ರಮೇಶ್.ಕೆ.

ಕನ್ನಡಪ್ರಭ ವಾರ್ತೆ, ಬಂಗಾರಪೇಟೆ:

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಉದ್ದೇಶ ದೇಶದ ಪ್ರತಿಯೊಂದು ಗ್ರಾಮೀಣ ಮನೆಯಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವುದಾಗಿದೆ. ಮನೆ ಮನೆಗೆ ಹರ ಘರ್ ಜಲ್ ಎಂಬ ಘೋಷಣೆಯೊಂದಿಗೆ ಆರಂಭವಾದ ಈ ಯೋಜನೆ ಗ್ರಾಮೀಣ ಜನರ ಬದುಕಿನಲ್ಲಿ ಮಹತ್ತರ ಬದಲಾವಣೆ ತರಬೇಕಿತ್ತು. ಆದರೆ ತಾಲೂಕಿನ ಹುಣಸನಹಳ್ಳಿಯಲ್ಲಿ ಈ ಯೋಜನೆಯ ಕಾಮಗಾರಿ ನೆನಗುದಿಗೆ ಬಿದ್ದಿದೆ.ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಆರಂಭವಾದಾಗ ಸಾರ್ವಜನಿಕರು ಸಂತಸಪಟ್ಟಿದ್ದರು. ಆದರೆ ಕಾಮಗಾರಿ ಆರಂಭವಾಗಿ ವರ್ಷಕ್ಕೂ ಹೆಚ್ಚು ಕಾಲ ಕಳೆದರೂ ಪೂರ್ಣಗೊಂಡಿಲ್ಲ. ಪೈಪ್‌ಲೈನ್ ಅಳವಡಿಕೆಗಾಗಿ ಗ್ರಾಮದ ಹಲವು ಸಿಮೆಂಟ್ ರಸ್ತೆಗಳನ್ನು ಅಗೆದು ಹಾಳು ಮಾಡಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆಗಳನ್ನು ಮುಚ್ಚಿ ಸಮತಟ್ಟುಗೊಳಿಸಬೇಕು ಎಂಬ ಸ್ಪಷ್ಟ ನಿರ್ದೇಶನಗಳಿದ್ದರೂ ಗುತ್ತಿಗೆದಾರರು ಅದನ್ನು ಪಾಲಿಸಿಲ್ಲ. ಪರಿಣಾಮವಾಗಿ ಅಗೆದ ಸ್ಥಳಗಳಲ್ಲಿ ಮಳೆ ನೀರು ನಿಂತು ಕೆಸರುಗುಂಡಿ ನಿರ್ಮಾಣವಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೀವ್ರ ತೊಂದರೆ ಉಂಟಾಗಿದೆ.ಮಾತ್ರವಲ್ಲದೆ, ಮನೆಗಳಿಗೆ ಸಂಪರ್ಕ ಕಲ್ಪಿಸಲು ಅಳವಡಿಸಿರುವ ಕೊಳಾಯಿ ಪೈಪ್‌ಗಳ ಕಾಮಗಾರಿಯೂ ಅಪೂರ್ಣವಾಗಿದೆ. ಅನೇಕ ಮನೆಗಳ ಮುಂದೆ ಅಳವಡಿಸಿರುವ ನೀರಿನ ಮೀಟರ್ ಬಾಕ್ಸ್‌ಗಳು ಹಾಳಾಗಿದ್ದು, ಕೆಲವೆಡೆ ಪೈಪ್‌ಗಳು ಕಿತ್ತು ಹೋಗಿವೆ. ಇದರಿಂದ ಯೋಜನೆಯ ಗುಣಮಟ್ಟದ ಬಗ್ಗೆ ಗ್ರಾಮಸ್ಥರಲ್ಲಿ ಅನುಮಾನಗಳು ಮೂಡಿವೆ. ಕೋಟ್ಯಂತರ ರು. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಯಲ್ಲಿ ಇಂತಹ ನಿರ್ಲಕ್ಷ್ಯ ಕಂಡುಬರುವುದು ವಿಷಾದನೀಯ ಸಂಗತಿಯಾಗಿದೆ.ಜೆಜೆಎಂ ಯೋಜನೆಗಾಗಿ ನಿರ್ಮಿಸಲಾಗುತ್ತಿರುವ ನೀರಿನ ಟ್ಯಾಂಕ್ ಪ್ರದೇಶದಲ್ಲಿಯೂ ಅಗೆದ ಕಾಮಗಾರಿ ಅಪೂರ್ಣವಾಗಿಯೇ ಉಳಿದಿದೆ. ಸುರಕ್ಷತಾ ಕ್ರಮಗಳಿಲ್ಲದೆ ಬಿಟ್ಟಿರುವ ಕಾರಣ ಸ್ಥಳೀಯರಿಗೆ ಅಪಾಯದ ಭೀತಿ ಎದುರಾಗಿದೆ. ಕಳೆದ ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಯೋಜನೆಯ ಭವಿಷ್ಯದ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.ಮಾಹಿತಿ ಪ್ರಕಾರ, ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರಿಗೆ ಅಂತಿಮ ನೋಟಿಸ್ ನೀಡಿದ್ದರೂ ಯಾವುದೇ ಪರಿಣಾಮ ಕಂಡುಬಂದಿಲ್ಲ. ಅಧಿಕಾರಿಗಳ ಸೂಚನೆಗಳನ್ನೇ ಗುತ್ತಿಗೆದಾರರು ನಿರ್ಲಕ್ಷ್ಯ ಮಾಡುತ್ತಿರುವುದು ಆಡಳಿತ ವ್ಯವಸ್ಥೆಯ ಪರಿಣಾಮಕಾರಿತ್ವದ ಮೇಲೆಯೇ ಪ್ರಶ್ನೆ ಎಬ್ಬಿಸಿದೆ. ಸಾರ್ವಜನಿಕರ ಹಣದಿಂದ ನಡೆಯುವ ಯೋಜನೆಗಳಲ್ಲಿ ಜವಾಬ್ದಾರಿ ಮತ್ತು ಪಾರದರ್ಶಕತೆ ಅಗತ್ಯ. ಆದರೆ ಹುಣಸನಹಳ್ಳಿಯಲ್ಲಿ ನಡೆಯುತ್ತಿರುವ ಕಾಮಗಾರಿ ಈ ಎರಡೂ ಅಂಶಗಳ ಕೊರತೆಯನ್ನು ಎತ್ತಿ ತೋರಿಸುತ್ತಿದೆ.ಸರ್ಕಾರಗಳು ಜನರ ಶಾಶ್ವತ ಕಲ್ಯಾಣಕ್ಕಾಗಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುತ್ತವೆ. ಆದರೆ ಅವುಗಳ ಅನುಷ್ಠಾನ ಹಂತದಲ್ಲಿ ನಿರ್ಲಕ್ಷ್ಯ, ವಿಳಂಬ ಮತ್ತು ಕಳಪೆ ಕಾಮಗಾರಿಗಳು ಕಂಡುಬಂದರೆ ಯೋಜನೆಯ ಮೂಲ ಉದ್ದೇಶವೇ ಹಾಳಾಗುತ್ತದೆ. ಹುಣಸನಹಳ್ಳಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಅದರ ಜೀವಂತ ಉದಾಹರಣೆಯಾಗಿದೆ.ಆದ್ದರಿಂದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಕಳಪೆ ಕಾಮಗಾರಿ ಹಾಗೂ ವಿಳಂಬಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಂಡು, ಬಾಕಿ ಉಳಿದಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೋಟ್‌...ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಡುವೆ ಸಮನ್ವಯವಿಲ್ಲದ ಕಾರಣ ತಾಲೂಕಿನಲ್ಲಿ ಜೆಜೆಎಂ ಕಾಮಗಾರಿ ಕುಂಟುತ್ತಿದೆ, ಅಫೂರ್ಣವಾಗಿರುವ ಕಾಮಗಾರಿ ಪರಿಶೀಲಿಸಿ ಪೂರ್ಣಗೊಳಿಸಲು ವಿಶೇಷ ತಂಡ ರಚನೆ ಮಾಡಲಿ.

ಹುಣಸನಹಳ್ಳಿ ವೆಂಕಟೇಶ್. ದಲಿತ ಮುಖಂಡ.


----

1.ಓವರ್ ಟ್ಯಾಂಕ್ ನಿರ್ಮಾಣಕ್ಕೆ ಅಗೆದು ಬಿಟ್ಟಿರುವುದು.

2. ಉದ್ಘಾಟನೆಗೆ ಮೊದಲೇ ನೀರಿನ ಮೀಟರ್ ಹಾಳಾಗಿರುವುದು