ಸಾರಾಂಶ
ಉತ್ಸವ । ಹುಣ್ಣಿಮೆ ದಿನ ನಡೆದ ರಥೋತ್ಸವ । ಬೆಟ್ಟ ಹತ್ತಿ ದೇವರ ದರ್ಶನ ಪಡೆದ ಭಕ್ತರು । ಕೆಂಡ ತುಳಿದು ಹರಕೆ ಸಲ್ಲಿಕೆ
ಕನ್ನಡಪ್ರಭ ವಾರ್ತೆ ಅರಸೀಕೆರೆತಾಲೂಕಿನ ಸುಕ್ಷೇತ್ರ ಯಾದಪುರ ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ ಐತಿಹಾಸಿಕ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಹುಣ್ಣಿಮೆ ದಿನ ಸಹಸ್ರಾರು ಸಂಖ್ಯೆಯ ಭಕ್ತರು ತಂಡೋಪತಂಡವಾಗಿ ಆಗಮಿಸಿ ಬೆಟ್ಟ ಹತ್ತಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಬೆಟ್ಟದ ಮೇಲೆ ಸಂಪ್ರದಾಯದಂತೆ ಧ್ವಜಾರೋಹಣ, ರುದ್ರಾಭಿಷೇಕ, ಅಂಕುರಾರ್ಪಣೆ, ನೂರೊಂದೆಡೆ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ಹಲವು ಬಗೆಯ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಸಂಜೆ ಬಸವೇಶ್ವರ ಸ್ವಾಮಿ ಉತ್ಸವ, ಗದ್ದುಗೆ ಮಂಟಪದಲ್ಲಿ ಸಾಮ್ರಾಜ್ಯೋತ್ಸವ, ಹುಲಿವಾಹನ, ಸೂರ್ಯ ಮಂಡಲೋತ್ಸವ, ಬೆಳ್ಳಿಪಲ್ಲಕ್ಕಿ ಉತ್ಸವ, ಹರಕೆ ತೀರಿಸುವವರಿಗೆ ಬಾಯಿ ಬೀಗ, ಚಂದ್ರಮಂಡಲೋತ್ಸವ, ಅಗ್ನಿಕುಂಡ ಸೇವೆ ಹಾಗೂ ಕೆಂಚಮ್ಮನವರ ಸನ್ನಿಧಿಯಲ್ಲಿ ಜರುಗಿದ ಗುಗ್ಗಳಸೇವೆಯಲ್ಲಿ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡಿದ್ದರು. ಮಕ್ಕಳು, ಯುವಕ-ಯುವತಿಯರು, ಗೃಹಿಣಿಯರು ಉಪವಾಸವಿದ್ದು ಕೆಂಡ ತುಳಿಯುವ ಮೂಲಕ ಹರಕೆ ತೀರಿಸಿದರು.
ಬುಧವಾರ ಬೆಳಿಗ್ಗೆ ಸೂರ್ಯೋದಯಕ್ಕೆ ಸರಿಯಾಗಿ ಗ್ರಾಮದ ಮಧ್ಯಭಾಗದಲ್ಲಿರುವ ದೇಗುಲದಿಂದ ನಾದಸ್ವರ, ಕರಡೇವು ವಾದ್ಯ, ತಮಟೆ ಹಾಗೂ ನಂದಿಧ್ವಜ ಕುಣಿತದೊಂದಿಗೆ ಯಳವಾರೆ ಚಲುವರಾಯಸ್ವಾಮಿ ಸಮ್ಮುಖದಲ್ಲಿ ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿಯನ್ನು ರಥ ಮಂಟಪಕ್ಕೆ ಕರೆ ತರಲಾಯಿತು. ಜನಸ್ತೋಮದ ನಡುವೆ ನವವಧುವಿನಂತೆ ಶೃಂಗರಿಸಲಾಗಿದ್ದ ರಥದ ಮೇಲೆ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸುತ್ತಿದ್ದಂತೆ ಬಾಳೆಹಣ್ಣು, ಎಸೆದು ಭಕ್ತಿ ಸಲ್ಲಿಸಿದರು.ಹಾಸನ, ಚಿಕ್ಕಮಗಳೂರು, ತುಮಕೂರು, ಮೈಸೂರು, ಬೆಂಗಳೂರು, ಸೇರಿ ರಜ್ಯದ ವಿವಿಧೆಡೆಗಳಿಂದ ಜನಸಾಗರವೇ ಹರಿದುಬಂದಿತ್ತು. ಕೊರೋನಾ ಹಾವಳಿಯಿಂದ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ರಥೋತ್ಸವಕ್ಕೆ ವಿಶೇಷ ಮೆರಗು ಬಂದಿತು. ಅಲ್ಲದೇ ಶ್ರೀ ಕ್ಷೇತ್ರದ ಸುತ್ತಮುತ್ತಲಿನ ಹಳ್ಳಿಗಳಾದ ಮಲ್ಲೇನಹಳ್ಳಿ, ಮುರುಂಡಿ, ಮುದ್ದರಂಗನಹಳ್ಳಿ, ಸಂಕೋಡನಹಳ್ಳಿ, ಜವನಹಳ್ಳಿ, ಬೊಮ್ಮನಹಳ್ಳಿ, ಸಿದ್ಧರಹಟ್ಟಿ, ಗೀಜಿಹಳ್ಳಿ, ಗೊಲ್ಲರಹಳ್ಳಿ, ಬೋರನಕೊಪ್ಪಲು, ಹಾರನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳ ಗ್ರಾಮಸ್ಥರು ಪ್ರಸಾದ ವಿನಿಯೋಗಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.ದೇವಾಲಯ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆರಕ್ಷಕ ಇಲಾಖೆ ಬಿಗಿ ಭದ್ರತೆ ಒದಗಿಸಿದ್ದರೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಸೌಕರ್ಯ ಕಲ್ಪಿಸಿತ್ತು.
ಅರಸೀಕೆರೆಯ ಸುಕ್ಷೇತ್ರ ಯಾದಪುರದ ಶ್ರೀಜೇನುಕಲ್ ಸಿದ್ದೇಶ್ವರಸ್ವಾಮಿ ಮಹಾ ರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.