ಲೋಕಸಭಾ ಚುನಾವಣೆ : ಜೀಪು ಚಾಲಕರಿಗಿಲ್ಲ ಮತದಾನದ ಅವಕಾಶ

| Published : Apr 24 2024, 02:15 AM IST

ಲೋಕಸಭಾ ಚುನಾವಣೆ : ಜೀಪು ಚಾಲಕರಿಗಿಲ್ಲ ಮತದಾನದ ಅವಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗಿನಲ್ಲಿ ಜೀಪು ಚಾಲಕರು ಮತದಾನ ಮಾಡುವುದು ಸಮಸ್ಯೆಯಾಗಿದೆ. ಮತದಾನದ ಹಕ್ಕು ಕಳೆದುಕೊಳ್ಳುವ ಆತಂಕ ಎದುರಾಗಿದೆ.

ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ

ಎಲ್ಲರೂ ಕೂಡ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಹೇಳಲಾಗುತ್ತದೆ. ಇದಕ್ಕಾಗಿ ಜಾಗೃತಿ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗುತ್ತಿದೆ. ಆದರೆ ಕೊಡಗಿನಲ್ಲಿ ಜೀಪು ಚಾಲಕರಿಗೆ ಚುನಾವಣಾ ಸಂದರ್ಭ ಮತದಾನ ಮಾಡುವುದೇ ದೊಡ್ಡ ಸಮಸ್ಯೆಯಾಗಿದ್ದು, ತಮ್ಮ ಮತದಾನದ ಹಕ್ಕು ಕಳೆದುಕೊಳ್ಳುವ ಆತಂಕ ಉಂಟಾಗಿದೆ.

ಏ.26 ರಂದು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಈಗಾಗಲೇ ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕೊಡಗು, ಗುಡ್ಡಗಾಡು ಪ್ರದೇಶವಾಗಿರುವುದರಿಂದ ಎಲ್ಲಾ ಕಡೆಗಳಲ್ಲಿ ಸರ್ಕಾರಿ ಸಾರಿಗೆ ಬಸ್ಸ್ ಗಳು ಸಂಚರಿಸಲು ಸಾಧ್ಯವಿಲ್ಲ. ಇದರಿಂದ ವಿದ್ಯುನ್ಮಾನ ಮತಯಂತ್ರಗಳನ್ನು ಹಾಗೂ ಮತಗಟ್ಟೆ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗಲು ಖಾಸಗಿ ಜೀಪುಗಳನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ ಮತದಾನದ ದಿನ ಜೀಪು ಚಾಲಕರು ವಿವಿಧ ಕಡೆ ಹೋಗುವುದರಿಂದ ಅವರಿಗೆ ತಮ್ಮ ಮತಗಟ್ಟೆಗಳಲ್ಲಿ ಮತದಾನ ಮಾಡುವ ಅವಕಾಶದಿಂದ ವಂಚಿತರಾಗುತ್ತಾರೆ.

ಜಿಲ್ಲೆಯಲ್ಲಿ ಸುಮಾರು ನೂರಾರು ಜೀಪುಗಳನ್ನು ಚುನಾವಣಾ ಕೆಲಸಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬುಧವಾರ ಸಂಜೆಯಿಂದಲೇ ಜೀಪು ಚಾಲಕರನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಮತದಾನದ ದಿನದಂದು ಜೀಪು ಚಾಲಕರು ತಮ್ಮ ಊರಿನಿಂದ ಇತರೆ ಕಡೆಗಳಲ್ಲಿ ಕೆಲಸ ಮಾಡುತ್ತಾರೆ. ಆದ್ದರಿಂದ ಮತದಾನದ ಮಾಡಲು ಆಗದ ಪರಿಸ್ಥಿತಿ ಎದುರಾಗಿದೆ. ಇದರಿಂದ ನಾವು ಮತದಾನ ಮಾಡುವುದು ಹೇಗೆ ಎಂದು ಜೀಪು ಚಾಲಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಅವಕಾಶ ಮಾಡಿಕೊಡಿ : ಸುಮಾರು 125ಕ್ಕೂ ಅಧಿಕ ಸಂಖ್ಯೆಯಲ್ಲಿ ಜೀಪು ಚಾಲಕರು ಚುನಾವಣೆ ಕೆಲಸದಲ್ಲಿ ನಿರತರಾಗುವುದರಿಂದ ಅವರು ಮತದಾನದ ದಿನ ತಮ್ಮ ಹಕ್ಕು ಚಲಾಯಿಸಲು ಆಗುವುದಿಲ್ಲ. ಆದ್ದರಿಂದ ಈ ಬಗ್ಗೆ ಕ್ರಮ ವಹಿಸಿ ಜಿಲ್ಲಾಡಳಿತ ಜೀಪು ಚಾಲಕರಿಗೆ ಮತದಾನ ಮಾಡಲು ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಜೀಪು ಚಾಲಕರು ತಿಳಿಸಿದ್ದಾರೆ.

ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಹೇಳಲಾಗುತ್ತದೆ. ಜೀಪು ಚಾಲಕರು ಬುಧವಾರ ಸಂಜೆಯೇ ಚುನಾವಣಾ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತದೆ. ಇದರಿಂದ ಜೀಪು ಚಾಲಕರು ತಮ್ಮ ಮತಗಟ್ಟೆಯಲ್ಲಿ ಮತದಾನ ಮಾಡಲು ಹೇಗೆ ಸಾಧ್ಯ. ಇದರಿಂದ ನೂರಾರು ಮಂದಿ ತಮ್ಮ ಹಕ್ಕನ್ನು ಕಳೆದುಕೊಳ್ಳುವಂತಾಗಿದೆ. ಆದ್ದರಿಂದ ಜೀಪು ಚಾಲಕರಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮಡಿಕೇರಿ ಜೀಪು ಚಾಲಕರ-ಮಾಲೀಕರ ಸಂಘ ಅಧ್ಯಕ್ಷ ಉಣ್ಣಿಕೃಷ್ಣ ಹೇಳಿದರು.