ಕೂಡ್ಲಿಗಿಯಲ್ಲಿ 2 ಮನೆಗಳಲ್ಲಿ ಚಿನ್ನಾಭರಣ ಕಳ್ಳತನ

| Published : Jan 17 2024, 01:46 AM IST

ಸಾರಾಂಶ

ಈ ಬಗ್ಗೆ ಎರಡು ಪ್ರತ್ಯೇಕ ಘಟನೆಯ ಕಳವು ಪ್ರಕರಣಗಳು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಮಲ್ಲೇಶಪ್ಪ ಮಲ್ಲಾಪುರೆ ಸೇರಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೂಡ್ಲಿಗಿ: ಪಟ್ಟಣದ ಬಾಪೂಜಿ ನಗರದ ಎರಡು ಮನೆಗಳಲ್ಲಿ ಪ್ರತ್ಯೇಕವಾಗಿ ಕಳ್ಳರು ಮನೆ ಬೀಗ ಮುರಿದು ಒಟ್ಟು ₹5.78 ಲಕ್ಷ ಮೌಲ್ಯದ ಆಭರಣಗಳು ಹಾಗೂ ₹1.50 ಲಕ್ಷ ನಗದು ಹಣ ಕಳವು ಮಾಡಿಕೊಂಡು ಹೋಗಿರುವ ಘಟನೆ ನಡೆದಿದ್ದು, ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ಪಟ್ಟಣದ ಬಾಪೂಜಿ ನಗರದ ಹಿರೇಮಠ ಕಾಲೇಜಿನ ಹಿಂಭಾಗದಲ್ಲಿರುವ ಮನೆಗಳಲ್ಲಿ ಹನಸಿ ಜೆಸ್ಕಾಂನಲ್ಲಿ ಜೂನಿಯರ್ ಎಂಜಿನಿಯರ್ ಆಗಿರುವ ಕೆ. ತಿಪ್ಪೆರುದ್ರಪ್ಪ ಅವರ ಮನೆಯಲ್ಲಿ ಯಾರೂ ಇಲ್ಲದ್ದನ್ನು ಕಂಡು ಕಳ್ಳರು ಮನೆಬಾಗಿಲು ಮುರಿದು ಬಂಗಾರದ ಚೈನ್ ಉಂಗುರ ಸೇರಿದಂತೆ ₹2.34 ಲಕ್ಷ ಮೌಲ್ಯದ ಬಂಗಾರದ ಆಭರಣ ಸೇರಿದಂತೆ ₹1 ಲಕ್ಷ ನಗದು ಕಳವು ಮಾಡಿದ್ದಾರೆ.

ಇನ್ನೊಂದು ಘಟನೆಯಲ್ಲಿ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಫಾರ್ಮಸಿ ಆಫೀಸರ್ ಆಗಿರುವ ಹನುಮಂತಪ್ಪ ಅವರ ಮನೆಯಲ್ಲಿ ಕಳ್ಳರು ಮನೆ ಬಾಗಿಲು ಮುರಿದು ಗಾಡ್ರೆಜ್‌ನಲ್ಲಿದ್ದ ₹3.44 ಲಕ್ಷ ಮೌಲ್ಯದ ಬಂಗಾರದ ಆಭರಣ, ₹50 ಸಾವಿರ ನಗದು ಸೇರಿ ಒಟ್ಟು ₹3.94 ಲಕ್ಷ ಮೌಲ್ಯದ ಆಭರಣ ಕಳುವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಈ ಬಗ್ಗೆ ಎರಡು ಪ್ರತ್ಯೇಕ ಘಟನೆಯ ಕಳವು ಪ್ರಕರಣಗಳು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಮಲ್ಲೇಶಪ್ಪ ಮಲ್ಲಾಪುರೆ, ಸಿಪಿಐ ಸುರೇಶ ತಳವಾರ ಹಾಗೂ ಪಿಎಸ್ಐ ಸೇರಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪಪಂ ಹೊರಗುತ್ತಿಗೆ ನೌಕರೆ ಯುವತಿ ಆತ್ಮಹತ್ಯೆ

ಕೊಟ್ಟೂರು: ಇಲ್ಲಿನ ತಾಲೂಕು ಪಂಚಾಯಿತಿ ಹೊರಗುತ್ತಿಗೆ ನೌಕರರಾಗಿದ್ದ ಯುವತಿಯೊಬ್ಬರು ಮಂಗಳವಾರ ತಮ್ಮ ಬಾಡಿಗೆ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೂಪಾ (32) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಪಟ್ಟಣದ ಆಂಜನೇಯ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ವಾಸಿಯಾಗಿದ್ದ ರೂಪಾ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆಂದು ಹೇಳಲಾಗಿದೆ. ಈ ಕಾರಣದಿಂದ ಮಂಗಳವಾರ ಮಧ್ಯಾಹ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದೆ. ಈ ಸಂಬಂಧ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.