ಸಾರಾಂಶ
- ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಮಾಲೂರಿನ ಡಾ. ಕೆ.ನಾಗರಾಜ ಜೆಡಿಯು ಅಭ್ಯರ್ಥಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆಸರ್ವೋದಯ ತತ್ವದಡಿ ಜೆಡಿಯು ಪಕ್ಷ ರಾಜ್ಯದಲ್ಲಿ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಶಿಕ್ಷಣ, ಆರೋಗ್ಯ, ಕೃಷಿ, ಪರಿಸರ ಹಾಗೂ ಆಡಳಿತ ಎಂಬ ಐದಂಶಗಳನ್ನು ಒಳಗೊಂಡಂತೆ ಹೊಸ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ವಿಭಾಗದಲ್ಲಿ ನಾವು ಯಾವ ರೀತಿ ಬದಲಾವಣೆ ತರಬಹುದೆಂಬ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇವೆ. ಈಚಿನ ದಿನಗಳಲ್ಲಿ ಎಲ್ಲ ಅನಿವಾರ್ಯತೆ ಬಂದೊದಗಿದೆ. ಯಾವುದೇ ವೃತ್ತಿಯಾಗಲೀ, ಕ್ಷೇತ್ರದಲ್ಲೇ ಆಗಿರಲಿ ಅನಿವಾರ್ಯತೆಯೆಂಬ ಪದ ಬಳಕೆ ಆಗುತ್ತಿದೆ ಎಂದರು.ಪ್ರಸ್ತುತ ಎಲ್ಲರಿಗೂ ಅಸಹಾಯಕತೆ ಎದುರಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ತೊಳಲಾಟ ಹೆಚ್ಚುತ್ತಿದೆ. ಜೆಡಿಯು ನಡೆಯು ಉತ್ತಮ ಶಿಕ್ಷಣ, ಆರೋಗ್ಯ, ಆಡಳಿತ, ಕೃಷಿ, ಪರಿಸರದ ಕಡೆಗೆ ಎಂಬ ಘೋಷದೊಂದಿಗೆ ಮುಂದಡಿ ಇಡುತ್ತಿದೆ ಎಂದು ಹೇಳಿದರು.
ಆಗ್ನೇಯ ಪದವೀಧರರ ಕ್ಷೇತ್ರಕ್ಕೆ 2026ರಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಎರಡು ಸಲ ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ, ಡಾ.ನಾಗರಾಜ ಪರಾಭವಗೊಂಡಿದ್ದಾರೆ. ಆದರೂ, ಜೆಡಿಯು ಅಭ್ಯರ್ಥಿಯಾಗಿ ಮಾಲೂರಿನ ಡಾ. ಕೆ.ನಾಗರಾಜ ಅವರನ್ನು ಕಣಕ್ಕಿಳಿಸುತ್ತಿದ್ದೇವೆ ಎಂದರು.ಜೆಡಿಯು ಮುಖಂಡರಾದ ಧಾರವಾಡದ ಶ್ರೀಶೈಲ ಗೌಡ್ರು, ಡಿ.ಆರ್.ಶಿವಯೋಗಿ, ಎಂ.ಡಿ.ನೀಲಗಿರಿಯಪ್ಪ, ಡಿ.ಕೆ.ಶ್ರೀನಿವಾಸ, ಶಕುಂತಲಾ ಶೆಟ್ಟಿ, ಚಿನ್ಮಯ, ಶ್ರೀನಿವಾಸ, ಶಂಕರ, ಕ್ರಾಂತಿ ಕಿಡಿ ಗೌಡ್ರು, ಮಂಜುನಾಥ, ಸಿದ್ದಯ್ಯ, ಚಂದ್ರು ಇತರರು ಇದ್ದರು.
- - -(ಬಾಕ್ಸ್) * ಕ್ಷೇತ್ರಾದ್ಯಂತ ಮತದಾರರ ಭೇಟಿಯಾಗುವೆ: ಅಭ್ಯರ್ಥಿ
ಪಕ್ಷದ ಮುಖಂಡ, ಅಭ್ಯರ್ಥಿ ಡಾ. ಕೆ.ನಾಗರಾಜ ಮಾತನಾಡಿ, ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಗೆ ಒತ್ತಾಯಿಸಲಾಗುವುದು. ಎನ್‌ಪಿಎಸ್‌ನಿಂದ ಒಪಿಎಸ್ ಪದ್ಧತಿ ಜಾರಿಗೆ ಒತ್ತಾಯ, ಅತಿಥಿ ಉಪನ್ಯಾಸಕರು, ಶಿಕ್ಷಕರ ಸೇವಾ ಭದ್ರತೆ, ಎಲ್ಲರಿಗೂ ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು.
ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಉಚಿತ ಐಎಎಸ್, ಕೆಎಎಸ್ ಕೋಚಿಂಗ್ ಸೆಂಟರ್‌ಗಳ ಸ್ಥಾಪನೆ, ಗ್ರಾಮೀಣ ಪ್ರದೇಶದ ಪದವೀಧರರಿಗೆ ಸ್ವಯಂ ಉದ್ಯೋಗಕ್ಕೆ ಆದ್ಯತೆ, ಪ್ರೋತ್ಸಾಹ ನೀಡುವ ಗುರಿ ಇದೆ. ಇದೀಗ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಸಂಯುಕ್ತ ಜನತಾ ದಳ ಪಕ್ಷದ ಅಭ್ಯರ್ಥಿಯಾಗಿ 2026ರ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಕೋಲಾರ, ಚಿಕ್ಕಬುಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆ ಒಳಗೊಂಡ ಕ್ಷೇತ್ರ ಇದಾಗಿದ್ದು, ಕ್ಷೇತ್ರದಲ್ಲಿ ಈಗಾಗಲೇ ಸುತ್ತಾಟ ನಡೆಸಿ, ಪದವೀಧರ ಮತದಾರರನ್ನು ಭೇಟಿಯಾಗುತ್ತಿದ್ದೇನೆ ಎಂದು ತಿಳಿಸಿದರು.- - -
-15ಕೆಡಿವಿಜಿ2:ದಾವಣಗೆರೆಯಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್, ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಯು ಅಭ್ಯರ್ಥಿ ಮಾಲೂರಿನ ಡಾ. ಕೆ.ನಾಗರಾಜ ಸುದ್ದಿಗೋಷ್ಠಿಯಲ್ಲಿ ಮಾತಾಡಿದರು.