ಜಿಡಗಾ ಸಿದ್ಧರಾಮೇಶ್ವರ ಜಾತ್ರೆ, ರಥೋತ್ಸವ ನಾಳೆ

| Published : Feb 29 2024, 02:04 AM IST

ಸಾರಾಂಶ

ಶಿವಯೋಗಿ ಡಾ. ಮುರುಘರಾಜೇಂದ್ರ ಶ್ರೀಗಳ ಸಾನ್ನಿಧ್ಯದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗಲಿದೆ. ಅಂದು ಬೆಳಗ್ಗೆ 9 ಘಂಟೆಗೆ ಶ್ರೀಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಶ್ರೀಗೆ ಭಕ್ತಿಯ ತುಲಾಭಾರ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಆಳಂದ

ತಾಲೂಕಿನ ಜಿಡಗಾ ಶ್ರೀ ಮಠದ ಶಿವಯೋಗಿ ಸಿದ್ದರಾಮೇಶ್ವರ ಮಹಾಸ್ವಾಮಿಗಳವರ 20ನೇ ಪುಣ್ಯಾರಾಧನೆ ಹಾಗೂ ಜಾತ್ರಾ ಮಹೋತ್ಸವವೂ ಮಾ.1ರಂದು ನಡೆಯಲಿದ್ದು, ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿವೆ.

ಉತ್ಸವ ಈಗಾಗಲೇ ಫೆ.20ರಿಂದ ಶ್ರೀಮಠದಲ್ಲಿ ವಿಶೇಷ ಹಾಗೂ ವೈಭವದಿಂದ ಕಾರ್ಯಕ್ರಮಗಳು ಸಾಗಿ ಬರುತ್ತಿದ್ದು, ಇದರ ಪ್ರಯುಕ್ತವಾಗಿ ನಿತ್ಯ ಸಂಜೆ 6 ಘಂಟೆಗೆ ಹುಬ್ಬಳಿಯ ಶಿವಾಚಾರ್ಯ ಶಾಸ್ತ್ರೀಗಳಿಂದ ಸಿದ್ಧಾರೂಢ ಮಹಾಸ್ವಾಮಿಗಳವರ ಜೀವನ ಚರಿತಾಮೃತವನ್ನು ಆಧರಿಸಿ ಪುರಾಣ ಸಾಗಿದ್ದು, ಮಹಾತ್ಮರಿಂದ ಅನುಭವ ಹಾಗೂ ಶ್ರೀಮಠದ ಅಪ್ಪಾಜಿ ಸಂಗೀತ ಕಲಾಬಳಗದಿಂದ ಸಂಗೀತ ಸೇವೆ ಆಯೋಜಿಸಲಾಗಿದೆ.

ಫೆ.29 ರಂದು ರಾತ್ರಿ 9:00 ಘಂಟೆಗೆ ಶ್ರೀಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಶ್ರೀಗಳವರಿಗೆ ಭಕ್ತಿಯ ತುಲಾಭಾರ ನಡೆಯಲಿದೆ.

ಜಾತ್ರೆ ಅಂಗವಾಗಿ ಮಾ.1ರಂದು ಬೆಳಗಿನ ಜಾವ ಡಾ. ಮುರುಘರಾಜೇಂದ್ರ ಶ್ರೀಗಳಿಂದ ಲೋಕ ವಿಶ್ವಶಾಂತಿಗಾಗಿ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳ ಜಾಗೃತ ಗದ್ದುಗೆ ಮಹಾರುಧ್ರಾಭೀಷೇಕ ಕೈಗೊಂಡ ನಂತರ ಸಿದ್ದರಾಮೇಶ್ವರ ಮಹಾಸ್ವಾಮಿಗಳವರ ಜಾಗೃತ ಗದ್ದುಗೆಗೆ ಸಾವಿರಾರು ಸದ್ಬಕ್ತರ ಭಕ್ತಿಯ ಪುಷ್ಪವೃಷ್ಟಿ ನಡೆಯುವುದು. ನಂತರ 11 ಗಂಟೆಗೆ ಮುಖ್ಯ ವೇದಿಕೆಯ ಮೇಲೆ ಧರ್ಮಸಭೆ ನಡೆಯುವುದು.

ಸಭೆಗೆ ನಾಡಿನ ಅನೇಕ ಮಠಾಧೀಶರು, ಗಣ್ಯರು, ರಾಜಕೀಯ ಮುಖಂಡರು ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ಶ್ರೀಗಳು ಸಿಂಹಾಸನಾರೋಹಣ, ಕಿರೀಟಧಾರಣೆ ಹಾಗೂ ಆಶೀರ್ವಚನ ನಡೆಯುವುದು. ಸಂಜೆ 5 ಘಂಟೆಗೆ ಭವ್ಯ ರಥೋತ್ಸವ ಸಾಗುವುದು ಎಂದು ಶ್ರೀ ಮಠವು ಪ್ರಕಟಣೆಯಲ್ಲಿ ತಿಳಿಸಿದೆ.