ಜಿಂದಾಲ್‌ ಕಾರ್ಖಾನೆ ಸಾವು; ನ್ಯಾಯಾಂಗ ತನಿಖೆಯಾಗಲಿ

| Published : May 18 2024, 12:30 AM IST

ಜಿಂದಾಲ್‌ ಕಾರ್ಖಾನೆ ಸಾವು; ನ್ಯಾಯಾಂಗ ತನಿಖೆಯಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಂದಾಲ್ ವ್ಯಾಪ್ತಿಯಲ್ಲಿ ಸಂಭವಿಸುವ ಅಪಘಾತ, ಸಾವು ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿದಲ್ಲಿ ಮಾತ್ರ ಜಿಂದಾಲ್‌ನ ಸ್ಟೀಲ್ ಕಾರ್ಖಾನೆಯ ನಿಜಬಣ್ಣ ಬಯಲಾಗುತ್ತದೆ.

ಬಳ್ಳಾರಿ: ಜಿಂದಾಲ್‌ ಸ್ಟೀಲ್ ಕಾರ್ಖಾನೆಯಲ್ಲಿ ಈಚೆಗೆ ಸಂಭವಿಸಿದ ದುರಂತದಲ್ಲಿನ ಮೂವರು ಎಂಜಿನಿಯರ್‌ ಸಾವು ಸೇರಿದಂತೆ ಕಳೆದ 10 ವರ್ಷಗಳಲ್ಲಿ ಜಿಂದಾಲ್‌ನಲ್ಲಾದ ಸಾವು ಪ್ರಕರಣಗಳನ್ನು ನಿವೃತ್ತ ನ್ಯಾಯಾಧೀಶ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಸಿಐಟಿಯು ಕಾರ್ಮಿಕ ಸಂಘಟನೆ, ಕರ್ನಾಟಕ ಪ್ರಾಂತ ರೈತ ಸಂಘ, ಎಐವೈಎಫ್‌ ಸಂಘಟನೆಗಳ ಪದಾಧಿಕಾರಿಗಳು, ಜಿಂದಾಲ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಜೀವ ಸುರಕ್ಷತೆ ಇಲ್ಲ. ಅನೇಕ ಸಾವು-ನೋವು ಸಂಭವಿಸುತ್ತಿವೆ. ಕಾರ್ಮಿಕ ಹಕ್ಕುಗಳನ್ನು ದಮನಿಸಲಾಗಿದೆ. ಗುಲಾಮರಂತೆ ದುಡಿಸಿಕೊಳ್ಳಲಾಗುತ್ತಿದೆ. ಕಾರ್ಮಿಕರು ಸಂಘಟನೆ ಮಾಡಿಕೊಂಡರೆ ಕೆಲಸದಿಂದ ವಜಾ ಮಾಡಲಾಗುತ್ತಿದೆ. ಜಿಂದಾಲ್ ವ್ಯಾಪ್ತಿಯಲ್ಲಿ ಸಂಭವಿಸುವ ಅಪಘಾತ, ಸಾವು ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿದಲ್ಲಿ ಮಾತ್ರ ಜಿಂದಾಲ್‌ನ ಸ್ಟೀಲ್ ಕಾರ್ಖಾನೆಯ ನಿಜಬಣ್ಣ ಬಯಲಾಗುತ್ತದೆ. ಕಾರ್ಮಿಕರನ್ನು ಹೇಗೆ ನೋಡಿಕೊಳ್ಳಲಾಗುತ್ತದೆ ಎಂಬುದು ಗೊತ್ತಾಗುತ್ತದೆ ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಸತ್ಯಬಾಬು ಮಾತನಾಡಿ, ವಿಜಯನಗರ ಉಕ್ಕಿನ ಕಾರ್ಖಾನೆಯಿಂದ ಈ ಭಾಗದ ಜನರ ಬದುಕು ಹಸನಾಗುತ್ತದೆ. ಸ್ಥಳೀಯರಿಗೆ ಉದ್ಯೋಗ ಸಿಗುತ್ತದೆ. ಜನರ ಬವಣೆಗಳು ನಿವಾರಣೆಯಾಗುತ್ತವೆ ಎಂದು ಭಾವಿಸಲಾಗಿತ್ತು. ಹಾಗಾಗಿ ರೈತರ ಕೃಷಿ ಭೂಮಿಯನ್ನು ಕಾರ್ಖಾನೆಗೆ ನೀಡಲಾಯಿತು. ಆದರೆ, ಜಿಂದಾಲ್ ಸ್ಥಳೀಯರಿಗೆ ಆಶಾಕಿರಣವಾಗುವ ಬದಲು ಸಾವಿನ ಕೂಪವಾಗಿ ಬದಲಾಗಿದೆ ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್.ಶಿವಶಂಕರ್ ಮಾತನಾಡಿ, ಕೈಗಾರಿಕೆಯ ಕಲುಷಿತ ನೀರಿನಿಂದಾಗಿ ಅಪಾರ ಪ್ರಮಾಣದ ಕೃಷಿ ವಲಯ ನಾಶವಾಗಿ ರೈತರು ಬೆಳೆಗಳಿಲ್ಲದೆ ತತ್ತರಿಸುವಂತಾಗಿದೆ. ಕಾರ್ಖಾನೆಯ ಸುತ್ತ ಹತ್ತಾರು ಹಳ್ಳಿಗಳ ಜನರ ಆರೋಗ್ಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಜೀವಭಯದಲ್ಲಿಯೇ ಕಾರ್ಮಿಕರು ನಿತ್ಯ ಕಾರ್ಯ ನಿರ್ವಹಿಸುವಂತಾಗಿದೆ. ಕೈಗಾರಿಕೆಯ ಮಾಲೀಕರ ಪ್ರಭಾವದಿಂದಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಪರಿಸರ ಇಲಾಖೆ, ಕೈಗಾರಿಕೆ ಸುರಕ್ಷತೆ ವಿಭಾಗಗಳು ನಿಷ್ಕ್ರಿಯವಾಗಿವೆ ಎಂದು ದೂರಿದರು.

ಜಿಂದಾಲ್‌ ನಲ್ಲಿ ಈಚೆಗೆ ಜರುಗಿದ ಅವಘಡದಲ್ಲಿ ಮೂರು ಎಂಜಿನಿಯರ್‌ಗಳು ಸಾವನ್ನಪ್ಪಿದರೂ ಇದೇ ಜಿಲ್ಲೆಯವರಾದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸ್ಥಳಕ್ಕೆ ಭೇಟಿ ನೀಡುವ ಸೌಜನ್ಯ ತೋರಿಸಲಿಲ್ಲ. ದೇಶದ ಆರ್ಥಿಕತೆ, ಕಾರ್ಮಿಕರ ಸುರಕ್ಷತೆ ಬಗ್ಗೆ ಟಿವಿಗಳಲ್ಲಿ ಮಾತನಾಡುವ ಸಂತೋಷ್ ಲಾಡ್‌ ಅವರಿಗೆ ತನ್ನದೇ ಜಿಲ್ಲೆಯ ಕಾರ್ಮಿಕರ ಸಮಸ್ಯೆಗಳು ಗೊತ್ತಿಲ್ಲವೇ ? ಎಂದು ಪ್ರಶ್ನಿಸಿದರು.

ಉಸ್ತುವಾರಿ ಸಚಿವ ಬಿ.ನಾಗೇಂದ್ರ, ಶಾಸಕ ಈ.ತುಕಾರಾಂ ಸೇರಿದಂತೆ ಯಾವುದೇ ಜನಪ್ರತಿನಿಧಿಗಳು ಸಾವನ್ನಪ್ಪಿದ ನೌಕರರ ಮನೆಗೆ ತೆರಳಿ ಸಾಂತ್ವನ ಹೇಳುವ ಸೌಜನ್ಯ ತೋರಿಸಲಿಲ್ಲ ಎಂದು ಟೀಕಿಸಿದರು.

ಜನವಾದಿ ಮಹಿಳಾ ಸಂಘಟನೆಯ ಚಂದ್ರಕುಮಾರಿ, ಸಿಐಟಿಯು ಕಾರ್ಮಿಕ ಸಂಘಟನೆಯ ಜೆ.ಎಂ. ಚನ್ನಬಸಯ್ಯ, ರಾಣಿ ಎಲಿಜಬತ್, ಸೋಮಪ್ಪ, ಎರಿಸ್ವಾಮಿ, ತಿಪ್ಪೇಸ್ವಾಮಿ, ಬೈಲಾ ಹನುಮಪ್ಪ ಹಾಗೂ ಜಿ.ಎನ್.ಎರಿಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.

ಮೇ 20ರಂದು ಜಿಂದಾಲ್ ಕಾರ್ಖಾನೆ ಎದುರು ಪ್ರತಿಭಟನೆ: ಜಿಂದಾಲ್‌ನಲ್ಲಿ ಮೂವರು ಎಂಜಿನಿಯರ್‌ಗಳ ಸಾವು ಖಂಡಿಸಿ ಕಾರ್ಮಿಕರಿಗೆ ಸುರಕ್ಷತೆ ಒದಗಿಸಬೇಕು ಎಂದು ಆಗ್ರಹಿಸಿ ಮೇ 20ರಂದು ಜಿಂದಾಲ್ ಕಾರ್ಖಾನೆಯ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಹಾಗೂ ಕೆಪಿಆರ್‌ಎಸ್ ಮುಖಂಡರು ತಿಳಿಸಿದರು. ಇನ್ನು ಮುಂದೆ ಜಿಂದಾಲ್ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು. ಜಿಂದಾಲ್ ವಿರುದ್ಧ ಅಭಿಯಾನ ಶುರುಗೊಳಿಸಲಾಗುವುದು. ಜಿಲ್ಲೆಯ ಕಾರ್ಮಿಕರನ್ನು ಈ ಹೋರಾಟಕ್ಕೆ ಅಣಿಗೊಳಿಸಲಾಗುವುದು ಎಂದು ತಿಳಿಸಿದರು.