ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪುರಸಭೆ ವ್ಯಾಪ್ತಿಯಲ್ಲಿರುವ ವಿವಿಧ ಹಾಗೂ ಮಾರುಕಟ್ಟೆ ಮಳಿಗೆಗಳಿಗೆ ಬಾಕ್ಸ್‌ಗಳನ್ನು ಅಳವಡಿಸಲಾಗುವುದು. ಪುರಸಭೆ ವ್ಯಾಪ್ತಿಯಲ್ಲಿರುವ ೨೩ ವಾರ್ಡ್‌ಗಳ ಕಸ ವಿಲೇವಾರಿ ಮಾಡಲು ₹೭ ಲಕ್ಷ ವೆಚ್ಚದಲ್ಲಿ ೪೦ ಎಚ್ ಪಿ ಟ್ರ್ಯಾಕ್ಟರ್ ಖರೀದಿಸಿ ಕಸ ವಿಲೇವಾರಿ ಮಾಡಲಾಗುವುದು ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.ಇಲ್ಲಿನ ಪುರಸಭೆಯ ಮುಂಭಾಗ ಆಯೋಜಿಸಿದ್ದ ವಿವಿಧ ಕಾಮಗಾರಿಗಳ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಚಾರಿ ಪೊಲೀಸ್ ಇಲಾಖೆಗೆ ಸುಮಾರು ₹೧೧ ಲಕ್ಷ ರುಪಾಯಿ ವೆಚ್ಚದಲ್ಲಿ ೧೦೦ ಬೋರ್ಡ್‌ಗಳನ್ನು ಪೋಲಿಸ್ ಇಲಾಖೆಗೆ ನೀಡಲಾಯಿತು. ಮುಂದಿನ ದಿನಗಳಲ್ಲಿ ಪುರಸಭೆ ವತಿಯಿಂದ ಪೊಲೀಸ್ ಇಲಾಖೆಗೆ ಒಂದು ವಾಹನ, ಎಲ್ಲಾ ವಾರ್ಡ್‌ಗಳಿಗೂ ೮೦ ವೋಲ್ವೇಜ್ ಇರುವ ೧೨೦ ಲೈಟ್‌ಗಳನ್ನು ₹೪.೨ ಲಕ್ಷ ವೆಚ್ಚದಲ್ಲಿ ಎಲ್ಲಾ ವಾರ್ಡಿಗಳಿಗೂ ನೀಡಲಾಗುವುದು. ಪುರಸಭೆಯು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಬೈಪಾಸ್ ರಸ್ತೆ ಪಟ್ಟಣಕ್ಕೆ ಬರುವ ಸರ್ವೀಸ್ ರಸ್ತೆಗೆ ನಾಮಪಲಕ ಆಳವಡಿಸಲಾಗುವುದು. ಪಟ್ಟಣದ ಮಾರೇನಹಳ್ಳಿ ಸಮೀಪ ಇರುವ ಪೌರ ಕಾರ್ಮಿಕರಿಗೆ ೩ ಎಕರೆ ೨೦ ಕುಂಟೆ ಜಾಗದಲ್ಲಿ ಪೌರ ಕಾರ್ಮಿಕರಿಗೆ ನಿವೇಶನ ಕೊಡಲಾಗುವುದು ಎಂದು ತಿಳಿಸಿದರು.
ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಎರಡು ತಿಂಗಳಿಗೆ ಒಮ್ಮೆ ಪರೀಕ್ಷೆ ಮಾಡಿಸಬೇಕು. ಭುವನೇಶ್ವರಿ ತರಕಾರಿ ಮಾರುಕಟ್ಟೆಯನ್ನು ಇನ್ನು ಒಂದೂವರೆ ತಿಂಗಳಲ್ಲಿ ಕೆಲಸ ಮುಗಿಸಿ ವ್ಯಾಪಾರ ಮಾಡಲು ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.ರಸ್ತೆಯ ಪಕ್ಕದಲ್ಲಿ ಕೋಳಿ ಅಂಗಡಿಯವರು ಕಸವನ್ನು ಚೀಲದಲ್ಲಿ ತುಂಬಿ ಇತರರು ರಸ್ತೆಯ ಎರಡು ಬದಿಯಲ್ಲಿ ಕಸ ಎಸೆಯುತ್ತಿದ್ದಾರೆ ಅವರ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು. ಪಟ್ಟಣದಲ್ಲಿ ಬೀದಿ ವ್ಯಾಪಾರಿಗಳಿಗೆ ತೊಂದರೆ ಆಗದಂತೆ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸರ್ಕಲ್ ಇನ್ಸೆಕ್ಟರ್ ರಘುಪತಿಗೆ ತಿಳಿಸಿದರು.
ಪುರಸಭೆಯ ಅಧ್ಯಕ್ಷ ಬನಶಂಕರಿ ರಘು ಮಾತನಾಡಿ, ಪುರಸಭೆಯಿಂದ ಬರುವ ಕಸದಿಂದ ೫೦೦ ಗೊಬ್ಬರ ಮಾಡಿ ಮಾರಾಟ ಮಾಡಲಾಗಿದೆ. ಪಟ್ಟಣದಲ್ಲಿ ಇರುವ ನಿವೇಶನಗಳಲ್ಲಿ ಗಿಡಗಂಟೆಗಳು ಬೆಳೆದು ನಿಂತಿದ್ದು ಅವುಗಳನ್ನು ನಿವೇಶನದವರು ಸ್ವಚ್ಛತೆ ಮಾಡದೆ ಹೋದರೆ ಪುರಸಭೆಯಿಂದ ಸ್ವಚ್ಛತೆ ಮಾಡಿಸಿ ಕಂದಾಯದ ಮೇಲೆ ರಸೀದಿ ಹಾಕಲಾಗುವುದು. ₹೩೦ ಲಕ್ಷ ವೆಚ್ಚದಲ್ಲಿ ಸಣ್ಣ ಹಿಟಾಚಿಯನ್ನು ತರಿಸಲಾಗುವುದು ಎಂದು ತಿಳಿಸಿದರು.ಪುರಸಭೆಯ ಮುಖ್ಯ ಅಧಿಕಾರಿ ಹೇಮಂತ್ ಕುಮಾರ್, ಉಪಾಧ್ಯಕ್ಷರಾದ ಲಕ್ಷ್ಮಿ, ಸುರೇಶ್, ಪುರಸಭಾ ಮಾಜಿ ಅಧ್ಯಕ್ಷ ರಾದ ನವೀನ್ ಮತ್ತು ರೇಖಾ ಅನಿಲ್ ಕುಮಾರ್, ಉಪಾಧ್ಯಕ್ಷರಾದ ಯೋಗೇಶ್, ಧರಣೇಶ್ ಗಣೇಶ್ ಮೋಹನ್ ಕುಮಾರ್ ಎಪಿಎಂಸಿ ಸದಸ್ಯರಾದ ಅನಿಲ್ ಕುಮಾರ್, ಸದಸ್ಯರಾದ ರವಿ, ಪುರಸಭೆಯ ನೌಕರರಾದ ಮ್ಯಾನೇಜರ್ ಶಾರದಮ್ಮ, ಆರೋಗ್ಯ ಅಧಿಕಾರಿ ರಾಜು, ಕಾವ್ಯ ಉಪಸ್ಥಿತರಿದ್ದರು.