ವಿಶ್ವಶಾಂತಿಗೆ ಹೋರಾಡಿದ ಶಾಂತಿದೂತ ಯೇಸು: ತಹಸೀಲ್ದಾರ್ ಎನ್.ಎ.ಅಹಮ್ಮದ್

| Published : Dec 26 2024, 01:04 AM IST

ಸಾರಾಂಶ

ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಮಹಾನ್ ಪುರುಷನ ಹುಟ್ಟಿದ ದಿನವನ್ನು ಇಂದು ಕ್ರಿಸ್‌ಮಸ್ ಹಬ್ಬವಾಗಿ ವಿಶ್ವದಾದ್ಯಾಂತ ಆಚರಿಸುತ್ತಿರುವುದು ಭಗವಾನ್ ಯೇಸುವಿಗೆ ನೀಡುವ ಗೌರವವಾಗಿದೆ ಎಂದು ತಹಸೀಲ್ದಾರ್ ಎನ್.ಎ.ಅಹಮ್ಮದ್ ತಿಳಿಸಿದರು. ತುರುವೇಕೆರೆಯಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮಾಚರಣೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭವಾರ್ತೆ ತುರುವೇಕೆರೆ

ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಮಹಾನ್ ಪುರುಷನ ಹುಟ್ಟಿದ ದಿನವನ್ನು ಇಂದು ಕ್ರಿಸ್‌ಮಸ್ ಹಬ್ಬವಾಗಿ ವಿಶ್ವದಾದ್ಯಾಂತ ಆಚರಿಸುತ್ತಿರುವುದು ಭಗವಾನ್ ಯೇಸುವಿಗೆ ನೀಡುವ ಗೌರವವಾಗಿದೆ ಎಂದು ತಹಸೀಲ್ದಾರ್ ಎನ್.ಎ.ಅಹಮ್ಮದ್ ತಿಳಿಸಿದರು.ಪಟ್ಟಣದ ಬಾಣಸಂದ್ರ ವೃತ್ತದಲ್ಲಿ ತಾಲೂಕು ಕ್ರೈಸ್ತ ಬಾಂಧವರಿಂದ ತೆರದ ವಾಹನದಲ್ಲಿ ನಡೆದ ಕ್ರಿಸ್‌ಮಸ್ ಹಬ್ಬದ ಸಂಭ್ರಮಾಚರಣೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಜಗತ್ತಿನ ಹಲವು ದೇಶಗಳಲ್ಲಿ ಪರಸ್ಪರ ಕಿತ್ತಾಟದಿಂದ ಯುದ್ಧದ ವಾತಾವರಣ ಸೃಷ್ಟಿಯಾಗಿದ್ದು, ಕ್ರಿಸ್‌ಮಸ್ ಹಬ್ಬದ ಸಂಭ್ರಮಾಚರಣೆಯಲ್ಲಿ ಅಂತಹ ದೇಶಗಳು ಯೇಸುವಿನ ಜೀವನದ ಸಂದೇಶಗಳನ್ನೊಮ್ಮೆ ಮೆಲುಕು ಹಾಕುವ ಅವಶ್ಯಕತೆಯಿದೆ. ಪ್ರಸ್ತುತ ಸಮಾಜಕ್ಕೆ ಯೇಸುವಿನ ಶಾಂತಿ ಮಂತ್ರ ಅತ್ಯವಶ್ಯಕವಾಗಿದೆ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ದುಂಡಾ ಮಾತನಾಡಿ, ನಮ್ಮ ದೇಶ ಬಹು ಸಂಸ್ಕೃತಿಯ, ಬಹು ಧರ್ಮೀಯರು ನೆಲಸಿರುವ ದೇಶವಾಗಿದೆ. ಪ್ರತಿಯೊಬ್ಬ ಭಾರತ ದೇಶದ ಪ್ರಜೆಯೂ ಪರಸ್ಪರರ ಧರ್ಮಗಳನ್ನು ಗೌರವಿಸುವುದನ್ನು ಕಲಿತಾಗ ಮಾತ್ರ ಸಮಾಜದಲ್ಲಿ ಕೋಮು ಭಾವನೆ ಕಡಿಮೆಯಾಗಿ ಶಾಂತಿ ನೆಲೆಯೂರಲು ಸಾಧ್ಯವಾಗುತ್ತದೆ. ಶಾಂತಿ ಹಾಗೂ ಸೇವಾ ಮನೋಭಾವದೊಂದಿಗೆ ಸ್ಥಾಪಿತಗೊಂಡ ಕ್ರೈಸ್ತ ಧರ್ಮ ಜಗತ್ತಿನಾದ್ಯಂತ ಹರಡಿದ್ದು, ವಿಶ್ವದಲ್ಲಿ ಶಾಂತಿ ನೆಲಸಬೇಕಾದರೆ ಪ್ರತಿಯೊಬ್ಬರೂ ಪರಸ್ಪರರನ್ನು ಗೌರವಿಸುವುದನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹಾಗೂ ಸಾರ್ವಜನಿಕರಿಗೆ ಕೇಕ್ ವಿತರಿಸುವ ಮೂಲಕ ಕ್ರಿಸ್ ಮಸ್ ಆಚರಿಸಲಾಯಿತು. ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಟಿ.ಚಿದಾನಂದ್, ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕರಾದ ಬೊಮ್ಮೇನಹಳ್ಳಿ ನಂದಿಶ್, ಮುಖಂಡರಾದ ಲಕ್ಷ್ಮಣ್‌ಗೌಡ, ಫ್ರೂಟ್ ಶಿವರಾಜ್, ವಸಂತ್‌ಕುಮಾರ್, ವಿಕಾಸ್ ಸೇರಿದಂತೆ ನೂರಾರು ಕ್ರೈಸ್ತ ಬಾಂಧವರು ಹಾಜರಿದ್ದರು.

ಪಾವಗಡದಲ್ಲಿ ಕೇಕ್‌ ಕತ್ತರಿಸಿ ಸಂಭ್ರಮಪಾವಗಡ: ತಾಲೂಕಿನಾದ್ಯಂತ ಚರ್ಚ್‌ಗಳಲ್ಲಿ ಸಡಗರ ಸಂಭ್ರಮದಿಂದ ಕ್ರಿಸ್‌ಮಸ್‌ ಹಬ್ಬ ಆಚರಿಸಿ ಕೇಕ್‌ ಕತ್ತರಿಸುವ ಮೂಲಕ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು. ಬುಧವಾರ ಪಟ್ಟಣದ ವೆಂಕಟೇಶ್ವರ ಬಡಾವಣೆಯ ಅಪ್‌ಬಂಡೆ, ಗುಟ್ಟಹಳ್ಳಿಯ ಎಪಿಎಂಸಿ, ಕನ್‌ಮಾನ್‌ ಚೆರ್ಲು ಬಡಾವಣೆಯ ಚರ್ಚ್‌ಗಳಲ್ಲಿ ಕೈಸ್ತ ಧರ್ಮದ ಅಪಾರ ಸಂಖ್ಯೆಯ ಬಂಧುಗಳು ಸೇರಿ ತಮ್ಮ ಆರಾಧ್ಯ ದೇವರಾದ ಸೇರಿ ಯೇಸು ಪ್ರಭುವಿಗೆ ನಮನ ಸಲ್ಲಿಸಿ ಪ್ರಾರ್ಥಿಸಿದರು. ವೈ.ಎನ್‌.ಹೊಸಕೋಟೆ, ಬಿ.ಹೊಸಹಳ್ಳಿ, ತಿಪ್ಪಯ್ಯನದುರ್ಗ, ಕನ್ನಮೇಡಿ, ದೊಮ್ಮತಮರಿ, ಮರಿದಾಸನಹಳ್ಳಿ ಸಾಸಲಕುಂಟೆ ಇತರೆ ಸುತ್ತಮುತ್ತಲ ಗ್ರಾಮದ ಚರ್ಚ್‌ಗಳಲ್ಲಿ ಕ್ರೈಸ್ತರು ಸೇರಿ ಕ್ರಿಸ್ತನ ನಾಮಸ್ಮರಣೆ ಗೀತೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಕೇಕ್‌ ಕತ್ತರಿಸಿ ಸಿಹಿ ಸೇವಿಸಿದ ಬಳಿಕ ಸಾಮೂಹಿಕ ಊಟ ಉಪಚಾರ ಸೇವಿಸಿ ಸಂಭ್ರಮ ವ್ಯಕ್ತಪಡಿಸಿದರು. ರೈತರ ಮಳೆ ಬೆಳೆ ಸೇರಿ ಜನ ಸಾಮಾನ್ಯರ ಶಾಂತಿ ಸಮೃದ್ಧ ಜೀವನಕ್ಕಾಗಿ ದೇವರಲ್ಲಿ ಪ್ರಾರ್ಥಿಸಿ, ತಾಲೂಕಿನ ಸಮಸ್ತ ಜನತೆಗೆ ಕ್ರಿಸ್‌ಮಸ್‌ ಹಬ್ಬದ ಶುಭಾಶಯ ಕೋರಿದರು.