ಸಾರಾಂಶ
ದಲ್ಲಾಳಿಗಳಿದ್ದರೆ ಮಾತ್ರ ಬೆಳೆ ವಿಮೆ ಹಣ ಜಮಾ ಮಾಡುತ್ತಿರುವ ವಿಮಾ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
ಗದಗ: ಜಿಲ್ಲೆಯಲ್ಲಿ ಬೆಳೆ ವಿಮೆಗಾಗಿ ರೈತರು ಪರದಾಡುತ್ತಿದ್ದು, ಬೆಳೆ ವಿಮೆ ಹಣ ಕೊಡಿಸುವ ನೆಪದಲ್ಲಿ ಲೂಟಿ ಮಾಡುತ್ತಿರುವ ದಲ್ಲಾಲಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಜೆಡಿಎಸ್ ನಿಯೋಗದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್.ಗೋವಿಂದಗೌಡ್ರ ಮಾತನಾಡಿ, ದಲ್ಲಾಳಿಗಳಿದ್ದರೆ ಮಾತ್ರ ಬೆಳೆ ವಿಮೆ ಹಣ ಜಮಾ ಮಾಡುತ್ತಿರುವ ವಿಮಾ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬೆಳೆ ವಿಮೆ ಹಣ ಅರ್ಧದಷ್ಟು ದಲ್ಲಾಳಿಗಳ ಪಾಲಾಗುತ್ತಿರುವುದು ನಿಜವಾಗಲೂ ರೈತರಿಗೆ ಮಾರಕವಾಗಿದೆ. ಈ ವಿಷಯದಲ್ಲಿ ದಲ್ಲಾಳಿಗಳು ಆಡಿದ್ದೆ ಆಟ ಆಗಿದೆ ಎಂದು ಆರೋಪಿಸಿದರು.ಸಾಲ ಕೊಡಿಸುವುದರಲ್ಲಿ ದಲ್ಲಾಳಿಗಳು, ತಮ್ಮ ಸರಕು ಮಾರುಕಟ್ಟೆಯಲ್ಲಿ ರೈತರು ಬ್ಯಾಂಕಿನಲ್ಲಿ ಸಾಲ ಪಡೆಯಬೇಕೆಂದರೆ ದಲ್ಲಾಳಿಗಳು, ಬೆಳೆದ ಬೆಳೆ ಮಾರಬೇಕಂದರೆ ದಲ್ಲಾಳಿಗಳು, ವಿಮೆ ಹಣ ಪಡೆಯಲು ದಲ್ಲಾಳಿಗಳು, ಈ ದಲ್ಲಾಳಿಗಳಿಂದ ರೈತರು ಶೋಷಣೆಗೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮ ವಹಿಸಬೇಕು. ತಕ್ಷಣ ಈ ದಲ್ಲಾಳಿಗಳ ಹಾವಳಿ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಗಿರೀಶ ಸಂಶಿ, ಜಿಲ್ಲಾ ವಕ್ತಾರ ಜಿ.ಕೆ. ಕೊಳ್ಳಿಮಠ, ಬಸವರಾಜ ಅಪ್ಪಣ್ಣವರ, ಸಂತೋಷ್ ಪಾಟೀಲ, ಜೋಸೆಫ್ ಉದೋಜಿ, ಪ್ರಫುಲ್ ಪುಣೆಕರ, ರಮೇಶ್ ಹುಣಸಿಮರದ, ಡಾ. ಶರಣಪ್ಪ ಹೂಗಾರ, ಸಿದ್ದಲಿಂಗಯ್ಯ ಹೊಂಬಾಳಿಮಠ, ಕೆ.ಎಫ್.ದೊಡ್ಮನಿ ಹಾಗೂ ಜೆಡಿಎಸ್ ಕಾರ್ಯಕರ್ತರು ಇದ್ದರು.