ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಜೆಜಿ ಹಳ್ಳಿ ಗ್ರಾಮ ಪಂಚಾಯಿತಿಯ ಮುಂಭಾಗ ಪಂಚಾಯಿತಿ ಸದಸ್ಯರೇ ಕುಳಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು. ಗ್ರಾಮ ಪಂಚಾಯಿತಿಯ ಮುಂಭಾಗ ಉಪಾಧ್ಯಕ್ಷರು ಸೇರಿದಂತೆ ಹಲವು ಸದಸ್ಯರು ಪ್ರತಿಭಟಿಸಿ ಪಂಚಾಯಿತಿಯ ಅಕ್ರಮಗಳ ಬಗ್ಗೆ ಆರೋಪಿಸಿದರು.ಜೆಜಿ ಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅಕ್ರಮಗಳ ಮತ್ತು ದುರಾಡಳಿತದ ಬಗ್ಗೆ ಇದುವರೆಗೂ ಸುಮಾರು 200-300 ದೂರು ಸಲ್ಲಿಸಿದ್ದೇವೆ. ಆದರೆ ಮೇಲಾಧಿಕಾರಿಗಳು ಇದುವರೆಗೂ ಪಂಚಾಯಿತಿಯ ಅಕ್ರಮಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ಕೋಟಿಗಟ್ಟಲೆ ಅವ್ಯವಹಾರವಾಗಿದ್ದು, ನಕಲಿ ದಾಖಲಾತಿ ಸೃಷ್ಟಿ ಮಾಡಲಾಗಿದೆ ಎಂದು ದೂರಿದರು.
ಕೋರಂ ಇಲ್ಲದೆಯೇ ಸಾಮಾನ್ಯ ಸಭೆಗಳನ್ನು ನಡೆಸಲಾಗುತ್ತದೆ. ಪಾಸ್ ಶೀಟ್ ಕೊಡಿ ಎಂದು ಅಧಿಕೃತವಾಗಿ ಕೇಳಿದರು ಸಹ ನೀಡುವುದಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಲೇಔಟ್ ಗಳಿಗೆ ಅನುಮತಿ, ಮೋಟಾರ್ ಪಂಪ್ ಖರೀದಿಯಲ್ಲಿ ಅವ್ಯವಹಾರ, ಕಂದಾಯ ಕಟ್ಟಿಸಿಕೊಳ್ಳುವ ಬಿಲ್ ಬುಕ್ ಗಳು ಬಂದದ್ದೆಷ್ಟು ಎಂದು ಪ್ರಶ್ನಿಸಿದರು.ಅದರಲ್ಲಿ ಎಷ್ಟು ಲೆಕ್ಕ ಪರಿಶೋಧನೆಯಲ್ಲಿ ಅನುಮೋದನೆಗೊಂಡಿವೆ. ಉಳಿದ ಬಿಲ್ ಬುಕ್ಕುಗಳೆಷ್ಟು ಎಂಬ ಮಾಹಿತಿಯನ್ನು ನೂರು ಬಾರಿ ಕೇಳಿದರು ನೀಡುತ್ತಿಲ್ಲ. ಪ್ರಸ್ತುತ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸದಸ್ಯರ ಹಕ್ಕುಗಳನ್ನೇ ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿದ್ದು, ಕೊನೆಯ ಪ್ರಯತ್ನವೆಂಬಂತೆ ಇಂದು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆಗೆ ಕೂತಿದ್ದೇವೆ ಎಂದು ಸದಸ್ಯರು ವಿವರಿಸಿದರು.
ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸತೀಶ್ ರವರು ಭೇಟಿ ನೀಡಿ ಸದಸ್ಯರು ಕೇಳಿದ ಮಾಹಿತಿ ನೀಡಲು ಆದೇಶಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಮಯಬಾನು, ಮಾಜಿ ಅಧ್ಯಕ್ಷೆ ಜಗದಾಂಬ, ಸದಸ್ಯರಾದ ತಿರುಮಲೇಶ್, ಶಶಿಕಾಂತ್, ಭರತ್, ಅಪ್ಸರಾ ಬಾನು, ಶೌಕತ್ ಅಲಿ, ಮಹಮ್ಮದ್ ಇಲಿಯಾಸ್, ಸಣ್ಣಪ್ಪ, ಜಯಮ್ಮ ಮುಂತಾದವರು ಹಾಜರಿದ್ದರು.
ಪಂಚಾಯಿತಿಯಲ್ಲಿ 20 ಸದಸ್ಯರಿದ್ದಾರೆ. ಆದರೆ ಕೇವಲ 10 ಜನ ಸದಸ್ಯರನ್ನಿಟ್ಟುಕೊಂಡು ಕೋರಂ ಇಲ್ಲದೆ ಸಭೆ ನಡೆಸುತ್ತಾರೆ. ಅಧ್ಯಕ್ಷರಿಗೂ, ಪಿಡಿಓ ಅವರಿಗೂ ಏನೇ ಕೇಳಿದರೂ, ನೂರಾರು ದೂರು ನೀಡುತ್ತೀರಿ, ಹೋಗಿ ಅಲ್ಲಿಯೇ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಎನ್ನುತ್ತಾರೆ. ಪ್ರತಿಭಟನೆ ಮಾಡುತ್ತೇವೆ ಎಂದರೆ ಪ್ರತಿಭಟನೆಗೆ ಇಟ್ಟುಕೊಳ್ಳಲು ಫೋಟೋ ನಾನೇ ಕೊಡಿಸುತ್ತೇನೆ ಎಂದು ಅಧ್ಯಕ್ಷ ದುರಹಂಕಾರದ ಮಾತನಾಡುತ್ತಾರೆ. ಇವರ ದುರಾಡಳಿತ, ದುರಹಂಕಾರ, ಭ್ರಷ್ಟ ಆಡಳಿತಕ್ಕೆ ಕೊನೆ ಬೀಳಲೇಬೇಕು.ತಿರುಮಲೇಶ್ ಗ್ರಾಪಂ ಸದಸ್ಯ ಕಾಟನಾಯಕನಹಳ್ಳಿ