ಜೆಇಇ ಮುಖ್ಯ ಪರೀಕ್ಷೆ: ರಾಜ್ಯದ ಕುಶಾಗ್ರಗೆ 100ಕ್ಕೆ 100 ಅಂಕ!

| Published : Apr 20 2025, 01:52 AM IST

ಜೆಇಇ ಮುಖ್ಯ ಪರೀಕ್ಷೆ: ರಾಜ್ಯದ ಕುಶಾಗ್ರಗೆ 100ಕ್ಕೆ 100 ಅಂಕ!
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಪ್ರತಿಷ್ಠಿತ ಐಐಟಿಗಳು ಸೇರಿ ವಿವಿಧ ತಾಂತ್ರಿಕ ಸಂಸ್ಥೆಗಳ ಪ್ರವೇಶಕ್ಕೆ ನಡೆಯುವ ಜಂಟಿ ಪ್ರವೇಶ ಪರೀಕ್ಷೆ-2025 (ಜೆಇಇ) ಸೆಷನ್-2ರ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಬೆಂಗಳೂರಿನ ಕಸನವಹಳ್ಳಿಯ ನಾರಾಯಣ ಕೋ-ಕಾವೇರಿ ಭವನ ಶಿಕ್ಷಣ ಸಂಸ್ಥೆಯ ಕುಶಾಗ್ರ ಗುಪ್ತಾ ಶೇ.100ರಷ್ಟು ಅಂಕ ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು/ನವದೆಹಲಿ

ದೇಶದ ಪ್ರತಿಷ್ಠಿತ ಐಐಟಿಗಳು ಸೇರಿ ವಿವಿಧ ತಾಂತ್ರಿಕ ಸಂಸ್ಥೆಗಳ ಪ್ರವೇಶಕ್ಕೆ ನಡೆಯುವ ಜಂಟಿ ಪ್ರವೇಶ ಪರೀಕ್ಷೆ-2025 (ಜೆಇಇ) ಸೆಷನ್-2ರ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಬೆಂಗಳೂರಿನ ಕಸನವಹಳ್ಳಿಯ ನಾರಾಯಣ ಕೋ-ಕಾವೇರಿ ಭವನ ಶಿಕ್ಷಣ ಸಂಸ್ಥೆಯ ಕುಶಾಗ್ರ ಗುಪ್ತಾ ಶೇ.100ರಷ್ಟು ಅಂಕ ಸಾಧನೆ ಮಾಡಿದ್ದಾರೆ. ದೇಶಾದ್ಯಂತ ಒಟ್ಟು 24 ಅಭ್ಯರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದು, ಇವರಲ್ಲಿ ಕುಶಾಗ್ರ ಕೂಡ ಒಬ್ಬರು.

ಅಲ್ಲದೆ, ಶ್ರೀ ಚೈತನ್ಯ ಎಜುಕೇಷನ್ ಇನ್ಸ್‌ಟಿಟ್ಯೂಷನ್‌ನ ಭಾವೇಶ್ ಜಯಂತಿಯವರು ಅಖಿಲ ಭಾರತ ಮಟ್ಟದಲ್ಲಿ 32ನೇ ರ್‍ಯಾಂಕ್ ಪಡೆದರೆ ಸಹಕಾರ ನಗರದ ನಾರಾಯಣ ಒಲಂಪಿಯಾಡ್‌ ಶಾಲೆಯ ಮಾತಂಗಿ ಪಾರ್ಥಸಾರಥಿ ಮತ್ತು ರತನ್‌ ಎಸ್‌.ಭಗವತಿ ಕ್ರಮವಾಗಿ 81 ಮತ್ತು 84ನೇ ರ್‍ಯಾಂಕ್ ಮತ್ತು ವೇದಾಂತು ಕಾಲೇಜಿನ ಎ.ಧನುಷ್‌ ಕುಮಾರ್‌ 143ನೇ ರ್‍ಯಾಂಕ್ ಗಳಿಸಿದ್ದಾರೆ.

ದಿನಕ್ಕೆ 12 ತಾಸು ಅಧ್ಯಯನ: ಕಾನ್ಪುರ ಮೂಲದ ಕುಶಾಗ್ರ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಐಸಿಎಸ್‌ಸಿ ಪಠ್ಯಕ್ರಮದ 10ನೇ ತರಗತಿ ಪರೀಕ್ಷೆಯಲ್ಲಿ ಶೇ.99.93 ಅಂಕಗಳಿಸಿ ರಾಜ್ಯದ 3ನೇ ಟಾಪರ್‌ ಆಗಿದ್ದರು. ಇವರ ತಂದೆ ಅಮಿತ್‌ ಕುಮಾರ್‌ ಗುಪ್ತಾ ವೃತ್ತಿಯಲ್ಲಿ ಎಂಜಿನಿಯರ್‌ ಆಗಿದ್ದು, ತಾಯಿ ಮಧುಮಿತ ಗುಪ್ತಾ ವೈದ್ಯರಾಗಿದ್ದಾರೆ.ಫಲಿತಾಂಶ ಕುರಿತು ಪ್ರತಿಕ್ರಿಯಿಸಿರುವ ಕುಶಾಗ್ರ, ದಿನಕ್ಕೆ 12-13 ತಾಸು ವ್ಯಾಸಂಗ ಮಾಡುತ್ತಿದ್ದೆ. ಮೊದಲ ಪ್ರಯತ್ನದಲ್ಲಿ ಶೇ.99.93 ಅಂಕ ಬಂದಿದ್ದ ಕಾರಣ 2ನೇ ಪ್ರಯತ್ನ ಮಾಡಿದೆ. ಪತ್ರಿಕೆ ಸವಾಲಿನದ್ದಾಗಿದ್ದು ಗಣಿತ ಕಷ್ಟಕರವಾಗಿತ್ತು. ಆದರೂ, ಉತ್ತಮ ಫಲಿತಾಂಶ ಬಂದಿದೆ ಎಂದಿದ್ದಾರೆ.

ನಿರಂತರ ಅಧ್ಯಯನ ಮತ್ತು ಅಭ್ಯಾಸದಿಂದ ಉತ್ತಮ ಅಂಕ ಸಾಧನೆ ಸಾಧ್ಯ. ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್‌ಗೆ ಪ್ರವೇಶ ಪಡೆಯುವ ಉದ್ದೇಶವಿದೆ. ಅಲ್ಲದೆ, ಜೆಇಇ ಅಡ್ವಾನ್ಸ್‌ಡ್‌ ಪರೀಕ್ಷೆಯನ್ನು ಬರೆಯುತ್ತೇನೆ ಎಂದರು.

ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ (ಎನ್‌ಟಿಎ) ಇದೇ ತಿಂಗಳು ನಡೆಸಿದ್ದ ಜೆಇಇ ಮೇನ್ಸ್‌ ಸೆಷನ್‌-2ರ ಪರೀಕ್ಷೆಗೆ 9,92,350 ಅಭ್ಯರ್ಥಿಗಳು ಹಾಜರಾಗಿದ್ದರು. ದೇಶದ ವಿವಿಧ 300 ನಗರಗಳ 531 ಪರೀಕ್ಷಾ ಕೇಂದ್ರಗಳು, ದುಬೈ, ಸಿಂಗಾಪುರ ಸೇರಿ ಹೊರ ದೇಶದ 15 ನಗರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಕನ್ನಡವೂ ಸೇರಿ ದೇಶದ 13 ಭಾಷೆಗಳಲ್ಲಿ ಪರೀಕ್ಷೆ ನಡೆಯಿತು.

9.92 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಹಾಜರ್‌:

2ನೇ ಆವೃತ್ತಿಯ ಜೆಇಇ ಪರೀಕ್ಷೆಗೆ 9.92 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಹಾಜರಾಗಿದ್ದರು. ಕನ್ನಡ ಸೇರಿ 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ರಾಜಸ್ಥಾನದ 7, ತೆಲಂಗಾಣ, ಉತ್ತರಪ್ರದೇಶ, ಮಹಾರಾಷ್ಟ್ರದ 3, ದೆಹಲಿ ಮತ್ತು ಪಶ್ಚಿಮ ಬಂಗಾಳ, ಗುಜರಾತ್‌ನ 2, ಕರ್ನಾಟಕ ಮತ್ತು ಆಂಧ್ರಪ್ರದೇಶದ ಒಬ್ಬರು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಇವರ ಪೈಕಿ ಇಬ್ಬರು ಮಹಿಳೆಯರು. ಅತ್ತ ಪರಿಕ್ಷಾರ್ಥಿಗಳ ಪೈಕಿ 110 ಮಂದಿ ಪರೀಕ್ಷಾ ಅಕ್ರಮಗಳಲ್ಲಿ ತೊಡಗಿದ್ದು, ಅವರ ಫಲಿತಾಂಶಗಳನ್ನು ತಡೆಹಿಡಿಯಲಾಗಿದೆ.