ಜೀಪ್‌ ರ್‍ಯಾಲಿ : ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ

| Published : Sep 07 2024, 01:30 AM IST

ಜೀಪ್‌ ರ್‍ಯಾಲಿ : ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯ ಮೂಡಿಗೆರೆ ತಾಲೂಕಿನ ಭೈರಾಪುರ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಜೀಪ್‌ ರ್‍ಯಾಲಿ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆಯೋಜಕರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲು ಮಾಡಿದೆ.

ಸಿಸಿಎಫ್‌ ನೇತೃತ್ವದ ತಂಡದಿಂದ ಪರಿಶೀಲನೆ, ನಾಲ್ವರ ವಿರುದ್ಧ ಪ್ರಕರಣ ದಾಖಲು,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯ ಮೂಡಿಗೆರೆ ತಾಲೂಕಿನ ಭೈರಾಪುರ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಜೀಪ್‌ ರ್‍ಯಾಲಿ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆಯೋಜಕರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲು ಮಾಡಿದೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಉಪೇಂದ್ರ ಪ್ರತಾಪ್‌ ಸಿಂಗ್‌, ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿ ಕಾರಿ (ಡಿಎಫ್‌ಒ) ರಮೇಶ್‌ ಬಾಬು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ರ್‍ಯಾಲಿ ನಡೆಸಿರುವ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.

ಕಳೆದ ಆಗಸ್ಟ್‌ 31 ರಂದು ಮೂಡಿಗೆರೆ ತಾಲೂಕಿನ ಭೈರಾಪುರ ವ್ಯಾಪ್ತಿಯ ಎತ್ತಿನಭುಜ, ಬಾಳೂರು ಮೀಸಲು ಅರಣ್ಯದಲ್ಲಿ ಜೀಪ್‌ ರ್‍ಯಾಲಿ ಆಯೋಜನೆ ಮಾಡಲಾಗಿತ್ತು. ಈ ರ್‍ಯಾಲಿಯಲ್ಲಿ ಚಿಕ್ಕಮಗಳೂರು, ಮೂಡಿಗೆರೆ, ಬೆಂಗಳೂರು, ಸಕಲೇಶ ಪುರ, ಹಾಸನ, ತೀರ್ಥಹಳ್ಳಿ ಸೇರಿದಂತೆ ಹಲವೆಡೆಯಿಂದ ಸುಮಾರು 80ಕ್ಕೂ ಹೆಚ್ಚು ಜೀಪ್‌ಗಳು ಪಾಲ್ಗೊಂಡಿದ್ದವು.

ಈ ಪ್ರದೇಶದಲ್ಲಿ ನಿರಂತರವಾಗಿ ಆನೆಗಳ ಸಂಚಾರ ಇದ್ದು, ಇಲ್ಲಿ ಆನೆ ಹಾಗೂ ಮಾನವ ಸಂಘರ್ಷ ನಡೆಯುತ್ತಲೇ ಇದೆ. ಆನೆ ಕಾರಿಡಾರ್‌ ಕೂಡ ಇದ್ದು ಇದರ ಸಮೀಪದಲ್ಲೇ ರ್ಯಾಲಿ ನಡೆಸಿದ್ದರಿಂದ ಕಾಡು ಪ್ರಾಣಿಗಳ ಉಪಟಳ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಹೆಚ್ಚಿದ್ದರಿಂದ ಪರಿಸರವಾದಿಗಳು ಸೇರಿದಂತೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಸಂಬಂಧ ರಾಜ್ಯ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸಿಸಿಎಫ್‌ ದರ್ಜೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಬೇಕು. ರ್‍ಯಾಲಿ ನಡೆದಿರುವುದು ಖಾತ್ರಿಯಾದರೆ ಸಂಬಂಧಪಟ್ಟವರ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ, ಪರಿಸರ ಸಂರಕ್ಷಣಾ ಕಾಯ್ದೆ, ಸಾರ್ವಜನಿಕ ನೆಮ್ಮದಿ ಭಂಗ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಸೂಚನೆ ನೀಡಿದ್ದರು.ನಾಲ್ವರ ವಿರುದ್ಧ ಪ್ರಕರಣ:

ರ್‍ಯಾಲಿ ಆಯೋಜನೆ ಮಾಡಿರುವವರನ್ನು ಅರಣ್ಯ ಇಲಾಖೆಯವರು ಪತ್ತೆ ಹಚ್ಚಿದ್ದಾರೆ. ಗಗನ್‌, ಪ್ರಜ್ವಲ್‌, ಕವನ್‌ ಹಾಗೂ ಧೀರರಾಜ್ ಎಂಬುವವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಸರ್ಕಾರಕ್ಕೆ ವರದಿ ನೀಡಲು ಅರಣ್ಯ ಸಚಿವರು ಸೂಚನೆ ನೀಡಿದ್ದರಿಂದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪ್‌ ಸಿಂಗ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.

ಕಾಫಿ ಎಸ್ಟೇಟ್‌ ಜತೆಗೆ ಅರಣ್ಯ ಪ್ರದೇಶದಲ್ಲೂ ರ್‍ಯಾಲಿಯ ಜೀಪ್‌ಗಳು ಓಡಾಡಿರುವುದು ದೃಢಪಟ್ಟಿದೆ. ಆಯೋಜಕರು ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಅಥವಾ ಜಿಲ್ಲಾಡಳಿತದಿಂದ ಅನುಮತಿ ಪಡೆದುಕೊಂಡಿಲ್ಲ, ಅರಣ್ಯ ಇಲಾಖೆಯಿಂದಲೂ ಅನುಮತಿ ಪಡೆದಿಲ್ಲ, ಹಾಗಾಗಿ ಅತಿಕ್ರಮವಾಗಿ ರ್‍ಯಾಲಿ ನಡೆಸಿರುವುದು ಇಲಾಖೆ ಖಚಿತ ಪಡಿಸಿದೆ.

ರ್‍ಯಾಲಿಯಲ್ಲಿ ಪಾಲ್ಗೊಂಡಿರುವ ವಾಹನಗಳ ಪತ್ತೆ ಕಾರ್ಯದಲ್ಲಿ ಇಲಾಖೆ ಕಾರ್ಯನ್ಮೋಖವಾಗಿದೆ. ಅರಣ್ಯದೊಳಗೆ ಅಕ್ರಮ ವಾಗಿ ರ್‍ಯಾಲಿ ನಡೆಸಿರುವುದು ಹಾಗೂ ಈಗಾಗಲೇ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿರುವ ಮಾಹಿತಿ ಒಳಗೊಂಡ ವರದಿಯನ್ನು ಇಲಾಖೆ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಲು ತಯಾರಿ ಮಾಡಿಕೊಳ್ಳುತ್ತಿದೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.6 ಕೆಸಿಕೆಎಂ 4ಮೂಡಿಗೆರೆ ತಾಲೂಕಿನ ಭೈರಾಪುರ ಅರಣ್ಯದಲ್ಲಿ ಸಾಗುತ್ತಿರುವ ರ್‍ಯಾಲಿಯ ಜೀಪ್‌ಗಳು (ಸಂಗ್ರಹ ಚಿತ್ರ).