ಮಾನವೀಯ ಸೇವೆಗೆ ಜಿತೇಂದ್ರ ಮಜೇಥಿಯಾ ಮಾದರಿ

| Published : Jun 17 2024, 01:35 AM IST

ಸಾರಾಂಶ

ಹುಬ್ಬಳ್ಳಿಯ ಮೂರುಸಾವಿರ ಮಠದ ಸಭಾಭವನದಲ್ಲಿ ಭಾನುವಾರ ಮಜೇಥಿಯಾ ಫೌಂಡೇಶನ್ ಆಶ್ರಯದಲ್ಲಿ ಕೃತಕ ಕೈ ಕಾಲು ಜೋಡಣಾ ಶಿಬಿರವನ್ನು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಶ್ರೀಧರ ದಂಡಪ್ಪನವರ ಉದ್ಘಾಟಿಸಿದರು.

ಹುಬ್ಬಳ್ಳಿ: ಮಜೇಥಿಯಾ ಫೌಂಡೇಶನ್ ವತಿಯಿಂದ ಜಿತೇಂದ್ರ ಮಜೇಥಿಯಾ ಅವರು ದಿನನಿತ್ಯ ಸಮಾಜ ಸೇವೆ ಮಾಡುವುದರೊಂದಿಗೆ ದಿವ್ಯಾಂಗ, ವಿಶೇಷಚೇತನರು, ವಿಕಲಾಂಗದವರಿಗೆ, ಬಡ ಜನತೆಗೆ ಸೇವೆ ಸಲ್ಲಿಸುವುದರೊಂದಿಗೆ ಮಾನವೀಯ ಮೌಲ್ಯ ಎತ್ತಿ ಹಿಡಿದಿದ್ದಾರೆ ಎಂದು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಶ್ರೀಧರ ದಂಡಪ್ಪನವರ ಹೇಳಿದರು.

ಅವರು ಇಲ್ಲಿನ ಮೂರುಸಾವಿರ ಮಠದ ಸಭಾಭವನದಲ್ಲಿ ಭಾನುವಾರ ಮಜೇಥಿಯಾ ಫೌಂಡೇಶನ್ ಆಶ್ರಯದಲ್ಲಿ ಅಪಘಾತ ಅಥವಾ ಇನ್ನಾವುದೇ ವೈದ್ಯಕೀಯ ಕಾರಣಗಳಿಂದಾಗಿ ಕೈ- ಕಾಲುಗಳನ್ನು ಕಳೆದುಕೊಂಡವರಿಗೆ ಹಮ್ಮಿಕೊಳ್ಳಲಾಗಿದ್ದ ಕೃತಕ ಕೈ ಕಾಲು ಜೋಡಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕೈಕಾಲು ಕಳೆದುಕೊಂಡವರು ತಮ್ಮ ಬದುಕಿನ ಬಗ್ಗೆ ತುಂಬಾ ಕಷ್ಟವನ್ನು ಅನುಭವಿಸುತ್ತಾರೆ. ದಿನನಿತ್ಯ ಪರಾಲಂಬಿಯಾಗಿರುತ್ತಾರೆ. ಅಂಥವರನ್ನು ಕಂಡ ಮಜೇಥಿಯಾ ಅವರು ಬೇರೆಯವರ ಮೇಲೆ ಅವಲಂಬಿತರಾಗಿರಬಾರದು, ಅವರ ಬದುಕನ್ನು ಅವರೇ ಸುಂದರಗೊಳಿಸಬೇಕು, ತಮ್ಮ ಕಾಯಕ, ದಿನನಿತ್ಯ ಚಟುವಟಿಕೆ ತಾವೇ ಮಾಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಮಜೇಥಿಯಾ ಅವರು ಕೃತಕ ಕೈಕಾಲು ಜೋಡಣೆಗೆ ಮುಂದಾಗಿರುವುದು ಶ್ಲಾಘನೀಯ ಕಾರ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಜೇಥಿಯಾ ಫೌಂಡೇಶನ್ ಚೇರ್‌ಮನ್‌ ಜಿತೇಂದ್ರ ಮಜೇಥಿಯಾ ಮಾತನಾಡಿ, ಬಡವರಿಗಾಗಿ, ವಿಶೇಷ ಚೇತನರಿಗಾಗಿ, ದಿವ್ಯಾಂಗದವರಿಗೆ ಮಜೇಥಿಯಾ ಫೌಂಡೇಶನ್‌ದಿಂದ ಸದಾ ಸೇವೆ ಮಾಡುವ ಸಂಕಲ್ಪ ಹೊಂದಲಾಗಿದೆ. ಸಾರ್ವಜನಿಕರ ಆಶೀರ್ವಾದದಿಂದಲೇ ಇಷ್ಟೆಲ್ಲ ಕಾರ್ಯ ಮಾಡಲು ಪ್ರೇರಣೆಯಾಗಿದೆ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಜಿತೇಂದ್ರ ಮಜೇಥಿಯಾ ಅವರು ಮಾಡುತ್ತಿರುವ ಸೇವೆ ಅರ್ಥಪೂರ್ಣವಾಗಿದ್ದು, ಅವರ ಸೇವೆ ಇತರರಿಗೆ ಮಾರ್ಗದರ್ಶನವಾಗಿದೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಅನ್ವರ ಮುಧೋಳ, ಡಾ. ಕೆ. ರಮೇಶಬಾಬು, ಕಶ್ಯಪ್ ಮಜೇಥಿಯಾ, ಡಾ. ಜ್ಯೋತಿ ಕಾಚಾಪುರ, ಡಾ. ವಿ.ಬಿ. ನಿಟಾಲಿ, ಎಚ್‌.ಆರ್‌. ಪ್ರಹ್ಲಾದರಾವ್, ಅಮೃತಭಾಯ್ ಪಟೇಲ, ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ದಯಾ ಪಟೇಲ್ ಮಾತನಾಡಿದರು.

ಹುಬ್ಬಳ್ಳಿಯ ಯುವರ್‌ ಫುಟ್‌ ಇನ್‌ ಯುವರ್‌ ಸಂಸ್ಥೆಯ ಮುಖ್ಯಸ್ಥ ಶಂಕರ ಕಾಮಟೆ ಹಾಗೂ ಅವರ ಸಂಗಡಿಗರು ಸುಮಾರು 85 ಅಂಗವಿಕಲರ ಅಳತೆ ತೆಗೆದುಕೊಂಡರು. ಸುನೀಲ ಕುಕನೂರ ಸ್ವಾಗತಿಸಿದರು. ರೇಖಾ ಆಪ್ಟೆ ಕಾರ್ಯಕ್ರಮ ನಿರೂಪಿಸಿದರು. ನವೀನ ಮಾಲಿನ ವಂದಿಸಿದರು.