ಸಾರಾಂಶ
ಅಕ್ರಮವಾಗಿ ವೈಟ್ ಬೋರ್ಡ್ ಕಾರುಗಳ ಬಾಡಿಗೆಗೆ ಕೊಡುವ ಖಾಸಗಿ ಸಂಸ್ಥೆಗಳ ಮೇಲೆ ದಾಳಿ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಲ್ಲಿ ಅನಧಿಕೃತವಾಗಿ ವೈಟ್ ಬೋರ್ಡ್, ಎಲೆಕ್ಟ್ರಿಕಲ್ ವಾಹನಗಳನ್ನು ಟ್ಯಾಕ್ಸಿಗಳಾಗಿ ಓಡಿಸುತ್ತಿರುವುದರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಯೋಗ ಕ್ಷೇಮಾಭಿವೃದ್ಧಿ ಸಂಘದವರು ನಗರದ ಜೆಎಲ್ ಬಿ ರಸ್ತೆಯಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿ ಬಳಿ ಬುಧವಾರ ಪ್ರತಿಭಟಿಸಿದರು.ಈ ವೇಳೆ ಸಂಘದ ಅಧ್ಯಕ್ಷ ಎಸ್. ನಾಗರಾಜ್ ಮಾತನಾಡಿ, ಅಕ್ರಮವಾಗಿ ವೈಟ್ ಬೋರ್ಡ್ ಕಾರುಗಳ ಬಾಡಿಗೆಗೆ ಕೊಡುವ ಖಾಸಗಿ ಸಂಸ್ಥೆಗಳ ಮೇಲೆ ಮಂಗಳವಾರ ದಾಳಿ ನಡೆಸಿ, ಆರ್.ಟಿ.ಓ ಅಧಿಕಾರಿಗಳಿಗೆ ದೂರು ಕೊಟ್ಟ ಬೆನ್ನಲ್ಲೇ ಹಲವು ಕಾರುಗಳನ್ನು ವಶಪಡಿಸಿಕೊಂಡರು. ಆದರೆ, ವೈಟ್ ಕಾರು ಮಾಲೀಕರು ರಾತ್ರೋರಾತ್ರಿ ಕಾರುಗಳನ್ನು ಬೇರೆಡೆ ಸಾಗಿಸಿದ್ದು, ಇದರಲ್ಲಿ ಆರ್.ಟಿ.ಓ ಅಧಿಕಾರಿಗಳ ಶಾಮೀಲು ಆಗಿದ್ದಾರೆ ಎಂದು ಆರೋಪಿಸಿದರು. ವೈಟ್ ಬೋರ್ಡ್ ಹೊಂದಿರುವ ವಾಹನಗಳನ್ನು ಕಮರ್ಷಿಯಲ್ ಆಗಿ ಬಳಸಿಕೊಂಡು, ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರು ಸರ್ಕಾರದಿಂದ ಲೈಸೆನ್ಸ್ ಪಡೆದಿದ್ದಾರೊ ಇಲ್ಲವೋ ಎಂದು ಪರಿಶೀಲಿಸಿ, ಅವರು ಲೈಸೆನ್ಸ್ ಪಡೆದಿರದಿದ್ದಲ್ಲಿ ತಕ್ಷಣ ಅವರ ಸಂಸ್ಥೆಯನ್ನು ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಸಂಘದ ಉಪಾಧ್ಯಕ್ಷ ಆರ್. ಪ್ರಭಾಕರ್, ಕಾರ್ಯದರ್ಶಿ ಕೆ.ಟಿ. ದಿವಾಕರ್, ಗಿರೀಶ್ ಮೊದಲಾದವರು ಇದ್ದರು.