ಸಾರಾಂಶ
ಶಿವಾನಂದ ಅಂಗಡಿಕನ್ನಡಪ್ರಭ ವಾರ್ತೆ ಹುಬ್ಬಳ್ಳಿನಿರೀಕ್ಷೆಗೂ ಮೀರಿ ಹಳದಿ ಲೋಹ ಬಂಗಾರದ ಬೆಲೆ ಲಕ್ಷ ರು. ದಾಟಿದ್ದು, ಹೆಣ್ಣುಮಕ್ಕಳ ಮದುವೆಗೆ ಸಿದ್ಧತೆ ಕೈಗೊಂಡಿದ್ದ ಪಾಲಕರಿಗೆ ಒಡವೆಗಳ ಖರೀದಿಯೇ ಅತೀ ವೆಚ್ಚದಾಯಕವಾಗಿ ಪರಿಣಮಿಸಿದ್ದು, ಚಿನ್ನದ ಬದಲು ಹಣ (ವರದಕ್ಷಿಣೆ) ನೀಡಲು ವಧುವಿನ ಪಾಲಕರು ಒಲವು ತೋರುತ್ತಿರುವುದು ಅಲ್ಲಲ್ಲಿ ಕೇಳಿ ಬರುತ್ತಿದೆ.
ಕಳೆದ ಡಿಸೆಂಬರ್‌ನಲ್ಲಿ 24 ಕ್ಯಾರೆಟ್ 10 ಗ್ರಾಂಗೆ ₹78000 ಆಸುಪಾಸಿನಲ್ಲಿ ಇತ್ತು. ಮೂರ್ನಾಲ್ಕು ತಿಂಗಳಲ್ಲಿ ಈ ದರ ₹ 102,200ಗೆ ಏರಿದೆ. ಮಕ್ಕಳ ಮದುವೆ ಯೋಜನೆ ರೂಪಿಸಿದವರು ಈಗ ಬಂಗಾರದ ಖರೀದಿಗೆ ಹೋದಾಗ ಹೌಹಾರುತ್ತಿದ್ದು, ಖರೀದಿಸಲು ಯೋಜಿಸದ ಅರ್ಧದಷ್ಟು ಮಾತ್ರ ಒಡವೆ ಖರೀದಿಸುತ್ತಿದ್ದಾರೆ. ಹೀಗೆ ಚಿನ್ನದ ದರದಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿರುವುದು ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.ಕಳೆಗುಂದಿದ ಮದುವೆಗಳು: ಹೆಣ್ಣು ಹೆತ್ತವರು ಮಗಳ ಮದುವೆ ನಿಶ್ಚಯವಾಗುತ್ತಿದ್ದಂತೆ ಜವಳಿ, ಬಾಂಡೆ ಸಾಮಾನು, ಚಿನ್ನದ ಒಡವೆ ಮಾಡಿಸಲು ಬಂಗಾರ ಖರೀದಿಸುವುದು ಸಾಮಾನ್ಯ. ಇದಕ್ಕಾಗಿ ಲಕ್ಷೋಪಲಕ್ಷ ಹಣ ಖರ್ಚಾಗುತ್ತದೆ. ಚಿನ್ನದ ದರ ಈಗ ಹುಬ್ಬಳ್ಳಿಯಲ್ಲಿ 10 ಗ್ರಾಂಗೆ (22 ಕ್ಯಾರೆಟ್) ₹ 93,000 ಸಾವಿರ ಇದ್ದರೂ ಕೂಡಾ ಆಭರಣ ತಯಾರಿಯ ಮಜೂರಿ ₹11 ಸಾವಿರ ಪ್ಲಸ್ ಜಿಎಸ್‌ಜಿ ₹ 3 ಸಾವಿರ ಸೇರಿ ₹1 ಲಕ್ಷ ಪಾವತಿಸಬೇಕಾಗಿದೆ. ಅಳಿಯನಿಗೆ ಬಂಗಾರ ಆಭರಣ ಕೊಡುವ ಜತೆಗೆ ಮಗಳಿಗೊಂದು ಚಿನ್ನದ ಮಾಂಗಲ್ಯ ಸರ ಇಲ್ಲವೇ ಬೇರೆ ಆಭರಣ ಮಾಡಿಕೊಟ್ಟರಾಯಿತು ಎಂದು ಹಣ ಕೂಡಿಟ್ಟವರಿಗೆ ಆ ಹಣ ಯಾತಕ್ಕೂ ಸಾಲುತ್ತಿಲ್ಲ. ''''''''ಚಿನ್ನಾಭರಣದ ಗೊಡವೆ ಏಕೆ ಇನ್ನಷ್ಟು ಹಣ ತೆಗೆದುಕೊಳ್ಳಿ'''''''' ಎಂದು ವರನ ಕಡೆಯವರಿಗೆ ಮನವೊಲಿಸುತ್ತಿರುವ ಸಂಗತಿಗಳು ಬೆಳಕಿಗೆ ಬರುತ್ತಿವೆ.ಹಾಲ್ ಮಾರ್ಕ್ ಚಿನ್ನದ ಆಭರಣಗಳ ಮಾರಾಟಕ್ಕೆ ಹುಬ್ಬಳ್ಳಿ ಹೆಸರುವಾಸಿ. ಇಲ್ಲಿಯ ದುರ್ಗದಬೈಲನ ಜವಳಿ ಗಲ್ಲಿಯಲ್ಲಿ ಸಾಲು ಸಾಲು ಬಂಗಾರ ಆಭರಣ ಅಂಗಡಿಗಳಿವೆ. ಸರಾಫಗಟ್ಟಿ ಸೇರಿ 150ಕ್ಕೂ ಹೆಚ್ಚು ಜ್ಯುವೆಲ್ಲರಿ ಅಂಗಡಿಗಳಿದ್ದು, 180ಕ್ಕೂ ಹೆಚ್ಚು ವ್ಯಾಪಾರಸ್ಥರು ಜ್ಯುವೆಲ್ಲರಿ ಅಸೋಸಿಯೇಶನ್‌ದಲ್ಲಿ ನೋಂದಣಿ ಮಾಡಿಸಿದ್ದಾರೆ. ಜತೆಗೆ ಸ್ವರ್ಣ ಜ್ಯುವೆಲ್ಲರಿ, ಭೀಮಾ ಗೋಲ್ಡ್, ಸಾಯಿ ಗೋಲ್ಡ್ ಪ್ಯಾಲೇಸ್, ಕಲ್ಯಾಣ ಜ್ಯುವೆಲ್ಲರಿ, ಜೋಯಾಲುಕ್ಕಾಸ್, ಮಲಬಾರ್ ಗೋಲ್ಡ್, ಕೆಜಿಪಿ ಜ್ಯುವೆಲ್ಲರಿ ಹೀಗೆ ಬೃಹತ್ ಬಂಗಾರದ ಆಭರಣ ಮಳಿಗೆಗಳು ಹುಬ್ಬಳ್ಳಿ ಮಾರುಕಟ್ಟೆಗೆ ಗ್ರಾಹಕರನ್ನು ಆಕರ್ಷಿಸುತ್ತಿವೆ. ಬೇರೆ ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬಂಗಾರ ಖರೀದಿಗೆ ಗ್ರಾಹಕರು ಆಗಮಿಸುತ್ತಾರೆ. ಹೀಗಾಗಿ ಮದುವೆ ಹಂಗಾಮಿನಲ್ಲಿ ಜ್ಯುವೆಲ್ಲರಿ ಮಳಿಗೆಗಳು ಗ್ರಾಹಕರಿಂದಲೇ ಗಿಜಿಗುಡುತ್ತಿವೆ. ಆದರೆ ಚಿನ್ನದ ಬೆಲೆ ಏರಿಕೆಯಿಂದಾಗಿ ವ್ಯಾಪಾರಕ್ಕೆ ಶೇ. 30ರಿಂದ 50ರಷ್ಟು ಹೊಡೆತ ಬಿದ್ದಿದೆ ಎನ್ನುತ್ತಾರೆ ವ್ಯಾಪಾರಸ್ಥರು.
ಅಕ್ಷಯ ತೃತೀಯಕ್ಕೂ ಬಿಸಿ: ಕಳೆದ ಬಾರಿ ಅಕ್ಷಯಾ ತೃತೀಯಾ ದಿನದಿಂದು ಇಲ್ಲಿಯ ಸರಾಫಗಟ್ಟಿಯಲ್ಲಿಯೇ 10 ಗ್ರಾಂ ಚಿನ್ನಕ್ಕೆ ₹ 60 ಸಾವಿರ ಇತ್ತು. ಆವತ್ತು 25 ಕೆಜಿಗೂ ಹೆಚ್ಚು ಬಂಗಾರ ಮಾರಿದ್ದೇವೆ. ಆದರೆ, ಈ ಬಾರಿ ಏ. 30ರಂದು ಅಕ್ಷಯ ತೃತೀಯಾಕ್ಕೆ ಇಷ್ಟು ಪ್ರಮಾಣದ ಚಿನ್ನದ ವ್ಯಾಪಾರವಾಗುವುದು ಕಷ್ಟವಿದೆ ಎನ್ನುತ್ತಾರೆ ಇಲ್ಲಿಯ ಸರಾಫಗಟ್ಟಿಯಲ್ಲಿರುವ ಜ್ಯುವೆಲ್ಲರಿ ಅಸೋಸಿಯೇಶನ್ ಅಧ್ಯಕ್ಷ ಪರಶುರಾಮ ಚಿಲ್ಲಾಳ.ದರ ಇಳಿಯುವುದು ಕಷ್ಟ: ದಿನೇ ದಿನೇ ಚಿನ್ನದ ಬೆಲೆ ಏರಿಕೆಯಾಗುತ್ತಿರುವುದರಿಂದ ಗ್ರಾಹಕರು ಖರೀದಿಗೆ ನಿರಾಸಕ್ತಿ ತೋರುತ್ತಿದ್ದು, ಮದುವೆಯಂತಹ ಮಂಗಲ ಕಾರ್ಯಗಳ ಅನಿವಾರ್ಯತೆ ಇದ್ದವರೂ ಮಾತ್ರ ಖರೀದಿಸುತ್ತಿದ್ದಾರೆ. ದರ ಈಗ ಏರುಮುಖವಾಗಿದ್ದು, ಭವಿಷ್ಯದಲ್ಲೂ ಐದಾರು ಸಾವಿರ ರು. ಇಳಿಮುಖವಾಗಬಹುದೇ ಹೊರತು ಪೂರ್ಣ ಪ್ರಮಾಣದಲ್ಲಿ ದರ ಇಳಿಕೆ ಕಷ್ಟ ಎನ್ನುತ್ತಾರೆ ಜ್ಯುವೆಲ್ಲರಿ ಅಂಗಡಿ ಮಾಲೀಕರು.ಅಣ್ಣನ ಮಗಳ ಮದುವೆಗೆ ಈ ಹಿಂದೆ 10 ಗ್ರಾಂಗೆ ₹ 76 ಸಾವಿರಕ್ಕೆ ಖರೀದಿಸಿದ್ದೆವು. ಈಗ ಮತ್ತೆ ಮನೆಯಲ್ಲಿ ಮತ್ತೊಂದು ಮದುವೆ ಬಂದಿದ್ದು, ದರ ಹೆಚ್ಚಳವಾಗುತ್ತಿರುವುದು ಮದುವೆಗೆ ಚಿನ್ನ ಖರೀದಿಯೇ ಅತ್ಯಂತ ವೆಚ್ಚದಾಯಕವಾಗಿ ಪರಿಣಮಿಸಿದೆ ಎಂದು ಗ್ರಾಹಕ ಈಶ್ವರಗೌಡ ಪಾಟೀಲ ಹೇಳುತ್ತಾರೆ.ಬಂಗಾರದ ದರ ಹೆಚ್ಚಾದ ಮೇಲೆ ಹುಬ್ಬಳ್ಳಿ ಸೇರಿದಂತೆ ಬಹುತೇಕ ಮಹಾನಗರಗಳಲ್ಲಿ ಖರೀದಿ ಮೇಲೆ ತೀವ್ರ ಹೊಡೆತ ಬಿದ್ದಿದೆ. ಮದುವೆಗಾಗಿ 40 ಗ್ರಾಂ ಚಿನ್ನ ಖರೀದಿಸುವ ಚಿಂತನೆಯಲ್ಲಿದ್ದವರು 20 ಗ್ರಾಂ ಮಾತ್ರ ಖರೀದಿಸುತ್ತಿದ್ದು, ಮದುವೆ ವರನ ಕಡೆಯವರಿಗೆ ಹಣವನ್ನೇ ಹೆಚ್ಚಿಗೆ ಕೊಡುವುದಾಗಿ ಮನವೊಲಿಸುತ್ತಿದ್ದಾರೆ ಹುಬ್ಬಳ್ಳಿ ಬಾಲಾಜಿ ಚಿನ್ನದ ಅಂಗಡಿ ಮಾಲೀಕ ಸಾಗರ ಹೇಳುತ್ತಾರೆ.