ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ/ಜೇವರ್ಗಿ.
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆಗೇ ಜೇವರ್ಗಿ ತಾಲೂಕು ಮೊದಲ ಸ್ಥಾನ ಪಡೆದು ಗಮನ ಸೆಳೆದಿದೆ.ಜೇವರ್ಗಿಯಲ್ಲಿ 3,371 ಬಾಲಕರು, 3,260 ಬಾಲಕಿಯರು ಸೇರಿದಂತೆ ಒಟ್ಟು 6,631 ಮಕ್ಕಳು ಪರೀಕ್ಷೆ ಬರೆದಿದ್ದರು. ಈ ಪೈಕಿ 1,907 ಬಾಲಕರು, 2,418 ಬಾಲಕರು ಸೇರದಂತೆ 4,325 ಮಕ್ಕಳು ತೇರ್ಗಡೆಯಾಗಿದ್ದಾರೆ.
ಜೇವರ್ಗಿಯಲ್ಲಿ ಪರೀಕ್ಷೆ ಬರೆದು ತೇರ್ಗಡೆಯಾದಂತಹ ಬಾಲಕರ ಶೇಕಡಾವಾರು ಫಲಿತಾಂಶ ಪ್ರಮಾಣ 56 57 ಹಾಗೂ ಬಾಲಕಿಯರ ಶೇಕಡಾವಾರು ಫಲಿತಾಂಶ 74.11 ರಷ್ಟಾಗಿದೆ. ಇದರೊಂದಿಗೆ ಜೇವರ್ಗಿಯ ಒಟ್ಟಾರೆ ಫಲಿತಾಂಶ ಶೇ.65.22ರಷ್ಟು ದಾಖಲಾಗಿದೆ.ಇದು ಕಲಬುರಗಿ ಜಿಲ್ಲೆಯಲ್ಲಿ ಬರುವ ಎಲ್ಲಾ ತಾಲೂಕುಗಳಿಗೆ ಹೋಲಿಕೆ ಮಾಡಿದರೆ ಅತೀ ಹೆಚ್ಚಿನ ಫಲಿತಾಂಶವಾಗಿ ಹೊರಹೊಮ್ಮಿದೆ.
ಎಸ್ಸೆಲ್ಸಿಯಲ್ಲಿ ಜೇವರ್ಗಿಯ ಸಾಧನೆಗೆ ಅಲ್ಲಿನ ಶಾಸಕರು ಹಾಗೂ ಕೆಕೆಆರ್‌ಡಿಬಿ ಅದ್ಯಕ್ಷರಾದ ಡಾ. ಅಜಯ್ ಸಿಂಗ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯದ, ಜಿಲ್ಲೆಯ ಒಟ್ಟಾರೆ ಫಲಿತಾಂಶದಲ್ಲಿ ಕುಸಿತವಾದರೂ ಕೂಡಾ ಜೇವರ್ಗಿ ಮಕ್ಕಳು ನಿರಂತರ ಓದಿನೆಡೆ ಗಮನ ಹರಿಸಿ ಉತ್ತಮ ಸಾಧನೆ ಮಾಜಿದ್ದಾರೆ. ಇದಲ್ಲದೆ ಜೇವರ್ಗಿಯಲ್ಲಿ ಕಳೆದ 2019ರಿಂದ ಧರಂಸಿಂಗ್ ಫೌಂಡೇಷನ್ ಸಹಯೋಗದಲ್ಲಿ ನಡೆಯುತ್ತಿರುವ ಅಕ್ಷರ ಅವಿಷ್ಕಾರ ಮಿಶನ್- 100 ಯೋಜನೆ ಇದೀಗ ನಿಜವಾದಂತಹ ಫಲ ನೀಡುತ್ತಿದೆ ಎಂದು ಹೇಳಿದ್ದಾರೆ.ಜೇವರ್ಗಿಯಲ್ಲಿ ಕೈಗೊಂಡಂತಹ ಅಕ್ಷರ ಅವಿಷ್ಕಾರ ಮಿಶನ್- 100 ಮಾದರಿಯಲ್ಲಿಯೇ ಇಡೀ ಕಲ್ಯಾಣದ 7 ಜಿಲ್ಲೆಗಳಲ್ಲಿಯೂ ಕೆಕೆಆರ್‌ಡಿಬಿ ಎಸ್ಸೆಸ್ಸೆಲ್ಸಿ ಫಲಿತಂಶ ಹೆಚ್ಚಳಕ್ಕೆ ಯೋಜನೆ ರೂಪಿಸಿ ಮುಂದಡಿ ಇಟ್ಟಿದೆ. ಈಗಾಗಲೇ ಕಲಿಕಾ ಆಸರೆ ಪುಸ್ತಕಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಬರುವ ದಿನಗಳಲ್ಲಿ ಈ ಯೋಜನೆಯಡಿಯಲ್ಲಿ ಹೆಚ್ಚಿನ ಸುಧಾರಣೆ ಮಾಡಿ ಮಕ್ಕಳು ಕಲಿಕೆಯ ಯಾವ ಹಂತದಲ್ಲಿ ತೊಂದರೆ ಎದುರಿಸುತ್ತಿದ್ದಾರೆಂಬುದನ್ನು ರಿತು ಆ ಹಂತದಲ್ಲೇ ಮಕ್ಕಳಿಗೆ ಆಸರೆಯಾಗುವ ದಿಶೆಯಲ್ಲಿ ಕೆಕೆಆರ್‌ಡಿಬಿ ಮುಂದುವರಿಯಲಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಕೆಕೆಆರ್‌ಡಿಬಿ ಮುಂದಿನ ವರ್ಷವನ್ನು ಶಿಕ್ಷಣ ವರ್ಷವನ್ನಾಗಿ ಘೋಷಿಸಲಿದೆ. ಹೆಚ್ಚಿನ ಅನುದಾನ ಶಾಲಾ ಶಿಕ್ಷಣ ಮೂಲ ಸವಲತ್ತು, ಫಲಿತಾಂಶ ವೃದ್ದಿಗೆ ಮೀಸಲಿಟ್ಟು ಕೆಲಸ ಮಾಡಲಿದೆ. ಈ ವಿಷಯವಾಗಿ ತಜ್ಞರೊಂದಿಗೆ ಚರ್ಚಿಸಿ ಮುಂದೆ ಸಾಗುತ್ತೇವೆ. ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸೇರಿಕೊಂಡು ಕೆಕೆಆರ್‌ಡಿಬಿ ಬರುವ ಶಿಕ್ಷಣ ವರ್ಷವೂ ಯೋಜನೆ ಜಾರಿಗೆ ತರಲಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.ಯಾವುದೇ ಯೋಜನೆ ಜಾರಿಗೊಂಡು ಫಲ ನೀಡಲು ಕನಿಷ್ಠ 4 ರಿಂದ 5 ವರ್ಷ ಬೇಕು, ಈ ಮಾತಿಗೆ ಜೇವರ್ಗಿಯೇ ಮಾದರಿ. ಹೀಗಾಗಿ ನಾವು ಫಲಿತಾಂಶ ಮೊದಲಿಗೇ ಸರಿ ಬರಲಿಲ್ಲವೆಂದರೆ ನಿರಾಶರಾಗಬೇಕಿಲ್ಲ. ಅನೇಕ ಗಟ್ಟಿ ಕ್ರಮಗಳಿಂದಾಗಿ ನಕಲು ತಡೆಯಲಾಗಿದೆ. ಗುಣಮಟ್ದ ಶಿಕ್ಷಣಕ್ಕೆ ಕಲಬುರಗಿ ಸೇರಿದಂತೆ ಕಲ್ಯಾಣದ ಜಿಲ್ಲೆಗಳು ತೆರೆದುಕೊಳ್ಳುತ್ತಿವೆ. ಈ ಹಂತದಲ್ಲಿ ಇನ್ನೂ ಹೆಚ್ಚಿನ ಯೋಜನೆಗಳೊಂದಿಗೆ ಕೆಕೆಆರ್‌ಡಿಬಿ ಮಕ್ಕಳ ನೇರವಿಗೆ ನಿಲ್ಲಲಿದೆ ಎಂದು ಅಧ್ಯಕ್ಷರಾದ ಡಾ. ಅಜಯ್ ಸಿಂಗ್ ಘೋಷಿಸಿದ್ದಾರೆ.