ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಔರಾದ್‌ನಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುತ್ತಿವೆ. ಬಹುತೇಕ ಇಲಾಖೆಗಳಲ್ಲಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಇದರಿಂದಾಗಿ ನನ್ನ ಹೆಸರು ಕೆಡುತ್ತಿದೆ. 200 ಕೋಟಿ ಅನುದಾನದ ಯೋಜನೆ ಹಳ್ಳ ಹಿಡಿದಿದೆ ಅಧಿಕಾರಿಗಳು ಕೆಲಸ ಮಾಡಿ ಇಲ್ಲವೇ ಬಿಟ್ಟು ಹೋಗಿ ಎಂದು ಶಾಸಕರು ಕೆಂಡಾಮಂಡಲರಾದರು.

ಕನ್ನಡಪ್ರಭ ವಾರ್ತೆ ಔರಾದ್‌

ಔರಾದ್‌ನಲ್ಲಿ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ್‌ ಮಿಷನ್‌ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವರೂ ಆದ ಔರಾದ್‌ ಶಾಸಕ ಪ್ರಭು ಚವ್ಹಾಣ್‌ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ತಾಪಂ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತಂತೆ ಅಧಿಕಾರಿಗಳಿಂದ ಶಾಸಕರು ಮಾಹಿತಿ ಪಡೆದರು.

ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಉದ್ದೇಶದಿಂದ ಜಲ ಜೀವನ್‌ ಮಿಷನ್‌ ಯೋಜನೆಯಡಿ ಸುಮಾರು 200 ಕೋಟಿ ರು. ಅನುದಾನ ತಂದು ಎಲ್ಲ ಗ್ರಾಮಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಅಧಿಕಾರಿಗಳ ಕಾರಣದಿಂದಾಗಿ ಯೋಜನೆ ಸಂಪೂರ್ಣ ವಿಫಲಗೊಂಡಿದೆ ಎಂದು ಬೇಸರ ಹೊರಹಾಕಿದರು.

ಪಿಡಿಒಗಳು ಜೆಜೆಎಂ ಯೋಜನೆಯಡಿ ಮನೆ-ಮನೆಗೆ ಭೇಟಿ ನೀಡಿ ನೀರು ಬರುತ್ತಿರುವ ಬಗ್ಗೆ ಖಚಿತವಾದ ನಂತರವೇ ಕಾಮಗಾರಿ ಅಧೀನಕ್ಕೆ ಪಡೆಯಬೇಕು. ಈ ಬಗ್ಗೆ ಎಲ್ಲ ಪಿಡಿಒಗಳಿಗೆ ಸ್ಪಷ್ಟ ಸೂಚನೆ ನೀಡಬೇಕೆಂದು ತಾಪಂ ಇಒಗಳಿಗೆ ಶಾಸಕ ಪ್ರಭು ಚವ್ಹಾಣ್‌ ಸೂಚನೆ ನೀಡಿದರು.

ಔರಾದ್‌ನಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತ:

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಔರಾದ್‌ನಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುತ್ತಿವೆ. ಬಹುತೇಕ ಇಲಾಖೆಗಳಲ್ಲಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಇದರಿಂದಾಗಿ ನನ್ನ ಹೆಸರು ಕೆಡುತ್ತಿದೆ. ಇಷ್ಟವಿದ್ದರೆ ಮನಸ್ಫೂರ್ತಿಯಿಂದ ಕೆಲಸ ಮಾಡಿ, ಇಲ್ಲ ಬಿಟ್ಟು ಹೋಗಬೇಕೆಂದು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.

ಸಭೆ ಆರಂಭವಾಗುತ್ತಿದ್ದಂತೆ ಅಧಿಕಾರಿಗಳ ಹಾಜರಾತಿ ವಿವರಣೆ ಪಡೆದರು. ಈ ವೇಳೆ ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಕೆಲವು ಅಧಿಕಾರಿಗಳು ಸಭೆಗೆ ಆಗಮಿಸದೆ ಇರುವುದರಿಂದ ತಾಪಂ ಅಧಿಕಾರಿಗಳ ವಿರುದ್ಧ ಕೋಪಗೊಂಡರು. ಕಾಟಾಚಾರಕ್ಕಾಗಿ ಸಭೆ ನಡೆದರೆ ಏನು ಪ್ರಯೋಜನ? ನಾನು ವೈಯಕ್ತಿಕ ಕೆಲಸಕ್ಕಾಗಿ ಸಭೆ ನಡೆಸುತ್ತಿಲ್ಲ. ಇದು ಜನತೆಗಾಗಿ ಸಭೆ. ಅಧಿಕಾರಿಗಳಲ್ಲಿಯೂ ಜವಾಬ್ದಾರಿ ಕಾಣಿಸಬೇಕು ಎಂದರು.

ತಾಲೂಕಿನ ಆಡಳಿತ ಕೇಂದ್ರವಾದ ತಹಸೀಲ್‌ ಕಚೇರಿಯೇ ಕೊಳಕು ನಾರುತ್ತಿದೆ. ಉತ್ತಮ ಶೌಚಾಲಯವಿಲ್ಲ, ನೀರಿನ ವ್ಯವಸ್ಥೆಯಿಲ್ಲ. ಕಚೇರಿ ಆವರಣ ಕಸಮಯವಾಗಿದೆ. ಜನ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ತಹಸೀಲ್ದಾರರು ಏನು ಮಾಡುತ್ತಿದ್ದೀರಿ? ಎಂದು ಖಾರವಾಗಿ ಪ್ರಶ್ನಿಸಿದರು.

ಎಲ್ಲ ತಾಲೂಕು ಅಧಿಕಾರಿಗಳು ಕಡ್ಡಾಯವಾಗಿ ತಾಲೂಕು ಕೇಂದ್ರದಲ್ಲೇ ವಾಸಿಸಬೇಕೆಂದು ಬಹಳಷ್ಟು ಸಾರಿ ತಿಳಿಸಿದರೂ ಬಹುತೇಕ ಅಧಿಕಾರಿಗಳು ಬೀದರ್‌ನಲ್ಲಿಯೇ ವಾಸಿಸುತ್ತಿದ್ದಾರೆ. ಇದರಿಂದ ಕಚೇರಿ ಕೆಲಸಗಳಿಗೆ ತೊಡಕಾಗುತ್ತಿದೆ. ಎಲ್ಲರೂ ತಾಲೂಕು ಕೇಂದ್ರದಲ್ಲೇ ಉಳಿದು ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಔರಾದ್‌ (ಬಿ) ತಾಪಂ ಇಒ ಬೀರೇಂದ್ರಸಿಂಗ್‌ ಠಾಕೂರ್, ಕಮಲನಗರ ಇಒ ಮಾಣಿಕರಾ‍ವ್‌ ಪಾಟೀಲ್‌, ಔರಾದ್‌ (ಬಿ) ತಹಸೀಲ್ದಾರ ಮಲಶೆಟ್ಟಿ ಚಿದ್ರೆ, ಕಮಲನಗರ ತಹಸೀಲ್ದಾರ್‌ ಅಮಿತಕುಮಾರ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.