗೆ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಜೆಡಿಎಸ್ ಬೃಹತ್ ಪ್ರತಿಭಟನೆ ನಡೆಸಲಿದೆ.ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು. ಹೋರಾಟ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಜೆಡಿಎಸ್ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾಹಿತಿ ಹಂಚಿಕೊಂಡಿದ್ದಾರೆ. ಈಗಾಗಲೇ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಪೋಸ್ಟರ್ ಅಭಿಯಾನ ಪ್ರಾರಂಭವಾಗಿದೆ. ಇದೀಗ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರತಿಭಟನೆ ಬಳಿಕ ವಿಧಾನಸೌಧ ಚಲೋ ಚಳವಳಿ ನಡೆಸಲಿದ್ದು, 10 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿ ಕಾಂಗ್ರೆಸ್ ಸರ್ಕಾರ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಲಿದ್ದಾರೆ. ಬೆಲೆ ಏರಿಕೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದಿದ್ದಾರೆ.ಕಾಕಾ ಪಾಟೀಲ್ಗೂ ಫ್ರೀ, ಮಹದೇವಪ್ಪ ನಿನಗೂ ಫ್ರೀ ಎಂದು ಪುಂಗಿದ್ದ ಸರ್ಕಾರ ಈಗ ಕಾಣೆಯಾಗಿದೆ. 48 ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನರು ಜೀವನ ಮಾಡಲು ಕಷ್ಟಕರವಾಗಿದೆ ಎಂದು ಕಿಡಿಕಾರಿದ್ದಾರೆ.
ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಎಂಬುದು ಕೇವಲ ಜೆಡಿಎಸ್‌ನ ಸ್ಲೋಗನ್ ಅಲ್ಲ, ಇದು ಕನ್ನಡಿಗರ ಭಾವನೆ. ಇದು ಜೆಡಿಎಸ್ ಪಕ್ಷದ ದನಿಯಲ್ಲ, ಅದು ಬೆಲೆ ಏರಿಕೆಯಿಂದ ಬಸವಳಿದಿರುವ ಸಾಮಾನ್ಯ ಕನ್ನಡಿಗರ ದನಿ. ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಬೇಸತ್ತು ಹೋಗಿದ್ದಾರೆ. ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಾಕಪ್ಪ ಸಾಕು ಈ ಕಾಂಗ್ರೆಸ್ ಸರ್ಕಾರ ಅನ್ನೋ ಭಾವನೆ ಜನರ ಮನಸಿನಲ್ಲಿ ಬಂದಿದೆ. ಜನ ವಿರೋಧಿ ಸರ್ಕಾರ ಜನರನ್ನು ಕಿತ್ತು ತಿನ್ನುತ್ತಿದೆ. ಕಾಂಗ್ರೆಸ್ಸಿನ ದುರಾಡಳಿತಕ್ಕೆ ದಿಟ್ಟ ಉತ್ತರ ನೀಡಬೇಕಿದೆ ಎಂದಿದ್ದಾರೆ.