ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಬರಗಾಲ ಹಿನ್ನೆಲೆಯಲ್ಲಿ ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಹಂಸಭಾವಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ವಾಟರ್ ಪ್ಲಾಂಟ್ ಜಾಗೆ ಸಮಸ್ಯೆಯನ್ನು ತ್ವರಿತವಾಗಿ ಇತ್ಯರ್ಥಪಡಿಸಿ ಒಂದು ವಾರದೊಳಗೆ ಕೆಲಸ ಆರಂಭಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ವಿಶಾಲ್ ಆರ್. ಸೂಚನೆ ನೀಡಿದರು.ವಿಡಿಯೋ ಸಂವಾದದ ಮೂಲಕ ಕುಡಿಯುವ ನೀರಿನ ಯೋಜನೆಗಳ ಪ್ರಗತಿ ಹಾಗೂ ವಿವಿಧ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿಯ ಮಾಹಿತಿ ಪಡೆದ ಅವರು, ವಾಟರ್ ಪ್ಲಾಂಟ್ ಸ್ಥಾಪನೆಗೆ ಜಾಗದ ಸಮಸ್ಯೆ ಕುರಿತಾಗಿ ಸ್ಥಳೀಯರೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಿ. ವಿಳಂಬದಿಂದ ಯಾರಿಗೂ ಸುಖವಿಲ್ಲ. ಕುಡಿಯುವ ನೀರಿನ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸುವುದು ಅಗತ್ಯವಾಗಿದೆ ಎಂದರು.
ಉದ್ಯೋಗ ಖಾತ್ರಿ ಕಾಮಗಾರಿಗಳು, ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ, ಸ್ವಚ್ಛ ಭಾರತ್ ಮಿಷನ್, ಲಿಂಕ್ ಡಾಕ್ಯುಮೆಂಟ್ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ತೋಟಗಾರಿಕೆ, ಕೃಷಿ ಒಳಗೊಂಡಂತೆ ವಿವಿಧ ನಿಗಮಗಳ ಫಲಾನುಭವಿ ಆಧಾರಿತ ಯೋಜನೆಗಳ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಫಲಾನುಭವಿಗಳ ಆಯ್ಕೆ ಮಾಡಿ ಸೌಲಭ್ಯಗಳ ವಿತರಣೆಗೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ ಅವರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಜಲಜೀವನ್ ಮಿಷನ್ ಯೋಜನೆ, ಉದ್ಯೋಗ ಖಾತ್ರ ಹಾಗೂ ಸ್ವಚ್ಛ ಭಾರತ ಮಿಷನ್ ಕಾಮಗಾರಿಯ ಪ್ರಗತಿಯ ಮಾಹಿತಿ ನೀಡಿದರು.
ಲಿಂಕ್ ಡಾಕ್ಯುಮೆಂಟ್‌ನಲ್ಲಿ ೨೫೩ ಕಾಮಗಾರಿಗಳನ್ನು ಕೈಗೊಂಡಿದ್ದು, ೧೧೦ ಕಾಮಗಾರಿಗಳು ಪೂರ್ಣಗೊಂಡಿವೆ. ೧೪೩ ಕಾಮಗಾರಿಗಳು ಪ್ರಗತಿಯಲ್ಲಿವೆ. ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಅನುದಾನದಡಿ ೨೯೬ ಕಾಮಗಾರಿ ಕೈಗೊಂಡಿದ್ದು, ಈ ಪೈಕಿ ೯೨ ಕಾಮಗಾರಿಗಳು ಪೂರ್ಣಗೊಂಡಿವೆ. ೨೦೪ ಕಾಮಗಾರಿಗಳು ಪ್ರಗತಿಯಲ್ಲಿವೆ. ಬಾಕಿ ಕಾಮಗಾರಿಗಳ ಪೈಕಿ ಫೆಬ್ರವರಿ ಅಂತ್ಯಕ್ಕೆ ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗುರಿ ನಿಗದಿಪಡಿಸಿದೆ ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಎಸ್.ಜಿ. ಮುಳ್ಳಳ್ಳಿ, ಜಿಪಂ ಮುಖ್ಯ ಯೋಜನಾಧಿಕಾರಿ ಎಚ್.ವೈ.ಮೀಸೆ, ಗ್ರಾಮೀಣ ನೀರು ಸರಬರಾಜು ಕಾರ್ಯ ನಿರ್ವಾಹಕ ಅಭಿಯಂತರ ನಾಯಕ್, ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಅಂತರವಳ್ಳಿ, ತೋಟಗಾರಿಕೆ ಉಪನಿರ್ದೇಶಕ ಪ್ರದೀಪ ಹಾಗೂ ವಿವಿಧ ತಾಲೂಕುಗಳಿಂದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ತಾಪಂ ಕಾರ್ಯನಿರ್ವಾಹಣಾಧಿಕಾರಿಗಳು ಭಾಗವಹಿಸಿದ್ದರು.